Wednesday, June 24, 2009

ಕೆಲವು ಪ್ರಶ್ನೆಗಳು

ಬಹುಶ: ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಈ ರೀತಿಯ ತಿರುವುಗಳೂ ಬರುತ್ತವೇನೋ. ’ಮುಂದೇನು’ ಎನ್ನುವ ಪ್ರಶ್ನೆ ಒಮ್ಮೆಲೆ ಕಾಡತೊಡಗುತ್ತದೆ. ಈ "ಮುಂದೇನು" ಎನ್ನುವುದು ಕೇವಲ ಒಂದು ಪ್ರಶ್ನೆಯಾಗಿರುವುದಿಲ್ಲ. ಹಲವು ಪ್ರಶ್ನೆಗಳನ್ನು ಹೆಣೆದು ಕಟ್ಟಿದ ಒಂದು ಮಾಲೆಯಂತಿರುತ್ತದೇನೋ. ಈ "ಮುಂದೇನು" ಅನ್ನುವುದರಲ್ಲಿ "ನಾನು ಯಾರು?", "ನಾನೇನು ಮಾಡುತ್ತಿರುವೆ?", "ಯಾಕೆ ಹೀಗಾಗುತ್ತಿದೆ?", "ನಾನು ಎತ್ತ ಕಡೆ ಹೊರಟಿದ್ದೆ?", "ಈಗ ಯಾವ ದಿಕ್ಕಿನಲ್ಲಿದ್ದೇನೆ?" ಹೀಗೆ ಹಲವಾರು ಪ್ರಶ್ನೆಗಳು ಅಡಕವಾಗಿರಬಹುದು.

ಇಂದು ಯಾಕೋ ಒಮ್ಮೆಲೆ ಹಲವಾರು ಪ್ರಶ್ನೆಗಳು ನನ್ನನ್ನು ಕಾಡಹತ್ತಿವೆ. ಎಲ್ಲ ಪ್ರಶ್ನೆಗಳು ಒಮ್ಮೆಲೆ ಕಾಡಹತ್ತಿವೆಯೇ? ಅಥವಾ ಮನಸ್ಸಿನ ಯಾವುದೋ ಮೂಲೆಯಲ್ಲಡಗಿದ್ದ, ಹೊರ ಬರಲು ತವಕಿಸುತ್ತಿದ್ದ ಪ್ರಶ್ನೆಗಳಿಗೆ ಇಂದು ಒಂದು outlet ಸಿಕ್ಕಿದೆಯೇ? ಕಾಡುತ್ತಿರುವ ಅಸಂಖ್ಯಾತ ಪ್ರಶ್ನೆಗಳಲ್ಲಿ ಈ ಪ್ರಶ್ನೆಗಳೂ ಸೇರಿರಬಹುದು.

ಸಂಪದ.ನೆಟ್ ನ ಒಂದು ಲೇಖನದಲ್ಲಿ ಈ ಸಾಲನ್ನು ನೋಡಿದೆ. "ವಿಷಯ ಭೋಗಗಳನ್ನು ಅತಿಯಾಗಿ ಹಚ್ಚಿಕೊಳ್ಳದೆ, ಬ್ರಹ್ಮನ ಅರಿವಿಗಾಗಿ ಹೋರಾಡಿದರೆ ಶಾಶ್ವತ ಸಂತೋಷ ಸಿಗುತ್ತದೆ" ಎಂದು ಬರೆಯಲಾಗಿತ್ತು. ಬ್ರಹ್ಮನ ಅರಿವಿಗಾಗಿ ಹೋರಾಡುವುದು ಏತಕ್ಕೆ? ಹೋರಾಟದಲ್ಲಿ ಯಾವ ತೆರನ ಸಂತೋಷವಿರುತ್ತೆ? ಅಷ್ಟಾಗ್ಯೂ "ಸಂತೋಷ" ಎಂದರೇನು? "ದು:ಖ" ಎಂದರೇನು? ಈ ಎರಡೂ ಶಬ್ದಗಳು subjective ಆಗಿರುತ್ತವಲ್ಲವೇ? ಮೊನ್ನೆ ಪಾಕಿಸ್ತಾನ ವಿಶ್ವ ಕಪ್ ಗೆದ್ದಾಗ, ಆ ದೇಶದವರಿಗೆ ಆದದ್ದು ಸಂತೋಷ. ಆದರೆ ಅದೇ ಭಾವನೆ ಸೋತ ಶ್ರೀ ಲಂಕೆಯವರಿಗೆ ಇರಲು ಸಾಧ್ಯವಿಲ್ಲ. ಅವರಿಗೆ ಸಿಕ್ಕಿದ್ದು ದು:ಖ. ಹಾಗಾದರೆ "ಸಂತೋಷ" ಹಾಗೂ "ದು:ಖ" universal truths ಆಗಲು ಸಾಧ್ಯವಿಲ್ಲ ಎಂದಾಯಿತೆ? ಇದೇ ತರ್ಕ ಬಳಸಿದರೆ, ಯಾವುದೋ ಒಂದು ವಿಷಯದಲ್ಲಿ ನನಗೆ ಸಿಕ್ಕ ಸಂತೋಷ, ಮತ್ತೊಬ್ಬನ ದು:ಖಕ್ಕೆ ಕಾರಣವಾಗಿರಬಹುದಲ್ಲವೆ? ಹಾಗಾದರೆ ಮತ್ತೊಬ್ಬನ ನೋವಿಗೆ ಕಾರಣವಾದ ನನ್ನ ಸಂತೋಷ, ನಿಜವಾದ ಸಂತೋಷವೆ? ಹಿಂದೆ ಒಂದು ಲೇಖನದಲ್ಲಿ ಓದಿದ್ದೆ. Darkness is not an entity, it is the absence of light ಎಂದು. ಹಾಗಿದ್ದರೆ "ದು:ಖ" ಎನ್ನುವುದು, "ಸಂತೋಷ" ದ absence ಹಾಗೂ vice versa ಎನ್ನಬಹುದೇ? ಇದು ಅತ್ಯಂತ ಅತಾರ್ಕಿಕ ವಾದ ಎಂದು ನನಗನಿಸುತ್ತದೆ. ಅಥವಾ ಅತ್ಯಂತ nonsensical ವಾದ ಅನ್ನಬಹುದು.

ಒಳ್ಳೆಯತನ ಎಂದರೇನು? ದುಷ್ಟತನ ಎಂದರೇನು? ಇವು ನನ್ನನ್ನು ಕಾಡುತ್ತಿರುವ ಇನ್ನೆರಡು ಪ್ರಶ್ನೆಗಳು. ಆರ್ಥಿಕವಾಗಿ ಅತ್ಯಂತ ದು:ಸ್ಥಿತಿಯಲ್ಲಿದ್ದಾಗ ಒಬ್ಬ ಆತ್ಮೀಯರಿಂದ ಹತ್ತು ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದ್ದೆ. ಆರು ವರ್ಷಗಳ ಹಿಂದಿನ ಮಾತಿದು. ನಂತರ ಚೂರು ಪರಿಸ್ಥಿತಿ ಸುಧಾರಿಸಿತು. ಕಷ್ಟ ಪಟ್ಟೆ. ಸಾಕಷ್ಟು ಕೆಲಸ ಮಾಡಿದೆ. ಹಣವನ್ನೂ ಗಳಿಸಿದೆ. ಶ್ರಮದಿಂದ ಉಳಿಸಿದ ಹಣವನ್ನು ಶೇರು ಮಾರುಕಟ್ಟೆಯಲ್ಲಿ ತೊಡಗಿಸಿದೆ. ಆರೇ ತಿಂಗಳಲ್ಲಿ ಎಲ್ಲವನ್ನೂ ಕಳೆದುಕೊಂಡೆ. ಆದರೆ ಈ ಆರು ವರ್ಷಗಳಲ್ಲಿ, ಕೈ ತುಂಬಾ ಹಣ ಇದ್ದ ಸಮಯದಲ್ಲೂ ಕೂಡ, ಪಡೆದುಕೊಂಡಿದ್ದ ಸಾಲವನ್ನು ಮರಳಿಸಬೇಕೆಂಬುದು ಯಾಕೋ ಹೊಳೆಯಲೇ ಇಲ್ಲ. ಹತ್ತು ಸಾವಿರ ರೂಪಾಯಿಗಳನ್ನು ಮರಳಿಸುವುದು ದೊಡ್ಡ ವಿಷಯವೂ ಆಗಿರಲಿಲ್ಲ. ಆದರೆ ಪಡೆದುಕೊಂಡ ಆ ಸಾಲದ ಬಗ್ಗೆ ಒಮ್ಮೆಯೂ ಅವರ ಜೊತೆ ನಾನು ಮಾತಾಡಲಿಲ್ಲ. ಎಂತಹ ದುಷ್ಟತನ ಅಲ್ಲವೆ? ಕೃತಘ್ನತೆ ಅಲ್ಲವೆ?

ನಾಳೆ, ಇಲ್ಲ ಇನ್ನೈದು ವರ್ಷಗಳ ನಂತರವಾದರೂ ಆ ಸಾಲವನ್ನು ತೀರಿಸಬಹುದು. ಆದರೆ ಋಣವನ್ನು ತೀರಿಸಲಿಕ್ಕೆ ಸಾಧ್ಯವೆ? ಇಷ್ಟು ದಿನ ಯಾಕೆ ಸಾಲದ ಬಗ್ಗೆ ಅವರೊಂದಿಗೆ ಮಾತಾಡಲಿಲ್ಲ ಎನ್ನುವುದಕ್ಕೆ ನನ್ನ ಬಳಿ ನನ್ನದೇ ಆದ ನೂರಾರು justifications ಇರಬಹುದು. ಇವೆ. ಯಾರಾದರೂ ಈ ವಿಷಯದಲ್ಲಿ ಪ್ರಶ್ನೆ ಕೇಳಿದರೆ, ಅವರಿಗೆ ನನ್ನ ಎಲ್ಲ justifications ಗಳನ್ನು ತಿಳಿಸಿ, "ದುಷ್ಟ" ಎಂಬ ಹಣೆಪಟ್ಟಿ ತಾಗದಂತೆ ಬಚಾವಾಗಬಹುದೇನೋ ನಾನು. ಆದರೆ ನಾನೊಬ್ಬ ದುಷ್ಟ ಅನ್ನುವುದು ಸುಳ್ಳಾಗುತ್ತದೋ?

ನನಗೆ ಸಾಲ ಕೊಟ್ಟ ಆತ್ಮೀಯರ ಮನೆಯಲ್ಲಿ, ಕೊಟ್ಟ ಸಾಲದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಗೊತ್ತಿದೆ. ಆದರೆ ಅವರು "ನಾನು ಕೊಟ್ಟ ಸಾಲದ ಹಣ ನನಗೆ ಮರಳಿ ಸಿಕ್ಕಿದೆ" ಎಂದು ಸುಳ್ಳು ಹೇಳಿ ಅವರ ಮನೆಯ ಜನರ ಮುಂದೆ ನನ್ನನ್ನೊಬ್ಬ ಒಳ್ಳೆಯ ವ್ಯಕ್ತಿಯ ಹಾಗೆ ಬಿಂಬಿಸಿದ್ದಾರೆ. ಇದನ್ನು ಅವರ ಒಳ್ಳೆಯತನ ಎನ್ನಲೆ? ಹೌದು, ನನ್ನ ಮಟ್ಟಿಗಂತೂ ಅದು ಒಳ್ಳೆಯತನ. ಆದರೆ ಅವರ ಮನೆಯವರ ವಿಷಯದಲ್ಲಿ? ನಾಳೆ ಅವರ ಮನೆಯವರಿಗೆ "ಕೊಟ್ಟ ಸಾಲದ ಹಣ ವಾಪಸ್ಸಾಗಿಯೇ ಇಲ್ಲ" ಎನ್ನುವುದು ಗೊತ್ತಾದರೆ? ಆಗ ಆ ಆತ್ಮೀಯ ವ್ಯಕ್ತಿ, ಅವರ ಮನೆಯಲ್ಲಿಯೇ ಒಬ್ಬ ಸುಳ್ಳುಗಾರನಾಗುವುದಿಲ್ಲವೆ? ಅಂದರೆ, ಒಬ್ಬ ವ್ಯಕ್ತಿ ನನಗೆ ಒಳ್ಳೆಯದನ್ನು ಮಾಡಿದಾಗಲೂ ಕೂಡ, ಇನ್ನೊಬ್ಬರ ದೃಷ್ಟಿಯಲ್ಲಿ ಆತ ಕೆಟ್ಟವನೇ ಆಗುವ ಸಾಧ್ಯತೆಗಳಿವೆ ಎಂದಾಯಿತಲ್ಲ. ಏಕೆ ಹೀಗೆ?

ಒಬ್ಬ ವ್ಯಕ್ತಿಗೆ ಒಳ್ಳೆಯದನ್ನೇ ಮಾಡಿದ್ದೇನೆ ಅಂದುಕೊಳ್ಳಿ. ನಾನು ಮಾಡಿದ ಆ ಕೆಲಸ ಆ ವ್ಯಕ್ತಿಯ ಒಳಿತಿಗಾಗಿ ಎಂದೇ ಮನಸಾರೆ ನಂಬಿರುತ್ತೇನೆ. ಆದರೆ ಆ ವ್ಯಕ್ತಿಯ ಮನೆಯವರಿಗೆ ನಾನು ಮಾಡಿದ ಆ ಕೆಲಸ ಇಷ್ಟವೇ ಆಗಲಿಲ್ಲ ಅಂದರೆ? ನನ್ನ intent ಏನೋ ಒಳ್ಳೆಯದೇ ಆಗಿತ್ತು. ಆದರೆ ನಾನು ಮಾಡಿದ ಕೆಲಸ ಮಾತ್ರ ಅವರಿಗೆ ಸರಿ ಎಂದು ತೋಚಲಿಲ್ಲ. ಇಂತಹ ಒಂದು ಪರಿಸ್ಥಿತಿಯಲ್ಲಿ ಒಳ್ಳೇತನ ಯಾವುದು? ದುಷ್ಟತನ ಯಾವುದು ಎಂಬ ಪ್ರಶ್ನೆಗಳು ಮೂಡುತ್ತವೆ.

"ಸಂತೋಷ-ದು:ಖ", "ಒಳ್ಳೇತನ-ದುಷ್ಟತನ" ಇವ್ಯಾವುದೂ universal ಅಲ್ಲವೇ? ಹಾಗಾದರೆ ಮುಂದೇನು?

ಪ್ರಶ್ನೆಗಳ ಸರಮಾಲೆಗಳು. ಉತ್ತರ ಕಂಡುಹಿಡಿಯಬೇಕಾಗಿದೆ. ಬೆಳೆಯಬೇಕಾಗಿದೆ.

Thursday, April 30, 2009

ಹೀಗೊಂದು ಬಲಾತ್ಕಾರದ ಕತೆ.. Rape!! they cried..


ಬಲಾತ್ಕಾರ ಅತ್ಯಂತ ಹೀನಾತಿಹೀನ ಅಪರಾಧ ಅನ್ನುವುದರಲ್ಲಿ ಸಂಶಯವೇ ಇಲ್ಲ. ಬಲಾತ್ಕಾರದಂತಹ ಹೇಯ ಕೃತ್ಯವನ್ನೆಸಗಿದ ವ್ಯಕ್ತಿಗೆ, ಭಾರತೀಯ ಪೀನಲ್ ಕೋಡ್ ನ ಸೆಕ್ಷನ್ ೩೭೫ ರ ಅನ್ವಯ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಹೆಂಗಸೊಬ್ಬಳ ಅನುಮತಿ ಇಲ್ಲದೇ ಅವಳನ್ನು ಸಂಭೋಗಕ್ಕೀಡು ಮಾಡುವುದು ರೇಪ್/ ಬಲಾತ್ಕಾರ ಎನಿಸಿಕೊಳ್ಳುತ್ತದೆ. {Rape means an unlawful intercourse done by a man with a woman without her valid consent. (Section 375 of the Indian Penal Code)} ಅದೇ ಕಾನೂನಿನ ಅನ್ವಯ, ಈ ಆರು ಪರಿಸ್ಥಿತಿಗಳಲ್ಲಿ ವ್ಯಕ್ತಿಯೊಬ್ಬನು ಹೆಂಗಸೊಬ್ಬಳ ಜೊತೆ ಸಂಭೋಗವನ್ನು ನಡೆಸಿದರೆ ಅದು ’ಬಲಾತ್ಕಾರ’ ಎನಿಸಿಕೊಳ್ಳುತ್ತದಂತೆ.

೧. ಅವಳಿಗೆ ಇಚ್ಛೆ ಇಲ್ಲದಿದ್ದಾಗ.
೨. ಅವಳ ಅನುಮತಿ ಇಲ್ಲದಿದ್ದಾಗ.
೩. ಆಕೆಗೆ ಅಥವಾ ಆಕೆಯ ಇಷ್ಟದ ವ್ಯಕ್ತಿಗೆ ಜೀವ ಭಯ ಅಥವಾ ಬೇರೆ ಯಾವುದೇ ಥರದ ಬೆದರಿಕೆಯನ್ನೊಡ್ಡಿ, ಆಕೆಯ ಅನುಮತಿಯನ್ನು ಬಲವಂತವಾಗಿ
ಪಡೆದು, ಅವಳ ಜೊತೆ ಸಮಾಗಮ ಕ್ರಿಯೆಯನ್ನು ಮಾಡಿದಾಗ.
೪. ಸ್ತ್ರೀಯೊಬ್ಬಳು ಇನ್ನೊಬ್ಬ ವ್ಯಕ್ತಿಯ ಹೆಂಡತಿ ಎಂದು ತಿಳಿದಿದ್ದಾಗಲೂ, ಮತ್ತು ಆ ಸ್ತ್ರೀ, ಆ ಪುರುಷನನ್ನು ತನ್ನ 'lawful' ಗಂಡ ಎಂದು ಭಾವಿಸಿ, ಸಮಾಗಮ
ಕ್ರಿಯೆಗೆ ತನ್ನ ಅನುಮತಿಯನ್ನಿತ್ತಾಗ.
೫. ಸ್ತ್ರೀಯೊಬ್ಬಳು ಲೈಂಗಿಕ ಸಮಾಗಮಕ್ಕೆ ಅನುಮತಿ ನೀಡುವ ಸಮಯದಲ್ಲಿ ಆಕೆಯ ಚಿತ್ತ ಭ್ರಮಣೆಯಾಗಿದ್ದರೆ ಅಥವಾ ಅಥವಾ ಬಲಾತ್ಕಾರ ಎಸಗುವ
ಪುರುಷನು ಸ್ವತಃ ಅಥವಾ ಇನ್ಯಾವುದೇ ವ್ಯಕ್ತಿಯ ಮೂಲಕ ಅವಳಿಗೆ ಮತ್ತು ಬರೆಸುವ, ಬುದ್ಧಿ ಮಂಕು ಮಾಡುವ (stupefying) , ಅನಾರೋಗ್ಯಕರ
(unwholesome) ವಸ್ತುಗಳನ್ನು ನೀಡಿದಾಗ, ಆಕೆ ಅನುಮತಿ ನೀಡಿದಾಗ, ಆಕೆಯ ಜೊತೆ ಏನಾಗಬಹುದು ಎಂಬ ಪರಿವೆಯೇ ಆಕೆಗೆ ಇಲ್ಲದಂತಾಗಿ, ಆಕೆ
ಅನುಮತಿ ನೀಡಿ, ಆ ಪುರುಷ ಆಕೆಯ ಜೊತೆ ಸಮಾಗಮ ನಡೆಸಿದರೆ.
೬. ಮಹಿಳೆಯ ವಯಸ್ಸು ೧೬ ಕ್ಕಿಂತ ಕಡಿಮೆ ಇದ್ದರೆ (ಅವಳ ಅನುಮತಿ ಇರಲಿ ಆಥವಾ ಇಲ್ಲದಿರಲಿ).

ಇಷ್ಟೇ ಅಲ್ಲದೇ ಇನ್ನೂ ಕೆಲವು ಉಪ-ಕಾನೂನುಗಳು, ನಿಯಮಗಳು, ವಿವರಣೆಗಳು ಇವೆ. (ಉದಾಹರಣೆಗೆ- ವಿವಾಹದಲ್ಲಿ ಬಲಾತ್ಕಾರಕ್ಕೆ ಸಂಬಂಧಿಸಿದ ಕಾನೂನು)

ಬಲಾತ್ಕಾರ ಎಂಬ ಅಪರಾಧವೆಸಗಿದ ವ್ಯಕ್ತಿಗೆ ಕನಿಷ್ಟ ೭ ವರ್ಷಗಳ ಜೈಲುವಾಸ ಖಚಿತ. ಕೆಲವು ಕೇಸ್ ಗಳಲ್ಲಿ ಮರಣೆ ದಂಡನೆಯೂ ಆಗಬಹುದು.ಅತ್ಯಂತ ಕಠಿಣವಾದ ಈ ಕಾನೂನಿನಲ್ಲಿ ಕೇವಲ ಒಂದು ತಪ್ಪಿದೆ. ನಮ್ಮ ದೇಶದ ಕಾನೂನಿನನ್ವಯ, ’ಬಲಾತ್ಕಾರ’ ನಡೆದಿದೆ ಎಂದು ಹೇಳಲು ಯಾವುದೇ ಸಾಕ್ಷಿ ಬೇಕಾಗಿಲ್ಲ. ಅಥವಾ "ನಡೆದ ಲೈಂಗಿಕ ಸಮಾಗಮಕ್ಕೆ ತನ್ನ ಅನುಮತಿ ಇರಲಿಲ್ಲ" ಎಂದು ಮಹಿಳೆಯು ಹೇಳಿಕೆಯನ್ನು ನೀಡಿದರೆ ಸಾಕು, ಪುರುಷ ನೇರ ಜೈಲಿಗೆ.

ಟಿ.ಐ.ಎಸ್.ಎಸ್ ಬಲಾತ್ಕಾರ ಕಾಂಡ, ನಡೆದ ಕತೆ:

ಅಮೇರಿಕೆಯ ಅನಿವಾಸಿ ಭಾರತೀಯ ಯುವತಿಯೊಬ್ಬಳು (ಹೆಸರು ತಿಳಿದಿಲ್ಲ. ಯಾವುದೇ ಪತ್ರಿಕೆ ಅಥವಾ ಟಿ.ವಿ ಚಾನೆಲ್ಲುಗಳು ಆಕೆಯ ಹೆಸರನ್ನು ಹೇಳಿಲ್ಲ. ಆಕೆಯ ಮಾನ ಹೋಗಬಹುದೆಂಬ ವಿಶೇಷ ಕಾಳಜಿಯಂತೆ) ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಾಯನ್ಸಸ್ ನ ವಿದ್ಯಾರ್ಥಿನಿ. ಕೆಲವು ದಿನಗಳ ಹಿಂದೆ ಒಂದು ಶನಿವಾರ, ಆಕೆ ತನ್ನ ಹಾಸ್ಟೆಲ್ ನ ಗೆಳತಿಯಾದ ಎನಿ ಬ್ರೌನ್ ಎಂಬಾಕೆಯ ಜೊತೆ ತಡರಾತ್ರಿ, ದೇವನಾರ್ ಎಂಬಲ್ಲಿರುವ ಕೆಫೇ ಎಕ್ಸ್ ಓ ಎಂಬ ಹೋಟಲ್ಲಿಗೆ ಪಾರ್ಟಿ ಮಾಡಲು ಹೋಗಿದ್ದಳಂತೆ. ಅಲ್ಲಿ ಎನಿ ಬ್ರೌನಳ ಐದು ಜನ ಗೆಳೆಯರು ಭೇಟಿಯಾದರಂತೆ. ವಿನಮ್ರ ಸೋನಿ, ಜಸ್ ಕರಣಸಿಂಗ್ ಭುಲ್ಲರ್, ಹರ್ಷವರ್ಧನ್, ಅನಿಶ್ ಬೋರಕಟ್ಕಿ, ಹಾಗೂ ದರಾಯಸ್ ಕೊಲಾಬಾವಾಲ ಎಂಬ ಈ ಹುಡುಗರು (ಎಲ್ಲರ ಹೆಸರು ಎಲ್ಲ ಪತ್ರಿಕೆಗಳಲ್ಲಿ ದಪ್ಪಕ್ಷರಗಳಲ್ಲಿ ಬಂದಿವೆ. ಇವೆಂಚುವಲಿ, ಅವರು ನಿರಪರಾಧಿ ಎಂದು ಸಾಬೀತಾದರೆ, ಅವರ ಮಾನಹಾನಿಯ ಬಗ್ಗೆ ಕಿಂಚಿತ್ ಪರಿವೆ ಯಾವನಿಗೂ ಇಲ್ಲ. ವಾಹ್ ರೆ ಮೀಡಿಯಾ!!). ನೇರವಾಗಿ ಪರಿಚಯವೇ ಇಲ್ಲದ ಆ ಹುಡುಗರು, ಅವಳಿಗೆ ಅಗತ್ಯಕ್ಕಿಂತ ಹೆಚ್ಚು ಮದ್ಯವನ್ನು ಕುಡಿಸಿದಂತೆ. ನಶೆ ಏರಿದಾಗ ಆಕೆ ತನ್ನ ಬಾಯ್ ಫ್ರೆಂಡ್ ನನ್ನು ಭೇಟಿಯಾಗುವ ಇಚ್ಛೆಯನ್ನು ಜಾಹೀರುಪಡಿಸಿದಳಂತೆ. ಆ ಹುಡುಗರು ಅವಳನ್ನು ಡ್ರಾಪ್ ಮಾಡ್ತೀವಿ ಬಾ ಅಂತ ಕರೆದೊಯ್ದರಂತೆ. ಪರಿಚಯವೇ ಇಲ್ಲದ ಹುಡುಗರ ಜೊತೆ ಈಯಮ್ಮ ನಡೆದಳಂತೆ. (ಆ ಹುಡುಗರ ಪರಿಚಯವಿದ್ದ ಎನಿ ಬ್ರೌನ್ ಎಂಬ ಹುಡುಗಿ ನಾನು ಬರಲಾರೆ ಎಂದು ಹೇಳಿ ಹಾಸ್ಟೆಲ್ಲಿಗೆ ಮರಳಿದಳಂತೆ). ಈ ಹುಡುಗರು ಅವಳನ್ನು ನೇರವಾಗಿ ಅಂಧೇರಿಯ ಸಾತ್ ಬಂಗಲೆಯಲ್ಲಿರುವ ತಮ್ಮ ಗೆಳೆಯನೊಬ್ಬನ (ಕುಂದನ್ ಗೋಹೇನ್ ಎಂದು ಆತ ಹೆಸರು) ಫ್ಲ್ಯಾಟಿಗೆ ಕರೆದೊಯ್ದರಂತೆ. ಇವಳು ಅಲ್ಲಿಗೂ ಹೋದಳಂತೆ. ಅಲ್ಲಿ ಇವಳಿಗೆ ಭಯ ಶುರುವಾಯಿತಂತೆ. ಬಾಥ್ ರೂಮಿಗೆ ಹೋಗಿ ಚಿಲಕ ಹಾಕಿಕೊಂಡು ತನ್ನ ಬಾಯ್ ಫ್ರೆಂಡ್ ಗೆ ಫೋನ್ ಮಾಡಿದಳಂತೆ, ’ನಾನು ತೊಂದರೆಯಲ್ಲಿದ್ದೇನೆ ಬೇಗ ಬಾ’ ಅಂತ. ಆತ ಕ್ಯಾರೇ ಮಾಡಲಿಲ್ಲವಂತೆ. ನಶೆಯಲ್ಲಿದ್ದಳಲ್ಲಾ, ಹೀಗಾಗಿ ೧೦೦ ಅಂತ ಒಂದು ನಂಬರ್ರಿದೆ, ಅದನ್ನು ಡಾಯಲ್ ಮಾಡಿದರೆ, ನೇರ ಕರೆ ಪೋಲೀಸರಿಗೆ ಹೋಗುತ್ತದೆ ಎನ್ನುವುದನ್ನು ಮರೆತಿರಬೇಕು ಪಾಪ. ಇರಲಿ. ಹೊರಬಂದ ಆಕೆ ಪ್ರಜ್ಞೆ ತಪ್ಪಿಬಿದ್ದಳಂತೆ. ಬೆಳಿಗ್ಗೆ ಎಚ್ಚರವಾದಾಗ
ಮೈ ಮೇಲೆ ಇದ್ದ ಕನಿಷ್ಟ ಬಟ್ಟೆಗಳನ್ನು ನೋಡಿ ತನ್ನ ಜೊತೆ ಬಲಾತ್ಕಾರವಾಗಿರಬಹುದು ಎನ್ನುವ ಸಂಶಯ ಬಂತಂತೆ. ಮುಂಜಾನೆ ಎದ್ದಾಗ, ಆ ಪುಂಡ ಹುಡುಗರು ಅವಳಿಗೆ ಕಾಂಟ್ರಾಸೆಪ್ಟಿವ್ ಮಾತ್ರೆಯನ್ನೂ ನೀಡಿದರಂತೆ. ಅಲ್ಲಿಂದ ನೇರ ಆಕೆ ತನ್ನ ಹಾಸ್ಟೆಲಿಗೆ ಬಂದು ಮಲಗಿದಳಂತೆ. ರಾತ್ರಿ ತನ್ನ ಗೆಳತಿ ಎನಿಗೆ ನಡೆದಿದ್ದನ್ನು (ನಡೆದಿರಬಹುದಾದದ್ದನ್ನು) ಸವಿಸ್ತಾರವಾಗಿ ಹೇಳಿದಳಂತೆ. ಆಗ ಎನಿ ನೀಡಿದ ಸಲಹೆಯ ಪ್ರಕಾರ ಹಾಸ್ಟೆಲಿನ ವಾರ್ಡನ್ ಗೆ ಎಲ್ಲಾ ತಿಳಿಸಿದಳಂತೆ. ಮಂಗಳವಾರ ಪೋಲೀಸರ ಬಳಿ ಎಫ್. ಐ. ಅರ್ ದರ್ಜು ಮಾಡಲಾಯ್ತಂತೆ.

ನಂತರ ಶುರುವಾಗಿತ್ತು ಪೋಲೀಸರ ಯೂಶುವಲ್ ಕವಾಯತ್ತು. ಮೀಡಿಯಾ ಸರ್ಕಸ್ಸು. ಕಂಡಕಂಡವರೆಲ್ಲಾ ಆ ಹುಡುಗಿಯನ್ನು ವಿಕ್ಟಿಂ ಅಂದು ಅನುಕಂಪದ ಮಳೆಯನ್ನೇ ಸುರಿದರು. ಆ ಹುಡುಗರ ಮೃಗೀಯ ವರ್ತನೆಯ ಖಂಡನೆಗಳಾದವು. ಅವರಿಗೆ ಎಂತಹ ಶಿಕ್ಷೆಯನ್ನು ಕೊಡಬೇಕು ಎಂಬುದರ ಬಗ್ಗೆ ಹಲವು ಲೇಖನಗಳು ಬಂದವು. ಆಜ್ ತಕ್ ಎಂಬ ಮಹಾನ್ ಚಾನೆಲ್ಲಿನಲ್ಲಿ ಒಂದು ಗಂಟೆಯ ಪ್ರೈಮ್ ಟೈಂ ಕಾರ್ಯಕ್ರಮವೂ ಆಯಿತು. ಅಷ್ಟರಲ್ಲಿ ಯಾರೋ ಮಹಾತ್ಮನೊಬ್ಬ, ಆರ್ಕುಟ್. ಫೇಸ್ ಬುಕ್ ನಲ್ಲಿ ಎಂ.ಫಿಲ್ ನಂತಹ ಸಂಶೋಧನೆ ನಡೆಸಿ, ಆ ಹುಡುಗರು ಅಂಥವರಲ್ಲ, ಒಳ್ಳೆಯವರು, ಅವರ ಮಧ್ಯೆ ನಡೆದದ್ದು ಅನುಮತಿ ಬದ್ಧ ಸಮಾಗಮ (ಕನ್ಸೆನ್ಶುವಲ್ ಸೆಕ್ಸ್) ಇರಬೇಕು ಎಂಬ ಲೇಖನ ಬರೆದುಬಿಟ್ಟ. ಅದನ್ನು ಓದಿದ ಮಹಿಳಾ ಮಣಿಯೊಬ್ಬಳು ’ಹಾಗೆಲ್ಲ ಬರೆಯಬಾರದು, ಅಕ್ಯೂಸ್ಡ್ ಗಳ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆದರೆ, ಆ ಕೇಸ್ ಬಲಹೀನವಾಗಬಹುದು, ವಿಕ್ಟಿಂ ಬಗ್ಗೆ ಜನರಿಗೆ ಸಹಾನುಭೂತಿ ಇರದು’ ಎಂದು ಪ್ರತಿ ಲೇಖನ ಬರೆದಳು. ಶುರುವಾಯಿತು ಮೇಲ್ ಶೌವಿನಿಸ್ಟ್ ಪುರುಷ ಹಾಗೂ ಫೆಮಿನಿಸ್ಟ್ ಮಹಿಳೆಯರ ಮಧ್ಯ ಒಂದು ಹೋರಾಟ. ಇನ್ನೂ ನಡೆಯುತ್ತಲೇ ಇದೆ.

ಈ ಒಂದು ಘಟನೆ ಹಾಗೂ ಅದರ ನಂತರದ ಆಗುಹೋಗುಗಳನ್ನು ಗಮನಿಸಿದಾಗ, ಕಂಡು ಬರುವ ಒಂದು ವಿಷಯವೆಂದರೆ ಭಾರತದ ಇತರ ಕಾನೂನುಗಳಂತೆ ಈ ಕಾನೂನನ್ನೂ ಕೂಡ ಸುಲಭವಾಗಿ ದುರುಪಯೋಗ ಮಾಡುವ ಸಂಭವವಿದೆ. ಮೊಟ್ಟ ಮೊದಲು ರೇಪ್ ಎಂಬುದರ ಕಾನೂನಿ ಪರಿಭಾಷೆಯನ್ನು ನೋಡಿದರೆ, Rape means an unlawful intercourse done by a man with a woman without her valid consent ಎಂದು ಹೇಳಲಾಗಿದೆ. ಇದರಲ್ಲಿ ಒಂದು catch ಇದೆ. ಸಮಾಗಮ ಕ್ರಿಯೆಯಲ್ಲಿ ಮಹಿಳೆಯ consent ಇದ್ದರೆ ಮಾತ್ರ ಸಾಕಾಗುವುದಿಲ್ಲ. ಆ consent, valid ಆಗಿರಬೇಕು. ಅಂದರೆ ಮಹಿಳೆಯೊಬ್ಬಳ ಜೊತೆ ಲೈಂಗಿಕ ಸಮಾಗಮ ಮಾಡುವಾಗ ಕೇವಲ ಅವಳ ಒಪ್ಪಿಗೆ ಇದ್ದರೆ ಸಾಕಾಗಲಾರದು. ಆ ಒಪ್ಪಿಗೆ Valid ಆಗಿರಬೇಕು. ಆ ಒಪ್ಪಿಗೆ ಯಾವ sense ನಲ್ಲಿ valid ಆಗಿರಬೇಕೆಂಬ ಚರ್ಚೆ ಇಲ್ಲ. ಅರ್ಥವಾಗಲಾರದ ಕಾನೂನು ಇದು.

ಇನ್ನು ಬಲಾತ್ಕಾರದ ಪರಿಭಾಷೆಯ ನಾಲ್ಕನೇ ಅಂಶವನ್ನು ನೋಡಿ. " ಸ್ತ್ರೀಯೊಬ್ಬಳು ಇನ್ನೊಬ್ಬ ವ್ಯಕ್ತಿಯ ಹೆಂಡತಿ ಎಂದು ತಿಳಿದಿದ್ದಾಗಲೂ, ಮತ್ತು ಆ ಸ್ತ್ರೀ, ಆ ಪುರುಷನನ್ನು ತನ್ನ 'lawful' ಗಂಡ ಎಂದು ಭಾವಿಸಿ, ಸಮಾಗಮ ಕ್ರಿಯೆಗೆ ತನ್ನ ಅನುಮತಿಯನ್ನಿತ್ತಾಗ, ನಡೆದ ಲೈಂಗಿಕ ಸಮಾಗಮವೂ ಬಲಾತ್ಕಾರ ಎನಿಸುತ್ತದೆ" ಎಂದು ಹೇಳುತ್ತದೆ ನಮ್ಮ ಕಾನೂನು. ನನ್ನ ಪ್ರಕಾರ ಅತ್ಯಂತ ಹಾಸ್ಯಾಸ್ಪದ ಪರಿಭಾಷೆ ಇದು. ಪರ ಪುರುಷನನ್ನು ತನ್ನ lawful ಗಂಡ ಎಂದು ಒಬ್ಬ ಮಹಿಳೆ ಭಾವಿಸುವುದು ಹೇಗೆ? ಅಂದರೆ ಅತ್ಯಂತ ಫೆಮಿನಿಸ್ಟ್ (ಸೆಕ್ಸಿಸ್ಟ್) ಕಾನೂನು ಇದಾಗಿದೆ. ಹೀಗಾಗಿ ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳಬೇಕೆಂದು ಒಬ್ಬ ಮಹಿಳೆಯು ಪಣ ತೊಟ್ಟರೆ, ಪುರುಷನೊಬ್ಬನನ್ನು ಜೈಲಿಗಟ್ಟುವುದು ಅತ್ಯಂತ ಸುಲಭ.

ಮೇಲಿನ ಟಿ.ಐ.ಎಸ್.ಎಸ್ ಕೇಸಿನಲ್ಲೂ ಕೂಡ ಹೀಗೆಯೇ ಆಗಿರಬಹುದಾದ ಸಂಭವವಿದೆ. ಬಲಾತ್ಕಾರ ಎಂದ ತಕ್ಷಣ ನಮ್ಮ ಸಮಾಜ ಹಿಂದೆ ಮುಂದೆ ನೋಡದೆ ಮಹಿಳೆಯನ್ನು ಪಾಪದ ವಿಕ್ಟಿಂ ಎಂಬ ಕರುಣಾಪೂರಿತ ದೃಷ್ಟಿಯಿಂದ ನೋಡುತ್ತದೆ. ಆದರೆ ಅವಳು ಸುಳ್ಳು ಹೇಳಿರಬಹುದು ಎಂಬ ಕಿಂಚಿತ್ ಯೋಚನೆಯನ್ನೂ ನಾವ್ಯಾರೂ ಮಾಡುವುದಿಲ್ಲ.ಯಾರ ಮೇಲೆ ಆಕೆ ಆರೋಪವನ್ನು ಹೋರಿಸುತ್ತಾಳೋ, ಆ ಪುರುಷರು ನಮ್ಮ ದೃಷ್ಟಿಯಲ್ಲಿ ಮಹಾ ನೀಚರಾಗಿ ಕಂಡುಬರುತ್ತಾರೆ. ಕೇಸಿನಲ್ಲಿ ನಿಜವಾಗಿ ನಡೆದದ್ದೇನು ಎಂಬ ಯೋಚನೆಯನ್ನೂ ಮಾಡದೇ ನಾವೊಂದು judgement ಗೆ ಬಂದುಬಿಟ್ಟಿರುತ್ತೇವೆ. Alleged Rapist ಗಳಿಗೆ ಗಲ್ಲು ಶಿಕ್ಷೆಯಾಗಬೇಕೇ ಅಥವಾ ಅವರನ್ನು castration ಗೆ ಒಳಪಡಿಸಬೇಕೇ ಎಂಬಂತಹ ಘನ ಚರ್ಚೆಯನ್ನೂ ಮಾಡಿ ಮುಗಿಸಿರುತ್ತೇವೆ. ನಮ್ಮ ಮೀಡಿಯಾ ಕೂಡ ಪಕ್ಷಪಾತಿಯಾಗಿ ಕೆಲಸ ಮಾಡುತ್ತವೆ. ಮಹಿಳೆಯ ಹೆಸರನ್ನು ಮುದ್ರಿಸುವುದಿಲ್ಲ. ಆದರೆ Alleged Rapist ರ ಹೆಸರನ್ನು ಮದ್ರಿಸಿಬಿಡುತ್ತಾರೆ. ಕೊನೆಗೆ ಅವರು ನಿರ್ದೋಷಿಗಳೆಂದು ಸಾಬೀತಾಗಿಬಿಟ್ಟರೆ, ಅವರಿಗಾದ ನಷ್ಟದ ಜವಾಬ್ದಾರಿ ಯಾರ ಮೇಲೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿರುವುದಿಲ್ಲ. Innocent until proven guilty ಎಂದು ನಮ್ಮ ಕಾನೂನೇ ಹೇಳುತ್ತದೆ. ಹೀಗಿರುವಾಗ ನಾವ್ಯಾಕೆ ಕೇಸು ಬಗೆಹರಿಯುವ ತನಕ ಪೂರ್ವಾಗ್ರಹವಿಲ್ಲದೇ, ನಿಷ್ಪಕ್ಷಪಾತವಾಗಿ ಯೋಚನೆ ಮಾಡುವುದಿಲ್ಲ?

ಈ ಟಿ.ಐ.ಎಸ್.ಎಸ್ ಕೇಸನ್ನೇ ನೋಡೋಣ. ಬಲಾತ್ಕಾರಕ್ಕೆ ಒಳಗಾಗಿರಬಹುದಾದ ಹುಡುಗಿಯು ಶನಿವಾರದ ಮಧ್ಯರಾತ್ರಿ ಒಂದು ಬಿಯರ್ ಬಾರಿಗೆ ಹೋದದ್ದೇಕೆ? ಅಲ್ಲಿ ಪರಿಚಯವೇ ಇಲ್ಲದ ಹುಡುಗರು ಮದ್ಯವನ್ನು ಕುಡಿಯಲು ಕೊಟ್ಟರೆ ಇವಳು ಅದನ್ನು ಕುಡಿದದ್ದೇಕೆ? ನಂತರ ತನ್ನ ಗೆಳತಿಯೇ ಜೊತೆಗೆ ಬಾರದಿದ್ದ ಮೇಲೆ, ಅಪರಿಚಿತ ಹುಡುಗರ ಜೊತೆ ಅವಳು ನಡೆದುಬಿಟ್ಟಿದ್ದೇಕೆ? ದೇವನಾರ್ ನಿಂದ ಅಂಧೇರಿ ಬಹುದೂರ. ಅಲ್ಲಿಯವರೆಗೆ ಡ್ರೈವ್ ಮಾಡುವ ತನಕ ಆಕೆ ಯಾಕೆ ಸುಮ್ಮನಿದ್ದಳು? ಪರಿಚಯವೇ ಇಲ್ಲದ ಪುರುಷನೊಬ್ಬನ ಫ್ಲಾಟ್ ಗೆ ಹೋಗಲು ಆಕೆ ಒಪ್ಪಿಗೆಯನ್ನಿತ್ತದ್ದೇಕೆ? ಅಲ್ಲಿ ತಲುಪಿದ ನಂತರ ಹೆದರಿಕೆಯಾಗಿ ತನ್ನ ಬಾಯ್ ಫ್ರೆಂಡ್ ಗ ಫೋನ್ ಮಾಡಿದವಳು, ಪೋಲೀಸರಿಗೆ ಫೋನ್ ಮಾಡಲಿಲ್ಲವೇಕೆ? ಬಲಾತ್ಕಾರ ನಡೆದದ್ದು ಶನಿವಾರ ಎನ್ನುತ್ತಾಳೆ ಆಕೆ. ಹಾಗಾದರೆ ಪೋಲೀಸ್ ಶಿಕಾಯತ್ತು ದರ್ಜು ಮಾಡಲು, ಮಂಗಳವಾರದವರೆಗೆ ಅವಳು ಯಾಕೆ ಕಾಯುತ್ತಿದ್ದಳು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕು, ಅವಳು ಸಮರ್ಪಕವಾಗಿ ಉತ್ತರ ಕೊಟ್ಟದ್ದೇ ಆದರೆ, ನಿಜವಾಗಿಯೂ ಆ ಹುಡುಗರು ಬಲಾತ್ಕಾರವನ್ನೆಸಗಿದ್ದಾರೆ ಎಂಬುದು ಸಾಬೀತಾದರೆ ಆ ಹುಡುಗರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕಾದದ್ದೇ. ಆದರೆ ಅಲ್ಲಿಯವರೆಗೆ ನಾವು ಯಾವುದೇ judgement ಗೆ ಬಾರದೇ, ನಿಷ್ಪಕ್ಷವಾಗಿ ಯೋಚಿಸುವುದು ನಮ್ಮ ಕರ್ತವ್ಯವಲ್ಲವೇ?

ಆ ಹುಡುಗಿ ನಿಜವಾಗಿಯೂ ಬಲಾತ್ಕಾರಕ್ಕೊಳಗಾಗಿದ್ದರೆ, ನ್ಯಾಯಾಲಯದಲ್ಲಿ ಅದು ಸಾಬೀತಾದರೆ ಇಡಿ ಸಮಾಜ ಅವಳ ಬೆಂಬಲಕ್ಕೆ ನಿಲ್ಲಬೇಕು. ಬಲಾತ್ಕಾರ ಮಾಡಿದ ಪುಂಡ ಹುಡುಗರಿಗೆ ಶಿಕ್ಷೆಯೂ ಆಗಬೇಕು. ಆದರೆ ನ್ಯಾಯಾಲಯದಲ್ಲಿ ಅಪರಾಧವು ಸಾಬೀತಾಗುವವರೆಗೆ, ನಾವು ಅವರನ್ನು villify ಮಾಡುವುದು ಬೇಡ.

Wednesday, March 11, 2009

ಮೃಗತೃಷ್ಣ... ಮಣ್ಣ್ ದ ಲೆಪ್ಪು


ಮುಂಬಯಿಯ ಸುಪ್ರಸಿದ್ಧ ಸಂಸ್ಥೆ ಕರ್ನಾಟಕ ಸಂಘದ ’ಕಲಾಭಾರತಿ’ ತಂಡವು ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರಸ್ತುತ ಪಡಿಸುತ್ತಿರುವ ಒಂದು ವಿಶೇಷ ನಾಟಕದ ಹೆಸರು ’ಮೃಗತೃಷ್ಣ’. ಖ್ಯಾತ ಲೇಖಕಿ ವಸುಮತಿ ಉಡುಪರು ಈ ನಾಟಕವನ್ನು ರಚಿಸಿದ್ದಾರೆ. ಅತ್ಯಂತ ಸರಳ Narrative ಹೊಂದಿರುವ ಈ ನಾಟಕವು, ಕೆಲವು ಕ್ಲಿಷ್ಟ ಪ್ರಶ್ನೆಗಳನ್ನು ಕೇಳುತ್ತದೆ.

ಭುವನ ವರ್ಮ ಎಂಬ ರಾಜ ಬೇಟೆಗೆಂದು ಕಾಡಿಗೆ ಬಂದಿರುತ್ತಾನೆ. ಅದೇ ಸಮಯದಲ್ಲಿ ದೇವಲೋಕದ ಕನ್ಯೆಯೊಬ್ಬಳು (ಸುಗಂಧಿನಿ), ದೇವಲೋಕದ ಕಟ್ಟುಪಾಡುಗಳನ್ನು ಮೀರಿ, ತನ್ನ ಸಖಿಯೊಂದಿಗೆ ಭೂಲೋಕಕ್ಕೆ ಇಳಿದು ಅದೇ ಅರಣ್ಯಕ್ಕೆ ಬಂದಿದ್ದಾಳೆ. ಕಾಡಿನ ಪಕ್ಕದಲ್ಲಿರುವ ಅಲಕನಂದಾ ನದಿಯ ತೀರದಲ್ಲಿ ಅವರಿಬ್ಬರ ಭೇಟಿಯಾಗಿ, ಪ್ರೇಮಾಂಕುರವಾಗುತ್ತದೆ. ಸುಗಂಧಿನಿ ಗರ್ಭಿಣಿಯಾಗುತ್ತಾಳೆ.

ಮರ್ತ್ಯನೊಬ್ಬನ ಜೊತೆ ಅಂಗಸಂಗ ಮಾಡಿದ್ದಕ್ಕಾಗಿ ಸಿಟ್ಟಿಗೆದ್ದ ದೇವಲೋಕದ ರಾಜ, ತನ್ನ ಮಗಳು ಸುಗಂಧಿನಿಯನ್ನು ಹೀಯಾಳಿಸುತ್ತಾನೆ. ಭುವನವರ್ಮನನ್ನು ಮರೆತುಬಿಡುವಂತೆ ಅವಳಿಗೆ ಆದೇಶಿಸುತ್ತಾನೆ. ಆದರೆ ಸುಗಂಧಿನಿ ಆತನ ಮಾತನ್ನು ಒಪ್ಪುವುದಿಲ್ಲ. ಮತ್ತೆ ಭೂಲೋಕಕ್ಕೆ ತೆರಳಿ, ತಾನು ಪ್ರೀತಿಸಿದ ರಾಜನ ಜೊತೆಯೇ ಬದುಕುವೆ ಎನ್ನುತ್ತಾಳೆ. ಅವಳ ತಾಯಿಯೂ (ದೇವಲೋಕದ ರಾಣಿ) ಆಕೆಯನ್ನು ಸಮರ್ಥಿಸಿದಾಗ, ದೇವತಾ ರಾಜ ಸುಗಂಧಿನಿಯನ್ನು ಮತ್ತೆ ಭೂಲೋಕಕ್ಕೆ ಕಳುಹಿಸಿಕೊಡಲು ಒಪ್ಪಿಗೆ ನೀಡುತ್ತಾನೆ. ಭುವನವರ್ಮನಿಗೆ ’ಚಿರಂಜೀವಿತ್ವದ’ ವರವನ್ನೂ ನೀಡುತ್ತಾನೆ. ಆದರೆ ಅವನದ್ದೊಂದು ಶರತ್ತು ಇದೆ. ಪ್ರೀತಿಯು ಮಾಸಿ, ಭೂಲೋಕದ ಸಹವಾಸ ಸಾಕು ಎನಿಸಿ ಆಕೆ ಮರಳಿ ದೇವಲೋಕಕ್ಕೆ ಬಂದರೆ, ಪುನಹ ಆಕೆ ಭೂಲೋಕಕ್ಕೆ ತೆರಳುವಂತಿಲ್ಲ ಎಂಬುದು. ಆ ಶರತ್ತನ್ನು ಮನಸಾರೆ ಒಪ್ಪಿ, ತಾನು ಪ್ರೀತಿಸುವ ರಾಜನಿಗೆ ’ಅಮರತ್ವದ’ ವರ ಸಿಕ್ಕಿದ್ದನ್ನು ಕೇಳಿ, ಸುಗಂಧಿನಿ ಅತ್ಯಂತ ಸಂತಸದಿಂದ ಭೂಲೋಕಕ್ಕೆ ಮರಳಿ, ಭುವನವರ್ಮನ ಜೊತೆ ಸಂಸಾರ ನಡೆಸುತ್ತಾಳೆ.

ಒಂದು ದಿನ, ಭುವನವರ್ಮನ ಆಪ್ತ ಮಿತ್ರ, ಅರಮನೆಯ ಬಾಣಸಿಗನ ಮಗ ರಕ್ತಾಕ್ಷನಿಗೆ, ತನ್ನ ಒಡೆಯನಿಗೆ ಸಿಕ್ಕ ವರದ ಬಗ್ಗೆ ಗೊತ್ತಾಗುತ್ತದೆ. ಆತ "ನಿಮ್ಮ ಜಾಗದಲ್ಲಿ ನಾನಿದ್ದರೆ, ಈ ವರವೇ ಬೇಡ, ಚಿರಯೌವನ ಇಲ್ಲದ ಚಿರಂಜೀವಿತ್ವವನ್ನು ಪಡೆದುಕೊಂಡು ಏನು ಮಾಡುವುದು ಎಂದು ಕೇಳುತ್ತಿದ್ದೆ" ಎಂದು ಭುವನವರ್ಮನಿಗೆ ಹೇಳಿದಾಗ, ರಾಜನಿಗೆ ಆಘಾತವಾಗುತ್ತದೆ. ಸಮಯ ಕಳೆದಂತೆ ಮುದುಕುನಾಗುತ್ತ ಹೋಗಬೇಕು, ರೋಗಗ್ರಸ್ತನಾಗಬೇಕು, ಅದೆಷ್ಟೋ ನೋವುಗಳನ್ನನುಭವಿಸಬೇಕು, ಅನುಭವಿಸುತ್ತಲೇ ಇರಬೇಕು, ಆದರೆ ಸಾವೆಂಬುದು ಮಾತ್ರ ತನ್ನ ಹತ್ತಿರವೂ ಸುಳಿಯದು ಎಂಬುದು ಆತನಿಗೆ ಗೊತ್ತಾದಾಗ, ತನಗೆ ಸಿಕ್ಕಿದ್ದು ವರವಲ್ಲ, ಅದೊಂದು ಶಾಪ ಎನ್ನುವುದು ಆತನಿಗೆ ಅರಿವಾಗುತ್ತದೆ.

ಕಾಲಚಕ್ರ ಉರುಳುತ್ತದೆ. ಭುವನವರ್ಮನಿಗೆ ವೃದ್ಧಾಪ್ಯದ ಸಮಯ ಬರುತ್ತದೆ. ಹಣ್ಣು ಹಣ್ಣು ಮುದುಕನಾಗುತ್ತಾನೆ. ಆದರೆ ಆತನಿಗೆ ಸಾವೇ ಇಲ್ಲ. ಆತ ಸುಗಂಧಿನಿಗೆ ಮರಳಿ ದೇವಲೋಕಕ್ಕೆ ಹೋಗಿ, ತಂದೆ ಕೊಟ್ಟ ಶಾಪವನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸುವಂತೆ ಕೇಳಿಕೊಳ್ಳುತ್ತಾನೆ. ಒಮ್ಮೆ ದೇವಲೋಕವನ್ನು ಸೇರಿದರೆ, ಆಕೆ ಮರಳಿ ಬರುವಂತಿಲ್ಲ. ಹೀಗಾಗಿ ಅವಳು ರಾಜನನ್ನು ಬಿಟ್ಟು ಹೋಗಲು ತಯಾರಿಲ್ಲ. ಪ್ರತಿದಿನ ಅವರ ಮಧ್ಯೆ ಇದೇ ವಾಗ್ವಾದ.

ಹೀಗಿರಲು, ಚಿರ ಯೌವನೆಯಾದ ಸುಗಂಧಿನಿಯ ಮರಿ ಮೊಮ್ಮಗ ಅವಳಲ್ಲಿ ಅನುರಕ್ತನಾಗುತ್ತಾನೆ. ದೈಹಿಕವಾಗಿ ಅವಳನ್ನು ಕೂಡಿಕೊಳ್ಳಲು ಪ್ರಯತ್ನಿಸುತ್ತಾನೆ. ಇಂತಹ ಅಪಮಾನಕರ ಪರಿಸ್ಥಿತಿಯಲ್ಲೂ ಆಕೆ, ತನ್ನ ರಾಜನನ್ನು ಬಿಟ್ಟು ಹೋಗುವುದಿಲ್ಲ. ಕೊನೆಗೊಮ್ಮೆ, ಭುವನವರ್ಮನ ವೃದ್ಧಾಪ್ಯದ ಪರಿತಾಪವನ್ನು ನೋಡಲಾಗದೇ, ಶಾಶ್ವತವಾಗಿ ತನ್ನ ಲೋಕಕ್ಕೆ ಮರಳುತ್ತಾಳೆ. ಅಲ್ಲಿ ಭುವನವರ್ಮನಿಗೆ ಮುಕ್ತಿ ಕರುಣಿಸುವಂತೆ, ತನ್ನ ತಂದೆಯ ಬಳಿ ಕೇಳಿಕೊಳ್ಳುತ್ತಾಳೆ. ಕೊಟ್ಟ ಶಾಪವನ್ನು ಮರಳಿ ಪಡೆಯಲು ಸಾಧ್ಯವಿಲ್ಲವಾದರೂ, ಭುವನವರ್ಮ ಒಂದು ಹುಳುವಾಗಲಿ, ಮಳೆಗಾಲದಲ್ಲಿ ಭೂಮಿಗೆ ಬಂದು, ಬೇಸಗೆಯಲ್ಲಿ ಮತ್ತೆ ಭೂಮಿಯೊಳಗೆ ಸೇರಿಕೊಳ್ಳುವಂತಾಗಲಿ ಎಂಬ ವರವನ್ನು ಆತ ಕರುಣಿಸುತ್ತಾನೆ.

ಇದಿಷ್ಟು ಕತೆಯ ತಿರುಳು.

ಯೌವನದ ನಿರಂತರತೆಯ ಬಯಕೆ, ಮುಪ್ಪಿನ ಭಯ, ಸಾವಿಗಾಗಿ ತವಕ, ಈ ನಾಟಕದ ಒಂದು ಆಯಾಮವಾಗಿದ್ದರೆ, ಪ್ರೀತಿ ಶ್ರೇಷ್ಠವಾಗಿರುವುದು, ಪ್ರೀತಿ ಕಾಲಾತೀತ ಹಾಗೂ ಸೀಮಾತೀತವಾಗಿರುವುದು ಇನ್ನೊಂದು ಆಯಾಮವನ್ನು ಕಲ್ಪಿಸುತ್ತದೆ. ಈ ವಿಭಿನ್ನ ಧ್ರುವಗಳು, ಒಂದರ ಜೊತೆಗೊಂದು ಸಂಘರ್ಷಿಸುತ್ತಲೇ ಇರುವುದೇ ನಾಟಕದ ನಡೆಯಾಗಿದೆ.

ಈ ಅಮರತ್ವದಂಥ ಗಂಭೀರ ವಸ್ತು, ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಮೂಡಿ ಬಂದಿರುವುದು ಈ ನಾಟಕದ ವಿಶೇಷ. ಸ್ತ್ರೀ ಶೋಷಣೆ, ತ್ಯಾಗ, ಪುರುಷ ಪ್ರಧಾನ ವ್ಯವಸ್ಥೆಯ ಅಹಂಕಾರ ಇತ್ಯಾದಿಗಳು, ಅಮರತ್ವದ ಮೂಲವಸ್ತುವಿನ ಜೊತೆ ನಾಜೂಕಾಗಿ ನೇಯ್ದುಕೊಂಡಿರುವುದು, ಈ ನಾಟಕದ ಆಯಾಮವನ್ನು ಇನ್ನೂ ವಿಸ್ತೃತಗೊಳಿಸುತ್ತದೆ.

ನಾಟಕದ ನಿರ್ದೇಶಕರಾದ ಶ್ರೀ ಭರತ್ ಕುಮಾರ್ ಪೊಲಿಪು ಅವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಾಟಕದ ಅಂತ್ಯದಲ್ಲಿ ಒಂದು ದೃಷ್ಯವನ್ನು ಸೇರಿಸಿದ್ದಾರೆ. ಭುವನವರ್ಮನಿಗೆ ಮುಕ್ತಿ ದೊರೆತು, ಆತ ಹುಳುವಾದ ಮೇಲೆ, ಮತ್ತೊಮ್ಮೆ ತನ್ನ ತಂದೆಯ ಅಪ್ಪಣೆಯನ್ನು ಮೀರಿ, ಸುಗಂಧಿನಿ ಭೂಲೋಕಕ್ಕಿಳಿದು, ಆ ಹುಳುವನ್ನು ಅಪ್ಪಿಕೊಳ್ಳುವುದರೊಂದಿಗೆ ನಾಟಕಕ್ಕೆ ತೆರೆ ಬೀಳುತ್ತದೆ. ಪ್ರೀತಿ ಎಂಬುದು, ಯಾವುದೇ ಕಟ್ಟುಪಾಡುಗಳಿಗೆ ಆಧೀನವಲ್ಲ ಎಂಬ interpretation ಕೊಟ್ಟು, ನಿರ್ದೇಶಕರು ಪ್ರೀತಿಯ ಇನ್ನೊಂದು ಆಯಾಮವನ್ನು ತೆರೆದಿಡುತ್ತಾರೆ.

ಈ ನಾಟಕವನ್ನು, ಶ್ರೀ ಭರತ್ ಕುಮಾರ್ ಅವರೇ ತುಳು ಭಾಷೆಗೆ ಅನುವಾದಿಸಿದ್ದಾರೆ. ಅದರ ಹೆಸರು "ಮಣ್ಣ್ ದ ಲೆಪ್ಪು". (ಮಣ್ಣಿನ ಕರೆ). ನಮ್ಮ ತಂಡವು, ಮುಂಬಯಿ, ಬೆಂಗಳೂರು, ನವ ದೆಹಲಿ, ಧಾರವಾಡ, ಹೂವಿನ ಹಡಗಲಿ ಸೇರಿದಂತೆ ಹಲವಾರು ಕಡೆ, ಈ ನಾಟಕವನ್ನು ಪ್ರದರ್ಶಿಸಿದೆ. ಉಡುಪಿಯಲ್ಲಿ ಪ್ರತಿ ವರ್ಷ ನಡೆಯುವ ಕೆಮ್ತೂರು ದೊಡ್ಡಣ್ಣ ಶೆಟ್ಟಿ ತುಳು ನಾಟಕ ಸ್ಫರ್ಧೆಯಲ್ಲಿ, ಕಳೆದ ವರ್ಷ ’ಮಣ್ಣ್ ದ ಲೆಪ್ಪು’ ಗೆ ಅತ್ಯುತ್ತಮ ನಟ- ಪ್ರಥಮ (ಭುವನ ವರ್ಮನ ಪಾತ್ರದಲ್ಲಿ ಶ್ರೀ ಮೋಹನ್ ಮಾರ್ನಾಡ್), ಅತ್ಯುತ್ತಮ ನಟಿ- ಪ್ರಥಮ (ಸುಗಂಧಿನಿಯಾಗಿ ಕು. ವೀಣಾ ಸರಪಾಡಿ), ಅತ್ಯುತ್ತಮ ಸಂಗೀತ - ಪ್ರಥಮ, ಅತ್ಯುತ್ತಮ ಬೆಳಕು - ಪ್ರಥಮ, ಅತ್ಯುತ್ತಮ ವೇಷ ಭೂಷಣ ಹಾಗೂ ರಂಗ ವಿನ್ಯಾಸ - ಪ್ರಥಮ, ಅತ್ಯುತ್ತಮ ನಾಟಕ - ಪ್ರಥಮ ಹಾಗೂ ಅತ್ಯುತ್ತಮ ನಿರ್ದೇಶನ ದ್ವಿತೀಯ ಬಹುಮಾನಗಳು ದೊರೆತಿವೆ.

ನಮ್ಮ ತಂಡದಲ್ಲಿರುವ ಉತ್ತಮ ನಟರ ಕಾರಣದಿಂದಾಗಿ, ಪ್ರದರ್ಶಿಸಿದಲ್ಲೆಲ್ಲ ನಾಟಕವು ಯಶಸ್ಸನ್ನೇ ಕಂಡಿದೆ. ಮುಂಬಯಿ ಕನ್ನಡ ರಂಗಭೂಮಿಯು ಕಂಡ ಒಬ್ಬ ಅದ್ಭುತ ನಟರಾದ ಶ್ರೀ ಮೋಹನ್ ಮಾರ್ನಾಡ್, ವೃದ್ಧ ಭುವನ ವರ್ಮನ ಪಾತ್ರವನ್ನು ಅದೆಷ್ಟು ಪರಿಣಾಮಕಾರಿಯಾಗಿ ನಟಿಸುತ್ತಾರೆಂದರೆ, ಪ್ರೇಕ್ಷಕರಲ್ಲಿ ರೋಮಾಂಚನವುಂಟಾಗುತ್ತದೆ. ನಾಟಕದ ಕೊನೆಯಲ್ಲಿ, ಅವರು ಹುಳುವಿನ ಹಾಗೆ ತೆವಳುತ್ತ ಹೋಗುತ್ತಿದ್ದರೆ, ಪ್ರತಿಯೊಂದು ಪ್ರದರ್ಶನದಲ್ಲೂ, ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆಯುವುದನ್ನು ನೋಡಿದಾಗ, ನಮ್ಮ ಇಡೀ ತಂಡಕ್ಕೆ ಹೆಮ್ಮೆ. ಬೆಂಗಳೂರಿನ ಪ್ರದರ್ಶನದ ನಂತರ ನಡೆದ ಒಂದು ಘಟನೆಯನ್ನು ನಮ್ಮ ತಂಡದವರು ಯಾವತ್ತೂ ಮರೆಯಲಾರರು. ಬೆಂಗಳೂರಿನಲ್ಲಿ ಈ ಪ್ರದರ್ಶನ ಮುಗಿದಾಗ, ಹಿರಿಯ ಮಹಿಳೆಯೊಬ್ಬರು ರಂಗಕ್ಕೆ ಬಂದು, ಮೋಹನ್ ಮಾರ್ನಾಡರ ಎದುರು ನಿಂತು ಈ ಮಾತನ್ನು ಹೇಳಿದರು "ನನಗೆ ತುಂಬ ವಯಸ್ಸಾಯ್ತು. ಯಾವುದೇ ಕ್ಷಣ ಸಾವು ಬರಬಹುದು. ಇಷ್ಟು ದಿನ ಸಾವು ಎಂದರೇನೇ ಭಯ ಆಗ್ತಿತ್ತು. ಆದರೆ ನಿಮ್ಮ ನಾಟಕ ನೋಡಿದ ಮೇಲೆ, ಸಾವಿನ ಭಯ ಹೊರಟು ಹೋಯ್ತು. ಮುದಿತನದ ಆ ನೋವಿಗಿಂತ ಸಾವೇ ಉತ್ತಮ". ಈ ಮಾತನ್ನು ಕೇಳಿದ ನಮಗೆಲ್ಲ Shock ಆಗಿತ್ತು. ಒಂದು ಒಳ್ಳೆಯ ನಾಟಕ, ಒಬ್ಬ ಉತ್ತಮ ನಟ, ಪ್ರೇಕ್ಷಕರ ಮನಸ್ಸಿನಲ್ಲಿ ಅದೆಂತಹ ಪರಿಣಾಮವನ್ನುಂಟುಮಾಡಬಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಮಗೆಲ್ಲ ಅವಿಸ್ಮರಣೀಯ ಅನುಭವ.

Sunday, March 1, 2009

ಮುಂಬಯಿ ಮುಖಗಳು ಭಾಗ ೨......


ಭೂಷಣ್ ಭಾಯಿ ಬಟುಕ್ ಲಾಲ್ ಪಟೇಲನ ಜೀವನವೇ ವಿಚಿತ್ರ. ಮೊದಲು ಯಾವ ವಸ್ತುಗಳು ಅವನಿಗೆ ತುಂಬ ಇಷ್ಟವಾಗುತ್ತಿದ್ದವೋ, ಇಂದು ಅವನ್ನು ಕಂಡರೆ ಆಗುವುದಿಲ್ಲ. ಮೊದಲು ಯಾವ ವಸ್ತು ಅಂದರೆ ಉರಿದುಬೀಳುತ್ತಿದ್ದನೋ, ಇಂದು ಅವುಗಳೇ ಪಂಚ ಪ್ರಾಣ. ಅದರಲ್ಲಿ ಅವನ ಅಲಾರ್ಮ್ ಕೂಡ ಒಂದು. ಮೊದಲಾದರೆ ಅಲಾರ್ಮ್ ಕಂಡುಹಿಡಿದ ಪ್ರಾಣಿಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ಆದರೆ ಈಗ ಬೆಳಿಗ್ಗೆ ಐದೂ ಕಾಲಿಗೆ ಅಲಾರ್ಮ್ ಬಾರಿಸುತ್ತಲೆ, ನಿದ್ದೆಯಲ್ಲೇ ಮಂದಹಾಸ ಬೀರುತ್ತಾನೆ. ಮೊದಲಾದರೆ ಅಲಾರ್ಮ್ ಬಾರಿಸಿದ ನಂತರವೂ ಹತ್ತು ನಿಮಿಷ ಸುಖನಿದ್ರೆಗೆ ಹಪಹಪಿಸುತ್ತಿದ್ದವ, ಇಂದು ಅದು ಹೊಡೆದುಕೊಳ್ಳುತ್ತಲೇ, ಎದ್ದು ನೀಟಾಗುತ್ತಾನೆ. ಹಾಗೆ ನೋಡಿದರೆ, ಅಷ್ಟು ಬೇಗ ಏಳುವ ಅವಶ್ಯಕತೆ ಆತನಿಗಿಲ್ಲ. ಆದರೆ ಈ ಮೂರು ತಿಂಗಳಿನಿಂದೀಚೆ, ಅಂತಹ ಅವಶ್ಯಕತೆ ಬಂದು ನಿಂತಿದೆ. ಅದು ಅವನ ಜೀವನ್ಮರಣದ ಪ್ರಶ್ನೆ.

ನಾಲಾಸೋಪಾರಾ ಪೂರ್ವದಲ್ಲಿ ರೇಲ್ವೇ ಹಳಿಗುಂಟ ಒಂದೈವತ್ತು ಹೆಜ್ಜೆ ನಡೆದರೆ, ಎದುರುಗಡೆಯೇ ಕಾಣುತ್ತೆ ’ಜೈ ಜಿನೇಂದ್ರ ಕೋ-ಆಪ್ ಹೌಸಿಂಗ್ ಸೊಸಾಯಟಿ’. ನಾಲ್ವತ್ತು ಮನೆಗಳಿವೆ ಅಲ್ಲಿ. ಹೆಚ್ಚಾಗಿ ಎಲ್ಲರೂ ಇಮಿಟೇಶನ್ ಜೆವೆಲ್ಲರಿ ಕೆಲಸ ಮಾಡುವವರೇ. ನಮ್ಮ ಭೂಷಣ್ ಭಾಯಿ ಈ ಸೊಸಾಯಟಿಯ ಹೆಮ್ಮೆಯ ಸೆಕ್ರೆಟರಿ. ಅತ್ಯಂತ ಜನಪ್ರಿಯ ಕೂಡ. ಚೂರು ಬೊಕ್ಕ ತಲೆ- ಚೂರೇ ಚೂರು ಹೊಟ್ಟೆ ಇರದಿದ್ರೆ, ಆತ ಗುಜರಾತಿ ಫಿಲ್ಮುಗಳ ನಾಯಕನಾಗಿರಬಹುದಿತ್ತೆಂದು, ಬಹಳ ಜನರು ಆತನಿಗೆ ಹೇಳಿದ್ದಿದೆ. ಅದನ್ನು ಆತ ಈಗೀಗ ನಂಬತೊಡಗಿದ್ದಾನೆ. ವಯಸ್ಸು ನಾಲ್ವತ್ತೈದು ದಾಟಿದೆ ಎಂಬುದನ್ನು ಆತ ಮೂರು ತಿಂಗಳ ಹಿಂದೆಯೇ ಮರೆತಿದ್ದಾನೆ. ಮೂರು ತಿಂಗಳ ಹಿಂದೆ ಅಂಥದ್ದೇನು ಅನಾಹುತ ಆಯ್ತೂಂತೀರಾ? ನವರಾತ್ರಿಯ ಉತ್ಸವದ ಸಮಯ. ಅಂದು ಸೊಸಾಯಟಿ ಕಂಪೌಂಡಿನಲ್ಲಿ ಬಹಳ ವಿಜೃಂಭಣೆಯಿಂದ ದಾಂಡಿಯಾ ನೃತ್ಯ ನಡೆಯುತ್ತಿತ್ತು. ಒಂಭತ್ತು ದಿನಗಳ ಸುದೀರ್ಘ ಹಬ್ಬಕ್ಕೆ ಅಂದು ತೆರೆ ಬೀಳಲಿತ್ತು. ಇಡೀ ಸೊಸಾಯಟಿ ಸಂಭ್ರಮದಲ್ಲಿತ್ತು. ದೂರದ ಜೀವದಾನಿ ಬೆಟ್ಟದಿಂದ ನೋಡಿದರೆ, ಇಡೀ ನಾಲಾಸೋಪಾರಾದಲ್ಲಿ ಜೈ ಜಿನೇಂದ್ರ ಬಿಲ್ಡಿಂಗ್ ಮಾತ್ರ ಹೊಳೆಯುತ್ತಿರುವಂತಿತ್ತು. ಬಿಲ್ಡಿಂಗಿನ ಇಪ್ಪತ್ತೇಳು ವರ್ಷಗಳ ಇತಿಹಾಸದಲ್ಲೇ ಇಂಥದ್ದೊಂದು ಉತ್ಸವ ಆಗುತ್ತಿರುವುದೇ ಮೊದಲ ಬಾರಿ. ನವರಾತ್ರಿ ಆಚರಣೆಯ ಐಡಿಯಾ ಕೊಟ್ಟ, ಅದನ್ನು ಸಾಂಗವಾಗಿ ನೆರವೇರಿಸಿದ ಭೂಷಣ್ ಭಾಯಿ ಅಂದು ಸೊಸಾಯಟಿಯ ಹೀರೋ. ಜನರೆಲ್ಲ "ಮಾಡ ತಾರಾ ಮಂಡರಿಯಾಮಾ", "ತಾರಾ ವಿನಾ ಶಾಮ್ ಮನ್ನೆ ಇಕಲಡು ಲಾಗೆ" ಹಾಡುಗಳಿಗೆ ಮೈಮರೆತು ಕುಣಿಯುತ್ತಿದ್ದರೆ, ದೂರ ನಿಂತ ಭೂಷಣ ಭಾಯಿಯ ಕಣ್ಣುಗಳು ಅವಳನ್ನೇ ದಿಟ್ಟಿಸುತ್ತಿವೆ. ಆಕೆ ಕೊನೆಗೂ ಓರೆಗಣ್ಣಿನಿಂದ ಆತನನ್ನು ನೋಡಿ, ಒಂದು ಪುಟ್ಟ ಹೂ ನಗೆಯೊಂದನ್ನು ಅವನ ಮೇಲೆಸೆದಾಗ, ಜೀವನದಲ್ಲಿ ಎರಡನೇ ಬಾರಿ ಪ್ರೀತಿಯ ಹೊಂಡಕ್ಕೆ ಬಿದ್ದುಬಿಟ್ಟಿದ್ದ ಭೂಷಣ್. ಆಕೆ ರೀಟಾ.

ಅಲಾರ್ಮ್ ಬಾರಿಸುತ್ತಲೆ ಎದ್ದು ಲಗುಬಗನೇ ತಯಾರಾಗಿ, ಚಿಲ್ಲರೆ ಹಣ, ಸಿಗರೇಟ್ ಪ್ಯಾಕು ಮತ್ತೆ ಮೋಬಾಯಿಲನ್ನು ಜೇಬಿಗೆ ತುರುಕಿಕೊಂಡು ಸದ್ದಾಗದಂತೆ ಹೊರ ನಡೆಯುತ್ತಾನೆ. ಮಲಗಿದ ದಕ್ಷಾ, ಮಲಗಿದಲ್ಲೇ ಕೆಮ್ಮುತ್ತಾಳೆ. "ತಮೆ ಜಾವೋ ಛೋ? ಜಲ್ದೀ ಆವೋ" ಎನ್ನುತ್ತಾಳೆ. "ನಾನೇನೂ ಯುದ್ಧಕ್ಕೆ ಹೊರಟಿಲ್ಲ ಬಿಡೆ ದರಿದ್ರದೋಳೇ" ಅನ್ನಬೇಕೆನಿಸಿದರೂ, ಹಾಗೇನೂ ಅನ್ನಲಾರ. "ಬರುವಾಗ ನನ್ನ ಮಾತ್ರೆ ತರ್ತೀರಾ? ನಿನ್ನೆ ಮರೆತು ಬಂದ್ರಿ" ಎಂದು ಆಕೆ ಹೇಳಿದಾಗ, ಆತನ ಸಿಟ್ಟು ನೆತ್ತಿಗೇರುತ್ತದೆ. "ಮುಂಜಾನೆ ಐದೂವರೆಗೆ ನಿನ್ನಪ್ಪ ಅಂಗಡಿ ತೆಗೆದಿರ್ತಾನಾ?" ಎಂಬ ಮಾತುಗಳು ಗಂಟಲಲ್ಲೇ ಉಳಿದುಬಿಟ್ಟಿರುತ್ತವೆ. ಅದೂ ಅಲ್ದೇ, ನಿನ್ನೆ ಆತ ಮಾತ್ರೆಯನ್ನು ತರಲು ಮರೆತಿರಲಿಲ್ಲ. ಫ್ಯಾಕ್ಟರಿಯಿಂದ ಬರುವಾಗ, ಟ್ರೇನಿನಲ್ಲಿ ತನ್ನ ಗೆಳೆಯರ ಜೊತೆಗಿನ ರಮ್ಮಿ ಆಟದಲ್ಲಿ ನಾಲ್ಕು ನೂರ ಹದಿನಾರು ರೂಪಾಯಿಗಳನ್ನು ಕಳೆದುಕೊಂಡಿದ್ದ. ಜೇಬಲ್ಲಿ ಈಗ ಇಪ್ಪತ್ತು ರೂಪಾಯಿಯೂ ಇರಲಿಲ್ಲ. ಎಲ್ಲಿಂದ ತರೋದು ಮಾತ್ರೆ? ಈ ಹೆಂಗಸನ್ನು ಪ್ರೀತಿಸಿ ಮದುವೆಯಾದದ್ದು ತನ್ನ ಬದುಕಿನ ಅತ್ಯಂತ ದೊಡ್ಡ ತಪ್ಪು ಎನ್ನುವುದು ಆತನಿಗೆ ತಿಳಿದಿದೆ. ಆದರೆ ಮಾಡಿದ ಕರ್ಮವನ್ನು ಅನುಭವಿಸಬೇಕಲ್ಲವೆ. ’ರೀಟಾ ನನಗೆ ಮೊದಲೇ ಸಿಕ್ಕಿದ್ದರೆ! ಎಷ್ಟು ಚೆನ್ನಾಗಿರುತ್ತಿತ್ತು ಬದುಕು. ಎಂತಹ ಅದ್ಭುತ ಸೌಂದರ್ಯ ಅವಳದ್ದು. ಆಕೆ ದಾಂಡಿಯಾ ಕುಣಿಯುವಾಗ ಸೊಸಾಯಟಿಯ ಸಮಸ್ತ ಪುರುಷವರೇಣ್ಯರು ಬಾಯಿ ತೆರೆದು, ಎಲುಬನ್ನು ನೋಡುವ ಆಸೆಬುರುಕ ನಾಯಿಗಳ ಹಾಗೆ ಜೊಲ್ಲು ಸುರಿಸುತ್ತಾರೆ. ಅಂತಹ ಮೈ ಮಾಟ. ಅಂತಹ ನೃತ್ಯ. ಅಂತಹ ಹೆಂಗಸೊಬ್ಬಳು, ನನ್ನನ್ನು ಮನಸಾರೆ ಪ್ರೀತಿಸುತ್ತಿದ್ದಾಳೆ. ಅದೆಂತಹ ಮಧುರ ಬಾಂಧವ್ಯ. ಬತ್ತಿ ಹೋದ ನನ್ನ ಬದುಕಿನಲ್ಲಿ, ಪ್ರೀತಿಯ ಸಾಗರವನ್ನೇ ಹರಿಸಿದ್ದಾಳೆ. ನಾನೆಷ್ಟು ಅದೃಷ್ಟವಂತನಲ್ಲವೇ.. ಇನ್ನು ಇವಳೂ ಇದ್ದಾಳೆ, ರೋಗಿಷ್ಟೆ. ಯಾಕಾದ್ರೂ ಈ ಪೀಡೆ ಗಂಟು ಬಿದ್ದಿತೋ ನನಗೆ’ ಎಂದುಕೊಳ್ಳುತ್ತಾ, ಸೊಸಾಯಟಿಯಿಂದ ಚೂರು ಹೊರಗೆ ಬಂದಿದ್ದಾನಷ್ಟೇ.. ಮೊಬಾಯಿಲಿನ ಸಿಹಿ ರಿಂಗಣದ ಸದ್ದು ಕೇಳಿ ರೋಮಾಂಚನಗೊಳ್ಳುತ್ತಾನೆ. ಅದು ಅವಳದೇ ಮಿಸ್ ಕಾಲ್!

"ಗುಡ್ ಮಾರ್ನಿಂಗ್ ಸ್ವೀಟ್ ಹಾರ್ಟ್! ಎದ್ದು ಬಿಟ್ಯಾ?" ಎಂದು ಆತ ಕೇಳುವಾಗ, ಮಾತಿನ ಪ್ರತಿಯೊಂದು ಅಕ್ಷರದಲ್ಲೂ ರಾಶಿ ರಾಶಿ ಪ್ರೀತಿ.
"ಹಾಯ್ ಭೂಷಣ್.. ರಾತ್ರಿ ಇಡೀ ನಿದ್ರೆನೇ ಬರಲಿಲ್ಲಾ ರೀ... ನಿಮ್ಮದೇ ಯೋಚನೆ.. ಐ ಲಾವ್ ಯೂ ಭೂಷಣ್..".. ಭೂಷಣ್, ಮೂರ್ಛೆ ತಪ್ಪುವುದೊಂದೇ ಬಾಕಿ.
ಆತ "ಐ ಲ.. ಲ..ಲವ್.." ಎಂದು ತೊದಲುತ್ತಿರುವಾಗ ಅವಳೇ ಮುಂದುವರಿಸುತ್ತಾಳೆ "ಬರ್ತೀರಾ ಇವತ್ತು ಮನೆಗೆ?"
"ಬರಬೇಕೂಂತ್ಲೇ ಇದ್ದೆ ರೀಟಾ.. ಆದ್ರೆ ನಿನಗೆ ಗೊತ್ತಲ್ಲ. ಇವತ್ತು ಸೊಸಾಯಟಿಯಲ್ಲಿ ಸ್ಪೆಶಲ್ ಜೆನೆರಲ್ ಬಾಡಿ ಮೀಟಿಂಗ್ ಇದೆ. ಕೆಳಗೆ ಅಂಗಳದಲ್ಲಿ ಜನ ಸೇರಿರ್ತಾರೆ. ಅಂಥದ್ರಲ್ಲಿ ನಾನು ನಿಮ್ಮ ಮನೆಗೆ ಬರೋದು ಸರಿ ಹೋಗಲ್ಲ.. ಅಲ್ವಾ?"
"ಹೋಗಿ, ನೀವು ಯಾವತ್ತೂ ಹೀಗೇನೇ.. ನಿಮಗೆ ಗೊತ್ತಾ, ಮುಂದಿನ ತಿಂಗಳು ಚಿಂಕಿಯ ಪಪ್ಪಾ ದುಬಾಯಿಯಿಂದ ಬರ್ತಿದ್ದಾರೆ. ಆಮೇಲೆ ನಾವೆಲ್ಲ ಅಮದಾಬಾದ್ ಗೆ ಹೊರಡ್ತೀವಿ. ಮತ್ತೆ ಬರೋದು ಎರಡು ತಿಂಗಳ ನಂತ್ರ.."
"ಗೊತ್ತಿದೆ ರೀಟಾ. ನೀನು ಎರಡು ತಿಂಗಳು ಇಲ್ಲಿ ಇರೋಲ್ಲ ಅನ್ನೋ ಯೋಚನೆಯಿಂದ್ಲೇ ಪ್ರಾಣ ಹೋಗ್ತಿದೆ. ಆದ್ರೆ ಏನ್ ಮಾಡೋದು? ನಮ್ಮ ಪ್ರೀತಿಯ ಬಗ್ಗೆ ಜನರಿಗೆ ಗೊತ್ತಾಗಬಾರದಲ್ವೆ? ನನಗೆ ನನ್ನ ಮರ್ಯಾದೆಯ ಚಿಂತೆ ಇಲ್ಲ ಕಣೆ. ಆದ್ರೆ ಯಾರಾದ್ರೂ ನಿನ್ನ ಬಗ್ಗೆ ಒಂದೇ ಒಂದು ತಪ್ಪು ಮಾತು ಹೇಳಿದ್ರೂ ನಾನು ಸಹಿಸೋಲ್ಲ. ಅಂತಹ ಪರಿಸ್ಥಿತಿ ಬರಬಾರದೂಂತ್ಲೇ ಇಷ್ಟೆಲ್ಲ ಮಾಡ್ತಿದೀನಿ ಕಣೆ." ಎಂದು ಹೇಳಿದ ಆತನ ಮಾತಿನಲ್ಲಿ ಸಂಪೂರ್ಣ ಪ್ರಾಮಾಣಿಕತೆ ಇದೆ. ಅದನ್ನು ಅರಿಯಲಾರದಷ್ಟು ದಡ್ಡಿ ಅವಳು ಖಂಡಿತ ಅಲ್ಲ.
"ಐ ಎಮ್ ಸಾರೀ ಭೂಷಣ್.. ಸ್ವಾರ್ಥಿಯ ಹಾಗೆ ನಡಕೊಂಡೆ.. ಕ್ಷಮಿಸಿಬಿಡಿ.. ಐ ಲಾssss ವ್ ಯೂ..." ಭೂಷಣನಿಗೆ ಸ್ವರ್ಗಕ್ಕೆ ಮೂರೇ ಬಾಗಿಲು. ಅವಳೇ ಮುಂದುವರಿಸುತ್ತಾಳೆ "ಭೂಷಣ್.. ನನಗೆ ತುಂಬ ಟೆನ್ಶನ್ ಆಗಿದೆ ರೀ"
"ಯಾಕೆ? ಏನಾಯ್ತು ಕಣೆ? ಹೆದರಬೇಡ.. ನಮ್ಮ ಬಗ್ಗೆ ಯಾರಿಗೂ ಗೊತ್ತಾಗಲ್ಲ"
"ವಿಷಯ ಅದಲ್ಲ. ಏನೂಂದ್ರೆ... ಹೋಗಲಿ ಬಿಡಿ.. ನೀವು ತಪ್ಪು ತಿಳ್ಕೋತೀರಾ.."
"ನಾನು ತಪ್ಪು ತಿಳಿಯೋದೆ? ಹೇಳು ಕಣೆ.. ಏನಾಯ್ತು?"
"ಏನೂ ಇಲ್ಲ.. ಚಿಂಕಿಯ ಪಪ್ಪಾ ಇನ್ನೂ ಮನಿ ಆರ್ಡರ್ ಮಾಡಿಲ್ಲ.. ಫೋನ್ ಮಾಡಿದ್ರು. ಮುಂದಿನ ವಾರ ಕಳಿಸ್ತಾರಂತೆ. ನಾಡಿದ್ದು ಚಿಂಕಿಯ ಸ್ಕೂಲ್ ಫೀಸ್ ಕಟ್ಟೋಕಿದೆ. ನನಗೆ ಒಂದು ಸಹಾಯ ಮಾಡ್ತೀರಾ..."
ತಕ್ಷಣ ಕೈ ಜೇಬಿಗೆ ಹಾಕಿಕೊಂಡ ಭೂಷಣ್. ಸಿಗರೇಟು ಎಳೆದು ಬಾಯಿಗೆ ತುರುಕಿಕೊಂಡ. ತುಟಿ ನಡುಗುತ್ತಿತ್ತು.. ಉತ್ತರ ಬರಲು ತಡವಾದುದನ್ನು ಗಮನಿಸಿದ ರೀಟಾ "ಛೆ ಛೆ.. ನಿಮ್ಮಿಂದ ಹಣ ಕೇಳ್ತಿಲ್ಲ ನಾನು. ನಮ್ಮ ಪ್ರೀತಿಯ ಈ ರೀತಿ ಉಪಯೋಗ ಮಾಡಿಕೊಳ್ಳುವಷ್ಟು ಸ್ವಾರ್ಥಿ ನಾನಲ್ಲ ಭೂಷಣ್.. ನನ್ನ ಹತ್ರ ನನ್ನ ಬಂಗಾರದ ಮಂಗಳ ಸೂತ್ರ ಇದೆ.. ಅದನ್ನ ಅಡವಿಟ್ಟು ಸ್ವಲ್ಪ ಹಣ ಅಂದ್ರೆ, ಒಂದು ನಾಲಕ್ಕು ಸಾವಿರ ತಂದು ಕೊಡ್ತೀರಾ ಪ್ಲೀಸ್.."
ವಿಪರೀತ ಧರ್ಮ ಸಂಕಟಕ್ಕೆ ಸಿಲುಕಿದ್ದ ಭೂಷಣ್.. ಆದರೂ ಪ್ರೀತಿಯ ಸೆಳೆತದ ಎದುರು ಬಾಕಿ ಎಲ್ಲ ಯೋಚನೆಗಳು ಸತ್ತು ಹೋದವು.
"ಛೆ, ನಿನ್ನ ಮಂಗಳಸೂತ್ರವನ್ನು ಅಡವಿಡೋದೆ? ನಾನು ಇನ್ನೂ ಜೀವಂತವಿದ್ದೀನಿ ಡಾರ್ಲಿಂಗ್.. ಹತ್ತು ಗಂಟೆ ಸುಮಾರಿಗೆ ರಾಕೇಶನ ಕೈಯಲ್ಲಿ ಹಣ ಕಳಿಸ್ತೀನಿ. ಸರೀನಾ?" ಎಂದು ಹೇಳಿದವನು "ಮುಂದಿನ ವಾರ ನಿನ್ನ ಗಂಡ ಕಳಿಸಿದ ಕೂಡ್ಲೇ ಕೊಟ್ಟು ಬಿಡು ಪರವಾಗಿಲ್ಲ" ಅನ್ನೋದನ್ನೂ ಮರೀಲಿಲ್ಲ.
"ಥ್ಯಾಂಕ್ಯೂ ಭೂಷಣ್.. ಐ ಲಾವ್ ಯೂ ಸೋ ಮಚ್.. ನಿಮಗೆ ನಾನು ಎಷ್ಟು ಕಷ್ಟ ಕೊಡ್ತೀನಲ್ಲ..."
"ಛೆ ಛೆ.. ಹಾಗೇನಿಲ್ಲ ಕಣೆ.. ಪ್ರೀತಿಯಲ್ಲಿ ಅದನ್ನೆಲ್ಲ ಯೋಚಿಸಬಾರದು.."
"ಸರಿ, ರಾಕೇಶನ ಹತ್ರ ಹಣ ಕಳಿಸ್ತೀರಿ ತಾನೆ?"
"ಖಂಡಿತ ಮೈ ಲವ್.."
"ಓಹ್.. ಚಿಂಕಿ ಎದ್ದಳು ಅಂತ ಕಾಣುತ್ತೆ.. ಬಾಯ್ ಭೂಷಣ್".. ಎಂದು ಆತನ ಉತ್ತರಕ್ಕಾಗಿ ಕಾಯದೇ ಫೋನ್ ಇಡುತ್ತಾಳೆ, ರೀಟಾ ದೇವಿ.
ಈ ಹೊಸ ಟೆನ್ಶನ್ನೊಂದು ಅನವಶ್ಯಕವಾಗಿ ಶುರುವಾಯ್ತು. ಬ್ಯಾಂಕಿನಲ್ಲಿರೋದೇ ಹನ್ನೆರಡು ಸಾವಿರ. ಅದರಲ್ಲಿ ನಾಲ್ಕು ಸಾವಿರ ಇವಳಿಗೆ ಕೊಟ್ಬಿಟ್ರೆ.. ಊರಿಗೆ ಹಣ ಕಳಿಸೋಕಿದೆ. ಬ್ಯಾಂಕಿನ ಸಾಲದ ಕಂತು ತುಂಬೋಕಿದೆ. ಸಂಬಳ ಬರೋಕಿನ್ನೂ ಹದಿನೈದು ದಿನ. ಹೇಗೆ ನಡೆಸೋದು ಅನ್ನುವ ಯೋಚನೆಯಲ್ಲಿದ್ದವನಿಗೆ, ಹೇಗಿದ್ರೂ ಮುಂದಿನ ವಾರ ಅವಳ ಗಂಡ ಕಳಿಸಿದ ತಕ್ಷಣ ಅವಳು ಹಣ ಕೊಡ್ತಾಳೆ ಎಂಬ ಯೋಚನೆಯಿಂದ ತುಸು ಸಮಾಧಾನವಾಯ್ತು. ಕುಪ್ಪುಸ್ವಾಮಿಯ ಟಿ ಅಂಗಡೀಲಿ ಒಂದು ಖಾರೀ ಹಾಗೂ ಕಟಿಂಗ್ ಚಹಾ ಸೇವಿಸಿ, ಇನ್ನೊಂದು ಸಿಗರೇಟು ಸುಟ್ಟು ಬಿಲ್ಡಿಂಗಿಗೆ ಮರಳಿದ. ಮುರುಕು ಕುರ್ಚಿಯ ಮೇಲೆ ಮುದುಡಿ ಕುಳಿತಿದ್ದ ವಾಚಮನ್ ಧಿಗ್ಗನೆದ್ದು ಒಂದು ಸೆಲ್ಯೂಟ್ ಹೊಡೆದ.
"ಒಂಬತ್ತು ಗಂಟೆ ಸುಮಾರಿಗೆ, ರಾಕೇಶನ ಮನೆಗೆ ಹೋಗಿ, ನಾನು ಅವನನ್ನು ಕರೀತಾ ಇದೀನಿ ಅಂತ ಹೇಳು" ಎಂದು ವಾಚಮನ್ನನಿಗೆ ಆರ್ಡರ್ ಕೊಟ್ಟ ಭೂಷಣ್, ಮನೆಕಡೆಗೆ ನಡೆದು ಹೋದ.

ಜಗತ್ತಿನಲ್ಲಿ ಯಾರ ಮೇಲೂ ವಿಶ್ವಾಸ ಇರಲಿಲ್ಲ ಭೂಷಣನಿಗೆ. ರಾಕೇಶನನ್ನೊಬ್ಬನನ್ನು ಬಿಟ್ಟರೆ. ಒಳ್ಳೆಯ ಹುಡುಗ. ಮನೆಯಲ್ಲಿ ತುಂಬ ಕಷ್ಟ ಇದೆ. ಬಿ. ಕಾಂ ಕೊನೆಯ ವರ್ಷದಲ್ಲಿದ್ದಾನೆ ಹುಡುಗ. ಹೇಳಿದ ಎಲ್ಲ ಕೆಲಸ ಮಾಡ್ತಾನೆ. ಆತ ಏಳನೇ ತರಗತಿಯಲ್ಲಿದ್ದಾಗಿನಿಂದ ಪರಿಚಯ. ಅವನ ತಂದೆ ಮನೆ ಬಿಟ್ಟು ಓಡಿ ಹೋಗಿದ್ದಾಗಿನಿಂದ ಅವನ ತಾಯಿಯೇ ಸಣ್ಣ ಪುಟ್ಟ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದಾಳೆ. ಭೂಷಣನೇ ಆತನ ಶಾಲೆ-ಕಾಲೇಜಿನ ಫೀಸ್ ತುಂಬಲು ಅಷ್ಟು ಇಷ್ಟು ಸಹಾಯ ಮಾಡಿದ್ದ. ಹೀಗಾಗಿ ರಾಕೇಶನಿಗೆ, ಭೂಷಣ್ ಕಾಕಾ ಅಂದ್ರೆ ಅಪಾರ ಗೌರವ. ಭೂಷಣ್ ಹೇಳುವ ಎಲ್ಲ ಕೆಲಸಗಳನ್ನು ಮಾಡುತ್ತಿದ್ದ ಆತ. ಹೀಗಾಗಿಯೇ ಭೂಷಣ್, ಅವನಿಂದ ಸಾಕಷ್ಟು ಕೆಲಸಗಳನ್ನೂ ಮಾಡಿಸಿಕೊಳ್ಳುತ್ತಿದ್ದ.
ಒಂಬತ್ತಕ್ಕೆ ಇನ್ನೂ ಮೂರು ನಿಮಿಷ ಇರುವಾಗಲೇ ರಾಕೇಶ್, ಮನೆಯಲ್ಲಿ ಹಾಜರಾಗಿದ್ದ. ಅಷ್ಟರಲ್ಲಿ ತಯಾರಾಗಿದ್ದ ಭೂಷಣ್, ಕೈಯಲ್ಲೊಂದು ಚೆಕ್ ಬುಕ್ಕನ್ನು ಹಿಡಿದು ದಕ್ಷಾಳಿಗೆ ಒಂದು ಅಸಹ್ಯ ’ಬಾಯ್’ ಹೇಳಿ ಹೊರಬಂದ. ಇಬ್ಬರೂ ಬ್ಯಾಂಕಿನತ್ತ ನಡೆದರು.
"ರಾಕೇಶ್, ಬ್ಯಾಂಕಿನಿಂದ ನಾಲ್ಕು ಸಾವಿರ ಡ್ರಾ ಮಾಡಿ ಕೊಡ್ತೀನಿ. ಹೋಗಿ ಆ ಮೆಹ್ತಾ ಭಾಭೀ ಇದ್ದಾರಲ್ಲ.. ಅದೇ ಆ ಚಿಂಕಿಯ ಅಮ್ಮ, ಅವರಿಗೆ ಕೊಟ್ಟು ಬಾ. ಅದೇನೋ ಪಾಪ ಟೆನ್ಶನ್ನಲ್ಲಿದ್ದಾರೆ. ನಿನ್ನೆ ಸಂಜೆ ಮನೆಗೆ ಬಂದಾಗ ನನ್ನ ಹೆಂಡ್ತಿಗೆ ಹೇಳ್ತಾ ಇದ್ರಂತೆ.."
ನಿನ್ನೆ ಸಂಜೆ ಮೆಹ್ತಾ ಭಾಭೀ ಅಲಿಯಾಸ್ ರೀಟಾ ಭಾಭೀ, ಭೂಷಣನ ಮನೆಗೆ ಹೋಗಿರಲಿಲ್ಲ ಎಂಬುದು ರಾಕೇಶನಿಗೆ ಚೆನ್ನಾಗಿ ಗೊತ್ತಿತ್ತು. ಇಷ್ಟಿಷ್ಟೇ ಮೂಡಿದ ಮೀಸೆಯಡಿಯಲ್ಲಿಯೇ ಆತ ಸದ್ದಾಗದಂತೆ ನಕ್ಕಿದ್ದು, ಭೂಷಣನಿಗೆ ಕಾಣಿಸಲಿಲ್ಲ.
"ನಾನು ಹಣ ಕೊಟ್ಟದ್ದು ಯಾರಿಗೂ ಹೇಳಬೇಡ. ನಿನಗೆ ಗೊತ್ತಲ್ಲ. ನಮ್ಮ ಬಲಗೈ ಸಹಾಯ ಮಾಡಿದ್ದು ಎಡಗೈಗೂ ಗೊತ್ತಾಗಿರಬಾರದು" ಎಂದ ಭೂಷಣ್. ಆ ಮಾತುಗಳಲ್ಲಿ ಆರ್ಡರ್ ಇತ್ತು.

"ಇಲ್ಲ ಕಾಕಾ.. ಯಾವತ್ತಾದ್ರೂ ನಾನು ಆ ರೀತಿ ಮಾಡಿದ್ದೇನೆಯೇ? ನೀವು ಹೇಳಿದ ಮೇಲೆ ಮುಗೀತು. ನಾನು ಯಾರಿಗೂ ಹೇಳೋಲ್ಲ. ಯಾರಿಗಾದ್ರೂ ಗೊತ್ತಾದ್ರೆ, ನಾನೇ ಹಣ ಕೊಟ್ಟಿದ್ದು ಅಂತ ಹೇಳ್ತೀನಿ. ಸರೀನಾ ಕಾಕಾ?" ಛೇಡಿಕೆಯ ಛಾಯೆ ಇತ್ತು, ರಾಕೇಶನ ಉತ್ತರದಲ್ಲಿ.
ಬ್ಯಾಂಕಿನಿಂದ ಹಣ ತೆಗೆಸಿಕೊಟ್ಟ ಭೂಷಣನಿಗೆ ಒಂದು ವಿಚಿತ್ರ ರೀತಿಯ ಸಮಾಧಾನವಾಗಿತ್ತು. ಹಣ ಪಡೆದುಕೊಂಡು ರಾಕೇಶ್ ಹೊರಟು ಹೋದ. ಭೂಷಣ್ ರೇಲ್ವೇ ಸ್ಟೇಶನ್ನಿನ ಬಳಿ ಹೊರಟ.
ಅಂದು ಶನಿವಾರವಾದದ್ದರಿಂದ. ನಾಲ್ಕು ಗಂಟೆಯ ಸುಮಾರಿಗೆ ಮತ್ತೆ ನಾಲಾಸೋಪಾರಾಕ್ಕೆ ಮರಳಿದ್ದ ಭೂಷಣ್. ಸ್ಟೇಶನ್ನಿನ ಹೊರಗೆ ಬಂದಿದ್ದನಷ್ಟೇ, ಮೂಲೆಯ ಗಾಂವಕರ್ ಸ್ವೀಟ್ ಮಾರ್ಟ್ ನ ಎದುರೇ, ಪರೇಶ್ ಭಾಯಿ ಕಾಣಿಸಿದ.
"ಅಯ್ಯೋ ದೇವರೇ, ಈ ಪೀಡೆ ಇಲ್ಲೇಕೆ ನಿಂತಿದೆ? ಇವನೇನಾದ್ರೂ ನನ್ನನ್ನು ನೋಡಿಬಿಟ್ರೆ, ಮತ್ತೆ ಎಳ್ಕೊಂಡು ಹೋಗ್ತಾನೆ ಬಾರಿಗೆ. ಒಂದೈದು ನೂರು ರೂಪಾಯಿ ಕೈ ಬಿಟ್ಟು ಹೋಗುತ್ತೆ" ಅಂದುಕೊಂಡವನೇ, ಎಡಗಡೆಯ ಗಲ್ಲಿಗೆ ನುಗ್ಗಿದ. ಅಷ್ಟು ದೂರದಿಂದ ಹೇಗೆ ನೋಡಿದನೋ, "ಅರೆ ಭೂಸಣ್ ಭಾಯಿ... ಭೂಸಣ್ ಭಾಯಿ.." ಎಂದು ಕಿರಿಚಿದ ಪರೇಶ್ ಭಾಯಿ.
"ಮುಗಿದು ಹೋಯ್ತು ನನ್ನ ಕತೆ" ಎಂದುಕೊಂಡ ಭೂಷಣ್. ಅಷ್ಟರಲ್ಲಿ ಪರೇಶ್ ಓಡೋಡಿ ಬಂದ.
"ಏ ಹಾಲೋ ಭೂಸಣ್ ಭಾಯಿ.. ಕೇಂ ಛೋ? ಹಾಲೋ, ಆಪಣ್ ಬೈಸಿಯೇ ತುಂಗಾ ಮಾಂ" (ಬಾ, ಕೂತ್ಕೊಳ್ಳೋಣ ತುಂಗಾ ಬಾರ್ ನಲ್ಲಿ)
"ಬೇಡ ಪರೇಶ್ ಭಾಯಿ. ಮನೆಗೆ ಹೋಗೋಕಿದೆ. ಇವತ್ತು ಮೀಟಿಂಗ್ ಇದೆ ಗೊತ್ತಿದೆಯಲ್ಲ ಬಿಲ್ಡಿಂಗಿನಲ್ಲಿ" ಅಂದ ಭೂಷಣ್.
"ಇರಲಪ್ಪ.. ಮೀಟಿಂಗ್ ಇರೋದು ಏಳು ಗಂಟೆಗೆ. ಅಷ್ಟಕ್ಕೂ ಏನು ವಿಶೇಷ ಇದೆ ಇವತ್ತು ಮೀಟಿಂಗಿನಲ್ಲಿ?" ಕೇಳಿದ ಪರೇಶ್ ಭಾಯಿ.
"ಇವತ್ತು ಆ ಬಾರ್ ಗರ್ಲ್ ಮೀನಾಳದ್ದೇನಾದ್ರೂ ಇತ್ಯರ್ಥ ಆಗಲೇಬೇಕು ಪರೇಶ್ ಭಾಯಿ. ಇವತ್ತು ಅವಳನ್ನು ಬಿಲ್ಡಿಂಗಿನಿಂದ ಹೊರ ಹಾಕುವ ಬಗ್ಗೆ ರೆಸಾಲ್ಯೂಶನ್ ಪಾಸ್ ಮಾಡ್ಲೇ ಬೇಕು. ಇಲ್ಲಾಂದ್ರೆ ನಮ್ಮ ಬಿಲ್ಡಿಂಗಿನ ಮರ್ಯಾದೆ ಹೋದೀತು. ಅಷ್ಟೇ" ಎಂದ ಭೂಷಣನ ಮುಖದಲ್ಲಿ ನಿರ್ಧಾರವಿತ್ತು.
ಅಷ್ಟಕ್ಕೂ ಆದದ್ದೇನಪ್ಪ ಅಂದ್ರೆ, ಕೆಲವು ದಿನಗಳ ಹಿಂದೆ, ಜೈ ಜಿನೇಂದ್ರ ಬಿಲ್ಡಿಂಗಿನ ಒಂದು ಮನೆಯವರು, ಮೀನಾ ಎಂಬ ಹುಡುಗಿಗೆ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಸ್ವಲ್ಪ ದಿನಗಳು ಕಳೆದ ನಂತ್ರ ಅವಳೊಬ್ಬಳು ಬಾರ್ ಗರ್ಲ್ ಎಂಬುದು ಗೊತ್ತಾಗಿ, ಬಿಲ್ಡಿಂಗಿನ ಜನರಿಗೆಲ್ಲ - ಮುಖ್ಯವಾಗಿ ಹೆಂಗಸರಿಗೆಲ್ಲ- ಬಹಳ ಕಸಿವಿಸಿಯಾಗಿತ್ತು. ಮರ್ಯಾದಸ್ಥರ ಬಿಲ್ಡಿಂಗೊಂದರಲ್ಲಿ, ಇಂಥ ಬಾರ್ ಗರ್ಲ್ ಗಳು ಇರೋದು ಅಂದ್ರೇನು. ಅವಳನ್ನು ಹೇಗಾದ್ರೂ ಮಾಡಿ,ಬಿಲ್ಡಿಂಗಿನಿಂದ ಹೊರದೂಡಬೇಕು ಎನ್ನುವುದೇ ಎಲ್ಲ ಹೆಂಗಸರ ಆಸೆಯಾಗಿತ್ತು. ಹಾಗೆ ನೋಡಿದರೆ ಪಾಪ, ಅವಳು ಯಾರಿಗೂ ಕಷ್ಟವನ್ನು ಕೊಟ್ಟವಳಲ್ಲ. ಮಧ್ಯಾಹ್ನ ಮೂರೂವರೆಗೆ ಮನೆಯಿಂದ ಹೊರಡುತ್ತಿದ್ದಳು. ರಾತ್ರಿ ಒಂದು ಗಂಟೆಯ ಸುಮಾರಿಗೆ ವಾಪಸ್ಸು ಬರುತ್ತಿದ್ದಳು. ಯಾರ ಜೊತೆಯೂ ಮಾತಾಡುತ್ತಿರಲಿಲ್ಲ. ಆದರೆ ಅವಳು ಬಿಲ್ಡಿಂಗಿಗೆ ಬಂದಾಗಿನಿಂದ, ರಾತ್ರಿ ಹನ್ನೊಂದು ಗಂಟೆಯವರೆಗೆ ಹೊರಗೆ ಪಟ್ಟಾಂಗ ಹೊಡೆದು ಮನೆಯೊಳಗೆ ನುಸುಳುತ್ತಿದ್ದ ಪುರುಷವರೇಣ್ಯರು, ಈಗ ಒಂದು ಗಂಟೆಯವರೆಗೆ ಗೇಟಿನ ಬಳಿಯೇ ಮಾತನಾಡುತ್ತ ನಿಲ್ಲುವುದು, ಅವರವರ ಹೆಂಡತಿಯರಿಗೆ ಅಸಾಧ್ಯ ಸಿಟ್ಟು ತರಿಸಿತ್ತು. ಆಕೆಯನ್ನು ಹೇಗಾದರೂ ಮಾಡಿ ಈ ಬಿಲ್ಡಿಂಗಿನಿಂದ ಹೊರದೂಡಲೇಬೇಕೆಂಬುದು ಅವರ ನಿಲುವಾಗಿತ್ತು. ಬಹಳ ಜನರು ಇದೇ ಮಾತನ್ನು ಬಿಲ್ಡಿಂಗಿನ ಸೆಕ್ರೆಟರಿಯಾದ ಭೂಷಣನಿಗೆ ಹೇಳಿಯೂ ಇದ್ದರು. ಆದರೆ ಭೂಷಣ್, ಈ ಮಾತನ್ನು ಅಷ್ಟಾಗಿ ತಲೆಗೆ ಹಾಕಿಕೊಂಡಿರಲಿಲ್ಲ. ಆದರೆ ಆ ದಿನ ರೀಟಾ ಆತನಿಗೆ ಫೋನ್ ಮಾಡಿ ಕಂಪ್ಲೇಂಟ್ ಮಾಡಿದ್ದಳು.
"ನಿಮಗ್ಗೊತ್ತಾ ಭೂಷಣ್, ಆಕೆ ಬಾರ್ ಡ್ಯಾನ್ಸರ್. ಅಷ್ಟೇ ಅಲ್ಲ ವೇಷ್ಯಾವಾಟಿಕೆಯನ್ನೂ ಮಾಡುತ್ತಾಳೆ. ಇಂಥ ಹೆಂಗಸು ನಮ್ಮ ಸೊಸಾಯಟಿಯಲ್ಲಿದ್ರೆ, ಬಿಲ್ಡಿಂಗಿನ ಮಾನ ಮರ್ಯಾದೆ ಹಾಳಾಗಿ ಹೋಗುತ್ತೆ. ನಮ್ಮ ಮಕ್ಕಳ ಮೇಲೆ ಎಂಥ ಪರಿಣಾಮ ಆಗಬಹುದು. ನಿಮಗ್ಗೊತ್ತಾ, ನಿನ್ನೆ ಅವಳು ಚಿಂಕಿ ಹತ್ರ ಮಾತಾಡಿದಳಂತೆ.. ನಿನಗೆ ಡ್ಯಾನ್ಸ್ ಬರುತ್ತಾ ಚಿಂಕಿ ಅಂತ ಕೇಳಿದಳಂತೆ.. ನನಗೆ ಭಯ ಆಗ್ತಿದೆ ಭೂಷಣ್.. ಅವಳು ನಮ್ಮ ಬಿಲ್ಡಿಂಗಿನಲ್ಲಿರಬಾರದು.."
ರೀಟಾಳ ಬಾಯಿಂದ ಈ ಮಾತು ಬರುತ್ತಲೇ, ಭೂಷಣ್ ದೃಢ ಸಂಕಲ್ಪ ಮಾಡಿಯೇಬಿಟ್ಟಿದ್ದ. ಈ ಜೆನೆರಲ್ ಬಾಡಿ ಮೀಟಿಂಗಿನಲ್ಲಿ ಮೊದಲ ಅಜೆಂಡಾ, ಈ ಮೀನಾಳದ್ದೇ ಅಂದುಕೊಂಡಿದ್ದ.
"ಆಯಿತಪ್ಪ, ಆ ರೆಸಾಲ್ಯೂಶನ್ ಪಾಸ್ ಮಾಡಿಸೋಣ. ಮೊದಲು ಒಂದು ಪೆಗ್ ಹಾಕೋಣ ಬನ್ನಿ" ಮುಂದುವರಿಸಿದ ಪರೇಶ್ ಭಾಯಿ.
"ಇಲ್ಲ ಪರೇಶ್ ಭಾಯಿ, ಚೂರು ಹಣದ ತಾಪತ್ರಯ ಆಗಿದೆ. ಅಲ್ಲದೇ ಇನ್ನು ಕುಡಿಯೋದನ್ನ ನಿಲ್ಲಿಸಬೇಕು ಅಂದ್ಕೊಂಡಿದೀನಿ" ಎಂದು ಪ್ರಾಮಾಣಿಕವಾಗಿಯೇ ಹೇಳಿದ್ದ ಭೂಷಣ್.
"ಛೆ ಛೆ, ಇವತ್ತು ಹಣದ ಟೆನ್ಸನ್ ಮಾಡ್ಕೋಬೇಡಿ ಭೂಸಣ್ ಭಾಯಿ. ಇವತ್ತು ಒಳ್ಳೆ ದಿನ ನನಗೆ. ಇಲ್ನೋಡಿ, ಮೂರೂವರೆ ಸಾವಿರದ ಮಟ್ಕಾ ಹತ್ತಿದೆ ಬನ್ನಿ" ಎಂದು ಹೆಮ್ಮೆಯಿಂದ ಹೇಳುತ್ತ, ನೂರರ ಗರಿ ಗರಿ ನೋಟುಗಳನ್ನು ಜೇಬಿನಿಂದ ತೆಗೆದು ತೋರಿಸಿದ ಪರೇಶ್ ಭಾಯಿ.
ಇಂಥ ಅವಕಾಶಗಳು ಬಾರಿ ಬಾರಿ ಬರೋದಿಲ್ಲ ಎಂದು ಭೂಷಣನಿಗೆ ಚೆನ್ನಾಗಿ ಗೊತ್ತಿತ್ತು.
"ಅದಲ್ದೇ ಒಂದು ತುಂಬಾ ರುಚಿಕರವಾದ ಸುದ್ದಿಯನ್ನೂ ಹಳಬೇಕು ನಿಮಗೆ" ಅಂದ ಪರೇಶ್.
"ಏನದು? ಏನಾಯ್ತು?" ಎಂದು ಕುತೂಹಲದಿಂದ ಕೇಳಿದ ಭೂಷಣ್.
ಆದರೆ ಅಷ್ಟು ಬೇಗ ಎಲ್ಲವನ್ನೂ ಹೇಳಿಬಿಡುವ ಅವಸರ ಪರೇಶ ಭಾಯಿಗೆ ಇರಲಿಲ್ಲ.
ತುಂಗಾ ಬಾರಲ್ಲಿ ಕುಳಿತ ಗೆಳೆಯರು, ಓಲ್ಡ್ ಮಾಂಕ್ ರಂ ಹಾಗೂ ಚನಾ ದಾಲ್ ತರಿಸಿಕೊಂಡರು.
"ಏನೋ ರುಚಿಕರ ಸುದ್ದಿ ಅಂದ್ರಲ್ಲ ಪರೇಶ್ ಭಾಯಿ.. ಏನದು?" ಕೇಳಿದ ಭೂಷಣ್.
"ಹೇಳ್ತೀನಿ. ಆದರೆ ವಿಷಯ ನಮ್ಮಲ್ಲೇ ಇರಲಿ ಭೂಸಣ್ ಭಾಯಿ. ಆ ಮೆಹ್ತಾ ಭಾಭೀ ಇದ್ದಾಳಲ್ಲ.."
ಮೆಹ್ತಾ ಭಾಭೀಯ ಹೆಸರು ಕೇಳಿಯೇ ಭೂಷಣನ ಇಡೀ ಮೈ ನಡುಗಿಹೋಯ್ತು. ಕೈಯಲ್ಲಿದ್ದ ರಂ ಗ್ಲಾಸು ಕೆಳಗೆ ಬೀಳುವುದರಲ್ಲಿತ್ತು. ತುಟಿಗಳದುರಿದವು.
"ನನಗೆ ಮೊದಲಿಂದಲೂ ಸಂಶಯ ಇದ್ದೇ ಇತ್ತು ಭೂಸಣ್ ಭಾಯಿ.." ಎಂದು ಮುಂದುವರಿಸಿದ ಪರೇಶ್ ಭಾಯಿ. ಆತ ತನ್ನ ಮಾತು ಮುಂದುವರಿಸುವ ಮೊದಲೇ
ಭೂಷಣ್ ಆತನಿಗೆ ಸಮಜಾಯಿಶಿ ನೀಡುವ ಪ್ರಯತ್ನ ಮಾಡತೊಡಗಿದ. ಈ ಪರೇಶ್ ಭಾಯಿಗೆ ಗೊತ್ತಾಗಿಬಿಟ್ಟಿದ್ರೆ ಎಲ್ಲ ಮುಗಿದ ಹಾಗೆಯೇ. ಆತ ಬಿಬಿಸಿ ರೇಡಿಯೋ ಇದ್ದ ಹಾಗೆ. ಸಂಜೆಯೊಳಗೆ ಇಡೀ ಬಿಲ್ಡಿಂಗಿಗೆ ನಮ್ಮ ಬಗ್ಗೆ ಗೊತ್ತಾಗುತ್ತದೆ. ಮಾನ ಮರ್ಯಾದೆಯೂ ಹೋಗುತ್ತೆ. ದಕ್ಷಾ ಎದೆ ಒಡೆದುಕೊಂಡು ಸತ್ತೇ ಹೋಗಬಹುದು. ಆಮೇಲೆ, ಮುಂಜಾನೆ ರೀಟಾಗೆ ಕೊಟ್ಟ ನಾಲ್ಕು ಸಾವಿರಾನೂ ಹೋಗುತ್ತೆ. ಇಷ್ಟೆಲ್ಲ ರಂಪ ಆದ ಮೇಲೆ ಅವಳಲ್ಲಿ ಹಣ ಕೇಳೋಕಾಗುತ್ತದೆಯೇ?
"ಹಾಗೇನಿಲ್ಲ ಪರೇಶ್ ಭಾಯಿ. ಜನಾ ಎಲ್ಲ ಮಾತಾಡ್ಕೊಳ್ತಾರೆ. ನಿನಗ್ಗೊತ್ತಲ್ಲ, ನಾನು ಅಂಥವನಲ್ಲ. ಮತ್ತೆ ಪಾಪ ಆ ಹೆಂಗಸು ತುಂಬ ಒಳ್ಳೆಯವರು. ಜನರು ಆಡೋ ಮಾತನ್ನು ಕೇಳಿ ನೀವು ನಮ್ಮ ಮೇಲೆ.." ಆತ ಇನ್ನೂ ಮಾತು ಮುಗಿಸಿಯೇ ಇರಲಿಲ್ಲ, ಅಷ್ಟರಲ್ಲಿ ಪರೇಶ್ ತನ್ನ ರಾಗ ಎಳೆದ.
"ಅರೆ ಭೂಸಣ್ ಭಾಯಿ, ನೀವು ತುಂಬ ಮುಗ್ಧರು. ಎಂತೆಂಥ ಜನಾ ಇರ್ತಾರೆ ಅನ್ನೋದು ನಿಮಗೆ ಗೊತ್ತಿಲ್ಲ. ಅದರಲ್ಲೂ ಈ ಹೆಂಗಸಿದ್ದಾಳಲ್ಲ, ಅರೆರೆರೆ, ಭಯಂಕರ ಹೆಂಗಸಾಕೆ. ಅದೆಷ್ಟು ಸುಲಭವಾಗಿ ಗಂಡಸರನ್ನ ಬುಟ್ಟಿಗೆ ಹಾಕಿಕೊಳ್ತಾಳೆ ಅಂದ್ರೆ.."
ಭೂಷಣನ ಮೈನಡುಕ ಇನ್ನೂ ಹೋಗಿರಲಿಲ್ಲ. ಅಸಾಧ್ಯ ಸಿಟ್ಟೂ ಬರತೊಡಗಿತು. ಯಾರ ಬಗ್ಗೆ ಮಾತನಾಡುತ್ತಿದ್ದಾನಿವನು? ಎಷ್ಟು ಧೈರ್ಯ ಇವನಿಗೆ? ನಾನು ಮನಸಾರೆ ಪ್ರೀತಿಸುವ ಹೆಣ್ಣು ಆಕೆ. ನನ್ನಿಂದ ಏನೂ ಬಯಸಿಲ್ಲ. ಕೇವಲ ನಿಶ್ಕಲ್ಮಶ ಪ್ರೀತಿ ಕೊಟ್ಟವಳು. ಗಂಡನಿಂದ ಪ್ರೀತಿ ಸಿಕ್ಕಿಲ್ಲ. ಆ ಪ್ರೀತಿ ನಾನು ಕೊಟ್ಟೆ ಅಂತ ನಿಜವಾದ ಪ್ರೀತಿಯನ್ನರಸಿ ನನ್ನಲ್ಲಿಗೆ ಬಂದಿದ್ದಾಳೆ. ಅಂಥ ಒಬ್ಬ ನಿಷ್ಪಾಪಿ ಹೆಂಗಸನ್ನ ಈ ಕುಡುಕ ಹೀಗೆ ಬಯ್ಯುವುದೆ? ಸಾಧ್ಯವಾದರೆ ಇವನನ್ನು ಕೊಂದೇ ಹಾಕಬೇಕು ಎಂದುಕೊಂಡ ಭೂಷಣ. ಕೊಂದೇಬಿಟ್ಟಿರುತ್ತಿದ್ದ. ಆದರೆ ಆವತ್ತಿನ ಬಿಲ್ ಕೊಡಬೇಕಾದದ್ದು ಪರೇಶ್ ಭಾಯಿ ಎಂಬುದು ನೆನಪಾಗಿತ್ತು.
"ಛೆ ಛೆ, ಏನು ಮಾತಾಡ್ತೀ ಪರೇಶ್ ಭಾಯಿ. ಆ ಹೆಂಗಸು ಅಂಥವಳಲ್ಲಪ್ಪ" ಎಂದ ಬಹಳ ಪ್ರಯಾಸದಿಂದ.
"ನಾನೇ ಸ್ವತಹ ನೋಡಿದೆ ಭೂಸಣ್ ಭಾಯಿ ಇವತ್ತು." ಎಂದ ಪರೇಶ್.
"ಇವತ್ತಾ? ಏನು ನೋಡಿದಿ?" ಆಶ್ಚರ್ಯದಿಂದ ಕೇಳಿದ ಭೂಷಣ್. ಇವತ್ತು ತಾನು ರೀಟಾಳನ್ನ ಭೇಟಿಯೇ ಆಗಿಲ್ಲ.
"ಹೂಂ. ಇವತ್ತು ಮನೆಯಿಂದ ಕೆಳಗೆ ಇಳೀತಾ ಇದ್ದೆ. ಆ ರಾಕೇಶ ಇದ್ದಾನಲ್ಲ, ಆತ ಅವಳ ಮನೆಗೆ ನುಗ್ಗಿದ.."
"ಓಹೋ, ಹಾಗೋ ವಿಷಯ. ಏನಯ್ಯ ನೀನು ಪರೇಶ್. ನಿನಗ್ಗೊತ್ತಾ ಆ ರಾಕೇಶನನ್ನು ಅವಳ ಮನೆಗೆ ಕಳಿಸಿದ್ದೇ ನಾನು. ಮೆಹ್ತಾ ಭಾಭಿಗೆ ಸ್ವಲ್ಪ ಹಣ ಬೇಕಿತ್ತಂತೆ. ನಾನೇ ವಿಡ್ರಾ ಮಾಡಿ, ರಾಕೇಶನ ಕೈಯಲ್ಲಿ ಕಳಿಸಿಕೊಟ್ಟಿದ್ದೆ" ಸ್ವಲ್ಪ ಧೈರ್ಯ ಬಂದಂತಾಗಿತ್ತು ಭೂಷಣನಿಗೆ.
"ಸ್ವಲ್ಪ ಮುಂದೆ ಕೇಳು ಭೂಸಣ್ ಭಾಯಿ. ನನಗೆ ಮೊದಲಿಂದ್ಲೂ ಅವರಿಬ್ಬರ ಮೇಲೆ ಒಂದು ಡೌಟ್ ಇತ್ತು. ನಾನು ಕೆಳಗೆ ಗೇಟ್ ಬಳಿಯೇ ನಿಂತಿದ್ದೆ. ಅರ್ಧ ಗಂಟೆ ಆದ್ರೂ ಈ ಹುಡುಗ ಅವಳ ಮನೆಯಿಂದ ಬರಲೇ ಇಲ್ಲ. ನನಗೆ ಗ್ಯಾರಂಟೀ ಆಯ್ತು. ಒಳಗೆ ಏನೋ ನಡೀತಾ ಇದೆ ಅಂತ" ತನ್ನ ಗರಮಾಗರಂ ಸುದ್ದಿಯನ್ನು ಪರೇಶ್ ಭಾಯಿ ನೀಡುತ್ತಲೇ ಇದ್ದ.
ಭೂಷಣನ ಎದೆಯಲ್ಲಿ ಸಂಕಟ. ಆ ಬಡ್ಡಿ ಮಗ ಅರ್ಧ ಗಂಟೆ ಅವಳ ಮನೆಯಲ್ಲಿ ಏನು ಮಾಡುತ್ತಿರಬಹುದು? ನಿಜಕ್ಕೂ ಪರೇಶ್ ಹೇಳುವ ಹಾಗೆ ರಾಕೇಶ್ ಮತ್ತೆ ರೀಟಾ ಮಧ್ಯೆ... ಛೆ ಛೆ ಸಾಧ್ಯವಿಲ್ಲದ ಮಾತು. ರೀಟಾ ಅಂಥವಳಲ್ಲವೇ ಅಲ್ಲ. ಅವಳು ಕೇವಲ ನನ್ನನ್ನು ಮಾತ್ರ ಪ್ರೀತಿಸ್ತಾಳೆ. ಇಬ್ಬರೂ ಪಾಪ ಏನೋ ಪಟ್ಟಾಂಗ ಹೊಡೆಯುತ್ತ ಕೂತಿರಬಹುದು. ಅದನ್ನೇ ತಿರುಚುತ್ತಿದ್ದಾನೆ ಈ ನಾಲಾಯಕ್ ನನ್ಮಗ.
"ಏನು ಅಂತ ಮಾತಾಡ್ತೀಯಾ ಪರೇಶ್ ಭಾಯ್. ಅರ್ಧ ಗಂಟೆ ಆತ ಅವಳ ಮನೆಯಲ್ಲಿ ಕೂತಿದ್ದ ಅಂದ ಮಾತ್ರಕ್ಕೆ, ಅವರಿಬ್ಬರ ಮಧ್ಯೆ ಏನೋ ಇದೆ ಅಂತ ಹೇಳ್ತಿದ್ದೀಯಲ್ಲ, ನಿನಗೆ ನಾಚಿಕೆ ಆಗ್ಬೇಕು. ಮೆಹ್ತಾಭಾಭಿಯ ವಯಸ್ಸೇನು, ಆ ಹುಡುಗನ ವಯಸ್ಸೇನು.. ಛೆ.."
"ಆ ಹುಡುಗ ಕಾಲೇಜಿನಲ್ಲಿ ಕಲಿಯುತ್ತಿದ್ದಾನೆ. ಭೂಸಣ್ ಭಾಯ್. ಅವನ ವಯಸ್ಸಿನಲ್ಲಿ, ನನ್ನ ಮದುವೆ ಆಗಿತ್ತು. ಕತೆ ಇನ್ನೂ ಮುಗಿದಿಲ್ಲ, ಮುಂದೆ ಕೇಳು" ಎಂದು ಗದರಿಸಿದ ಪರೇಶ್.
ಇನ್ನೊಂದು ಪೆಗ್ ತರಿಸಿದ ಭೂಷಣ್.
"ನಾನು ಹೋಗಿ, ಚೌರಸಿಯಾನ ಅಂಗಡಿಯಲ್ಲಿ ಮಾವಾ ತೊಗೊಳ್ತಾ ಇದೀನಿ, ಅಷ್ಟರಲ್ಲಿ ರಾಕೇಶ್ ಬಂದ. ಜೇಬಿನಿಂದ ಒಂದು ಪೊಟ್ಟಣ ತೆಗೆದು, ಕಚರಾಪೇಟಿಯಲ್ಲಿ ಹಾಕಿದ. ಒಂದು ಸಿಗರೇಟ್ ತೊಗೊಂಡು ಅಲ್ಲಿಂದ ಹೊರಟು ಹೋದ. ಚೌರಸಿಯಾ ನಕ್ಕಿದ್ದು ನೋಡಿ, ನಾನು ಅವನಿಗೆ ಕೇಳಿದೆ, ಏನಾಯ್ತೂಂತ. ಚೌರಸಿಯಾ ಹೇಳಿದ, ನಿಮ್ಮ ಬಿಲ್ಡಿಂಗಿನ ಮಕ್ಕಳು ದೊಡ್ಡವರಾದರು ಸ್ವಾಮಿ. ಆ ಹುಡುಗ ಆಗ ಬಂದು ಕಾಂಡಮ್ ಪ್ಯಾಕೇಟ್ ತೊಗೊಂಡುಹೋದ ಅಂತ. ನನಗೆ ನಂಬೋಕಾಗಲಿಲ್ಲ. ರಾಕೇಶ್ ಎಸೆದ ಪೊಟ್ಟಣ ತೆಗೆದು ನೋಡ್ತೀನಿ. ಯೂಸ್ ಮಾಡಿದ ಕಾಂಡಮ್. ಈಗೇನಂತೀರಿ ಭೂಸಣ್ ಭಾಯ್? ಬೇಕಿದ್ರೆ ಕೇಳಿ ಚೌರಸಿಯಾಗೆ"
ಭೂಷಣನ ಬಾಯಿಂದ ಮಾತೇ ಹೊರಡಲಿಲ್ಲ. ಒಂದು ಪೆಗ್ ಎರಡಾಯ್ತು. ಎರಡು- ನಾಲ್ಕಾಯ್ತು.
ಜೈ ಜಿನೇಂದ್ರ ಕೋ-ಆಪ್ ಹೌಸಿಂಗ್ ಸೊಸಾಯಟಿ ಲಿಮಿಟೆಡ್ ನ ಜೆನೆರಲ್ ಬಾಡಿ ಮೀಟಿಂಗ್ ಶುರುವಾಯ್ತು. ಪ್ರತಿಯೊಂದು ಮನೆಯಿಂದ ಒಬ್ಬ ಪ್ರತಿನಿಧಿ ಮೀಟಿಂಗಿನಲ್ಲಿ ಹಾಜರಿದ್ದ. ಬಾರ್ ಗರ್ಲ್ ಮೀನಾಳನ್ನು ಈ ಬಿಲ್ಡಿಂಗಿನಿಂದ ಓಡಿಸಲೇಬೇಕೆಂಬ ನಿರ್ಧಾರ ಪ್ರತಿಯೊಬ್ಬರು ಮಾಡಿಕೊಂಡೇ ಬಂದಿದ್ದರು.
"ಎಜೆಂಡಾ ಏನು ಭೂಷಣ್ ಭಾಯಿ?" ಅಂತ ಯಾರೋ ಕೇಳಿದರು. ನಡುಗುತ್ತ ಎದ್ದು ನಿಂತ ಭೂಷಣ್ ಭಾಯಿ. ಕಾಲುಗಳಲ್ಲಿ ಶಕ್ತಿಯೇ ಇರಲಿಲ್ಲ. ಸಂಪೂರ್ಣ ಎರಡು ಕ್ವಾರ್ಟರ್ ರಂ ಹೊಟ್ಟೆಯೊಳಗಿತ್ತು. ತಲೆ ಹಾಳಾಗಿತ್ತು.
"ನಮ್ಮದು ಮರ್ಯಾದಸ್ಥರ ಸೊಸಾಯಟಿ. ಇಲ್ಲಿ ವೇಷ್ಯೆಯರಿರುವುದು ನಮಗೆಲ್ಲ ಅಪಮಾನದ ಸಂಗತಿ. ರೀಟಾಳಂಥ ಬಾರ್ ಗರ್ಲ್ ಗಳು, ಇಡೀ ಸಮಾಜಕ್ಕೇ ಕುತ್ತು ತರ್ತಾರೆ. ಈ ರೀಟಾಳಂಥ ವೇಷ್ಯೆಯರಿದ್ದರೆ, ನಾಳೆ ನಮ್ಮ ಮಕ್ಕಳು ತಪ್ಪು ದಾರಿ ಹಿಡೀತಾರೆ. ರೀಟಾಳನ್ನು ತಕ್ಷಣ ಇಲ್ಲಿಂದ ಓಡಿಸಲೇಬೇಕು...."

ಜನ ಅವಾಕ್ಕಾಗಿ ನಿಂತಿದ್ದರು...

ಮುಂಬಯಿ ಮುಖಗಳು ಭಾಗ ೧.....


ಸದಾ ತಡವಾಗಿ ಓಡುವ ಲೋಕಲ್ ಟ್ರೇನುಗಳ ರಭಸ, ಸತ್ತ ಮೀನುಗಳೇ ತುಂಬಿರುವ ಬುಟ್ಟಿಗಳ ನಾರು ವಾಸನೆ, ರೈಲು ಹಳಿಯುದ್ದಕ್ಕೂ ಮೈ-ಮರೆತು ಪ್ಲಾಸ್ಟಿಕ್ ತಂಬಿಗೆ ಹಿಡಿದು ಕೂತಿರುವ ಭಯ್ಯಾಗಳ ಕೄತಘ್ನತೆ, ಯಾವ ಬಾಂಬು ಎಲ್ಲಿ ಸಿಡಿಯುವುದೋ ಎಂಬ ಕರಿ ಭಯದ ನೆರಳಲ್ಲೇ ಎದ್ದು ಮೈ ಮುರಿಯುತ್ತದೆ ಮುಂಬಯಿ. ದೂರದ ಬ್ಯಾಂಡ್ ಸ್ಟಾಂಡ್ ನಲ್ಲಿ ಚರಸ್ ಸೇವಿಸಿ, ಹೈರಾಣಾಗಿ, ಗೆಳೆಯನ ಅಪ್ಪನ ಕ್ವಾಲಿಸ್ ಗಾಡಿಯಲ್ಲಿ ಕುಳಿತು ಮನೆಗಡೆ ಹಿಂದಿರುಗುವ ಯೋಚನೆಯಲ್ಲಿ ಕಾಲ್ ಸೆಂಟರ್ ನ ಹೈ-ಟೆಕ್ ಹೈಕಳು ಚರ್ಚಿಸುತ್ತಿದ್ದರೆ, ಈಚೆ ಗಡದ್ದಾಗಿ ಹೊದ್ದು ಮಲಗಿದ ಲಕ್ಷ್ಮಣ ಭಾವೂ ಸುರ್ವೆ ಚಾಳಿನ ಹದಿನೇಳನೇ ನಂಬರ್ ಮನೆಯಲ್ಲಿ ದೀಪ ಝಗ್ಗನೇ ಬೆಳಗುತ್ತದೆ. ವಸಂತರಾವ್ ವಿಠೋಬಾ ಪಾರಂಗೆಯ ಅರೆ-ತೆರೆದ ಕಣ್ಣುಗಳು, ಆತನಿಗೆ ಎಂದೂ ಮೋಸ ಮಾಡಿಲ್ಲ. ಅಡ್ಡಾದಿಡ್ಡಿ ಮಲಗಿದ ಮಕ್ಕಳಿಗೆ ಕಾಲು ತಾಕದಂತೆ ಎಚ್ಚರವಹಿಸಿ, ಚೊಂಬು ಹಿಡಿದು ಆತ ಮೆಲ್ಲನೆ ಹೊರಬರುತ್ತಾನೆ. ಹದಿನಾರು ವರ್ಷಗಳೇ ಕಳೆದು ಹೋಗಿವೆ ನೋಡಿ, ಆತ ಚಾಳಿನ ಪಾಯಖಾನೆಯ ಬಳಕೆಗಾಗಿ ಲೈನಿನಲ್ಲಿ ನಿಂತಿರುವವರ ಜೊತೆ ಜಗಳವಾಡಿ. ಜಗಳಾಡಲು, ಮೂರೂ ಮುಕ್ಕಾಲರ ’ಮಟಮಟ’ ಮುಂಜಾನೆ ಅಲ್ಲಿ ಯಾರಿರುತ್ತಾರೆ? ಪಾಯಖಾನೆಯ ಬಳಿ ಮಲಗಿರುತ್ತಿದ್ದ ಮೋತಿ ಕೂಡ ಹೋದ ಸಾಯಿಬಾಬಾ ದಿಂಡಿಯ ದಿನ ಸತ್ತು ಹೋಯ್ತು. ಆವತ್ತಿನಿಂದ ಪಾರಂಗೆ ಕಾಕಾನ, ಮುಂಜಾವಿನ ಗುಣು ಗುಣು ಭಜನೆಯನ್ನು ಕೇಳುವವರೆ ಇಲ್ಲ. ಪಾರಂಗೆ ಕಾಕಾನ ಬಳಿ ಮರಾಠಿ ಭಜನೆಗಳ ಭಾಂಡಾರವೇ ಇದೆ. "ಆಜ ಆನಂದೀ ಆನಂದ ಝಾಲಾ..", "ವಿಠೂ ಮಾವುಲೀ ತೂ ಮಾವುಲೀ ಜಗಾಚೀ..", " ಬಾಬಾಂಚಾ ಝಾಲಾ ಪ್ರಸಾದ...", ಹೀಗೆ ಒಂದೇ, ಎರಡೇ?. ಪಾರಂಗೆ ಕಾಕಾ ಹಾಡಲು ಕುಳಿತರೆಂದರೆ, ಚಾಲಿಗೆ ಚಾಳೇ ಕಿವಿಯಾಗುತ್ತದೆ. ನಿನ್ನೆ ಸಂಜೆ ತಂದ ಕ್ಯಾಸೆಟ್ ನ ಹೊಸ ಹಾಡೊಂದನ್ನು ಗುಣಗುಣಿಸುತ್ತ, ಕಾಕಾ ಪಾಯಖಾನೆಯ ಬಳಿ ಹೆಜ್ಜೆ ಹಾಕುತ್ತಿದ್ದರೆ, ಅದಕ್ಕೆ ತಾಳ ಹಾಕುವಂತೆ, ಫನ್ಸೆಕರ್ ಮಾವಶಿಯ ಭಯಾನಕ ಕೆಮ್ಮು. "ಈ ಮುದುಕಿ ರಾತ್ರಿ ಇಡೀ ಕೆಮ್ಮುತ್ತೆ. ಹ್ಯಾಗಾದ್ರೂ ಸಹಿಸ್ತಾರೊ ಆ ಜನ? ರಾತ್ರಿ ಅವಕ್ಕೆ ನಿದ್ದೆಯಾದ್ರೂ ಬರುತ್ತೋ? ಒಂದೇ ಒಂದ್ಸಲ ಸತ್ತಾದ್ರೂ ಹೋಗ್ಬಾರದೆ ಈ ಗೊಡ್ಡು" ಎಂದು ಒಂದು ಕ್ಷಣ ಅಂದುಕೊಳ್ಳುತ್ತಾರೆ ಪಾರಂಗೆ ಕಾಕಾ. ಆದರೆ ವಿನಾಯಕನಿಗೆ ಆಕ್ಸಿಡೆಂಟ್ ಆದಾಗ, ದಿನ ರಾತ್ರಿ ಅನ್ನದೇ ಅವನನ್ನು ನೋಡಿಕೊಂಡದ್ದು ಅದೇ ಮುದುಕಿಯಲ್ಲವೇ ಎಂಬುದು ನೆನಪಾಗಿ ತಮ್ಮ ಯೋಚನೆಗೆ ತಾವೇ ಪಶ್ಚಾತ್ತಾಪ ಪಡುತ್ತ, ತಮ್ಮ ಭಜನೆಯನ್ನು ಮುಂದುವರಿಸುತ್ತ, ನಿರ್ಭೀತರಾಗಿ ಪಾಯಖಾನೆಯೊಳಗೆ ನುಗ್ಗುತ್ತಾರೆ.

"ಇವರ ಭಜನೆಗಳೆಂದರೆ, ಇವರ ಆಫೀಸಿನಲ್ಲೇ ವರ್ಲ್ಡ್ ಫೇಮಸ್, ಗೊತ್ತಾ?" ಎಂದು ಯಾವತ್ತೂ ನೆರೆಕೆರೆಯವರಲ್ಲಿ ಒಣಗಿದ ಎದೆಯನ್ನುಬ್ಬಿಸಿ ಹೇಳುತ್ತಾರೆ ಸಾವಿತ್ರಿತಾಯಿ. ಅಮ್ಮನ ಈ ಮಾತು ಕೇಳಿ, ಪಾಲಿಟಿಕಲ್ ಸಾಯನ್ಸ್ ಪಠ್ಯಪುಸ್ತಕದಲ್ಲಿ ಅಡಗಿರುವ, ಕಾಮಕೇಳಿಯಲ್ಲಿ ಮುಳುಗಿರುವ ಬಿಳಿ-ಬಿಳಿ ವಿದೇಶೀಯರ ಫೋಟೊವನ್ನು ನಿಬ್ಬೆರಗಾಗಿ ನೋಡುತ್ತಿರುವ ವಿನಾಯಕ ಕೂಡ ಒಮ್ಮೆ ನಕ್ಕುಬಿಡುತ್ತಾನೆ. ಅವರ ಆ ಮಾತಿನಲ್ಲಿ ಅದೆಷ್ಟು ನಿಜಾಂಶವಿದೆಯೋ ಗೊತ್ತಿಲ್ಲ. ಆದರೆ, ಮುಂಜಾನೆ ೫.೧೨ ಕ್ಕೆ ವಿರಾರ್ ಪ್ಲಾಟಫಾರ್ಮಿನಿಂದ, ಚರ್ಚಗೇಟ್ ಕಡೆಗೆ ಹೊರಡುವ ಆ ಲೋಕಲ್ ಟ್ರೇನಿನ ಕೊನೆಯ ಬೋಗಿಯಲ್ಲಿ ಪಾರಂಗೆ ಕಾಕಾ ಕಂಡುಬರದಿದ್ದರೆ, ಇಡೀ ಬೋಗಿಯೇ ’ಭಣ-ಭಣ’ ಅನ್ನೋದಂತೂ ನಿಜ. ಅವರಿಗಾಗಿಯೇ ಆ ಬೋಗಿಯಲ್ಲೊಂದು ಸೀಟು ರಿಸರ್ವ್ ಆಗಿರುತ್ತೆ. ಅವರು ತಡವಾಗಿ ಬಂದರೂ ಚಿಂತೆಯಿಲ್ಲ. ಮೊದಲೇ ಬಂದು ಜಾಗ ಹಿಡಿದ ಸ್ವಪ್ನಿಲ್ ಪಾಂಚಾಳ್, ಪಾರಂಗೆ ಕಾಕಾ ಟ್ರೇನ್ ಹತ್ತಿದ ಕೂಡಲೇ ಅವರಿಗಾಗಿ ಜಾಗ ತೆರವು ಮಾಡಿಕೊಡುತ್ತಾನೆ. ನೋಡ-ನೋಡುತ್ತಿದ್ದಂತೆ, ೮ ಜನರು ಕೂಡಬಹುದಾದ ಆ ಜಾಗದಲ್ಲಿ ಹದಿನಾಲ್ಕು ಜನರ ತಂಡ ತಾಳ, ಗೆಜ್ಜೆ ಹಿಡಿದು ಸಿದ್ಧಾರಾಗಿರುತ್ತಾರೆ. ಟ್ರೇನಿನ ಕಿಟಕಿಯ ಮೇಲಿನ ತಗಡು ಭಾಗವೇ ಅವರಿಗೆ ತಬಲಾ. ಆ ಪೋರ ತುಷಾರ್ ಕೆಣಿ ಅದೆಷ್ಟು ಚೆನ್ನಾಗಿ ತಗಡು ಉರ್ಫ್ ತಬಲಾ ಬಾರಿಸುತ್ತಾನೆ. ತಾವು ಹಾಡುವಾಗ, ಎಲ್ಲಿ ಎತ್ತಬೇಕು, ಯಾವಾಗ ಮುರ್ಕೀ ಹೊಡೆಯಬೇಕು, ಯಾವಾಗ ತಾಳವನ್ನು ಡಬಲ್ ಮಾಡಬೇಕು, ಎಲ್ಲ ಅವನಿಗೆ ಸರಿಯಾಗಿ ಗೊತ್ತಿದೆ. ಈ ಜನ್ಮದಲ್ಲಿ ಯಾವತ್ತಾದ್ರೂ ತನಗೆ ಸುರೇಶ್ ವಾಡ್ಕರ್ ನ ಪರಿಚಯವಾದ್ರೆ, ಈ ಹುಡುಗನ ಪರಿಚಯವನ್ನೂ ಅವರಿಗೆ ಮಾಡಿಕೊಡಬೇಕು, ಎಂದು ಪ್ರಾರಂಭವಾದ ಯೋಚನಾಸರಣಿ, ಮಗಳು ಸ್ನೇಹಾಳ ಮದುವೆ ಇವನ ಜೊತೆ ಆದ್ರೆ ಚೆನ್ನಾಗಿರಬಹುದೇ, ಎಂಬಲ್ಲಿಯವರೆಗೆ ಓಡುತ್ತೆ. ಥತ್, ಬೇಡ ಬೇಡ. ಬಾಯ್ತುಂಬ ಗುಟ್ಕಾ ತಿನ್ನುತ್ತಾನೆ ಈ ಬಡ್ಡಿ ಮಗ. ನನ್ನ ಹುಡುಗಿಗೆ ಇವನ ಜೊತೆ ಮದುವೆಯೇ? ಹೇಗಿದ್ರೂ ವರ್ಲಿಯ ಸಾವಂತ್ ಕಾಕಿ ಸ್ನೇಹಾಳಿಗೋಸ್ಕರ ಹುಡುಗನನ್ನು ಹುಡುಕುವ ಜವಾಬ್ದಾರಿ ತೊಗೊಂಡಾಗಿದೆ. ಮತ್ಯಾಕೆ ನನಗೆ ಈ ಯೋಚನೆ ಅಂದುಕೊಳ್ಳುತ್ತಾ, ತಮ್ಮ ಬಾಯಿಯಲ್ಲಿರುವ ತಂಬಾಕೂವನ್ನು, ಕಿಟಕಿಯಿಂದ ಹೊರಕ್ಕೆ ಹಾಕಿ, ಗಂಟಲನ್ನು ರೆಡಿ ಮಾಡುತ್ತಾರೆ. ವಿನಾಯಕನಿಗೆ ಅದೆಷ್ಟು ಸಲ ಹೇಳಿಲ್ಲ ’ತಬಲಾ ಕಲಿಯೋ’ ಅಂತ. ಆ ಮಹಾಶಯ ಯಾವತ್ತು ನನ್ನ ಮಾತನ್ನು ಕೇಳಿದ್ದಾನೆ?

ಇನ್ನೇನು ಗಾಡಿ ಹೊರಡಲು ಸಿದ್ಧವಾಗಿದೆ ಅಂದಾಗ, ಕಿಟಕಿಗೆ ನೇತು ಹಾಕಿದ ಗಣಪತಿಯ ಚಿಕ್ಕ ಫೋಟೊಗೆ, ಎಲ್ಲರೂ ಭಯಭಕ್ತಿಗಳಿಂದ ನಮಿಸಿ "ವಕ್ರತುಂಡ ಮಹಾಕಾಯ..." ದ ಹರಕೆ ಸಲ್ಲಿಸಿ, ತಮ್ಮ ತಮ್ಮ ಆಯುಧಗಳನ್ನು ಹಿಡಿದುಕೊಳ್ಳುತ್ತಾರೆ. ಪಾರಂಗೆ ಕಾಕಾ, ಮತ್ತೊಮ್ಮೆ ತಮ್ಮ ಗಂಟಲನ್ನು ಶುದ್ಧೀಕರಿಸಿ "ಓಂ" ಎಂದು ಏರು ಸ್ವರದಲ್ಲಿ ಪ್ರಾರಂಭಿಸಿದರೋ, ಇಡೀ ೫.೧೨ರ ಕೊನೆಯ ಬೋಗಿ ಪುಳಕಿತಗೊಳ್ಳುತ್ತದೆ.

ಪಾರಂಗೆ ಕಾಕಾ, ಪರೇಲಿನ ಶಿಥಿಲವಾದ, ಪಾಳು-ಬೀಳಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಮೂವತ್ತು ವರ್ಷಗಳ ಹಿಂದೆ, ಅಟೆಂಡರ್ ಆಗಿ ನೌಕರಿಗೆ ಸೇರಿದ್ದರು ಕಾಕಾ. ತಮ್ಮ ಪರಿಶ್ರಮ ಹಾಗೂ ಕಲಿಯುವ ಅದಮ್ಯ ಬಯಕೆಗಳ ಬಲದಿಂದ, ಇಂದು ಟರ್ನರ್-ಫಿಟ್ಟರ್ ಆಗಿ ಭಡ್ತಿ ಹೊಂದಿದ್ದಾರೆ. ಕಂಪನಿಯ ವಾರ್ಷಿಕೋತ್ಸವದಲ್ಲಿ, ಗಣೇಶೋತ್ಸವದಲ್ಲಿ, ಆರತಿ, ಭಜನೆ, ಹಾಡಿನ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ಪಾರಂಗೆ ಕಾಕಾನದ್ದು. ಅವರ ಭಜನೆಗಳನ್ನು ಕೇಳಿ, ಕಂಪನಿಯ ಸೂಟು ಬೂಟಿನ ಎಂ ಡಿ ಕೂಡ ತಲೆದೂಗುತ್ತಾರಂತೆ. ಪ್ರತಿ ವರ್ಷ ಪಾರಂಗೆ ಕಾಕಾ ಹಾಡುವ "ದೇವಾಚಿಯೇ ದ್ವಾರೀ.." ಹಾಡಿಗೆ ಒನ್ಸ್ ಮೋರ್ ಬಂದೆ ಬರುತ್ತದೆ. ಎಂ ಡಿ ಸಾಹೇಬರು ಖುಷಿಯಾಗಿ ನೂರರ ನೋಟೊಂದನ್ನು ಬಹುಮಾನವಾಗಿ ನೀಡುತ್ತಾರೆ. ಛೆ!! ವಿನಾಯಕ, ತಬಲಾ ಕಲಿತಿದ್ದರೆ!!! ನನ್ನ ಹಾಡು, ವಿನಾಯಕನ ತಬಲಾ!!

ಮೊದಲು ಮಧ್ಯಾಹ್ನದ ಶಿಫ್ಟ್ ನಲ್ಲಿದ್ದರು. ಈಗ ಕಳೆದ ಹದಿನಾರು ವರ್ಷಗಳಿಂದ ಮುಂಜಾನೆಯ ಶಿಫ್ಟು. ಈ ಮೂವತ್ತು ವರ್ಷಗಳಲ್ಲಿ ಎಷ್ಟೆಲ್ಲ ಬದಲಾಗಿ ಹೋಗಿದೆ. ಫ್ಯಾಕ್ಟರಿಯ ಹೊರಗಿದ್ದ, ನರ್ಸೀ ಭಾಯಿಯ ಚಹಾದಂಗಡಿ ಈಗ ಇಲ್ಲ. ಅಲ್ಲಿ ರಾಘು ಶೆಟ್ಟಿಯ ಬಿಯರ್ ಬಾರ್ ಬಂದಿದೆ. ಹಿಂಭಾಗದಲ್ಲಿದ್ದ ವಿಶಾಲ ಮೈದಾನದಲ್ಲಿ ಹೊಸದೊಂದು ’ಮಾಲ್’, ರಾಕ್ಷಸನಂತೆ ಬೆಳೆದು ನಿಂತದ್ದಷ್ಟೇ ಅಲ್ಲ, ಈ ಶಿಥಿಲ ಫ್ಯಾಕ್ಟರಿಯನ್ನು ಅನುಕಂಪ ಹಾಗೂ ಅಸಹ್ಯ ಬೆರೆತ ದೃಷ್ಟಿಯಿಂದ ನೋಡುತ್ತಿದೆ. ಯಾರೋ ಕರೋಡಪತಿಯೊಬ್ಬ, ಪಾರಂಗೆ ಕಾಕಾ ಕೆಲಸ ಮಾಡುತ್ತಿರುವ ಕಂಪನಿಯನ್ನು ಕೊಂಡುಕೊಳ್ಳಲಿದ್ದಾನೆ ಎಂಬ ಸುದ್ದಿಯೊಂದು, ಕಳೆದ ಆರು ತಿಂಗಳಿಂದ ಫ್ಯಾಕ್ಟರಿಯ ಗೋಡೆಗಳಾಚೆಯಿಂದ ಕೇಳಿಬರುತ್ತಿದೆ. ’ಹಾಗೇನಾದ್ರೂ ಆಗಿಯೇ ಬಿಟ್ಟರೆ, ನಮ್ಮ ನೌಕರಿಯ ಗತಿಯೇನು’ ಎಂಬ ಚಿಂತೆ ಹೊತ್ತ ಸಹೋದ್ಯೋಗಿಗಳಿಗೆ ಸಮಾಧಾನ ಹೇಳುವ ಜವಾಬ್ದಾರಿಯೂ ಕಾಕಾನದ್ದೆ. ಇದೇ ಕಾರಣಕ್ಕಾಗಿ ಇಡೀ ಫ್ಯಾಕ್ಟರಿಯಲ್ಲಿ ಕಾಕಾನಿಗೆ ತುಂಬ ಮರ್ಯಾದೆಯಿದೆ. ಕಾಕಾ ಜೊತೆ ಕಠೋರವಾಗಿ ಮಾತಾಡಿದ ಯುವಕನೊಬ್ಬನನ್ನು, ಫ್ಯಾಕ್ಟರಿಯ ನೌಕರರು ಸೇರಿ ಹಿಗ್ಗಾ ಮುಗ್ಗಾ ಥಳಿಸಿದ್ದು, ಸ್ವತ: ಕಾಕಾ, ಆ ಯುವಕನನ್ನು ಸಂತೈಸಿ, ಮನೆಗೆ ಕಳುಹಿಸಿದ ಕತೆ, ಅಲ್ಲಿ ಜನಪ್ರಿಯ. ಕಾಕಾನಿಗೆ ಆ ಹುಡುಗ, ತಮ್ಮ ಮಗ ವಿನಾಯಕನಂತೆ ಕಂಡಿದ್ದನಂತೆ.

ಎಲ್ಲರ ಚಿಂತೆಯನ್ನು ದೂರ ಮಾಡುವ ಪಣ ತೊಟ್ಟಿರುವ ಕಾಕಾನಿಗೆ, ತನ್ನದೇ ಆದ ಎರಡು ಚಿಂತೆಗಳಿವೆ. ಮಗಳು ಸ್ನೇಹಾಳ ಮದುವೆಯ ಚಿಂತೆಯೊಂದಾದರೆ, ಮಗ ವಿನಾಯಕನ ನೌಕರಿಯ ಚಿಂತೆಯೊಂದು. ಸ್ನೇಹಾ, ಹೇಳಿಕೊಳ್ಳುವಷ್ಟು ಸುಂದರಿಯಲ್ಲ. ವಿನಾಯಕ ಹೇಳಿಕೊಳ್ಳುವಷ್ಟು ಜಾಣನಲ್ಲ. ಆತ ಬಿ.ಎ ಕೊನೆಯ ವರ್ಷದಲ್ಲಿದ್ದಾನೆ. ಈಗಿನ ದಿನಗಳಲ್ಲಿ, ಬಿ.ಎ ಓದಿಕೊಂಡವರಿಗೆ ಯಾವ ಕೆಲಸವೂ ಸಿಗೋದಿಲ್ಲ. ಅಲ್ಲದೇ, ಆತನಿಗೆ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವೇ ಇಲ್ಲ. ಅದೊಂದು ಬಂದಿದ್ದರೆ, ಯಾವುದೋ ಒಂದು ಕಾಲ್ ಸೆಂಟರಿನಲ್ಲಿ ನೌಕರಿಗೆ ತಾಗಿಸಿ, ಕೈ ತೊಳೆದುಕೊಳ್ಳಬಹುದಿತ್ತು. ಆದರೆ ದರಿದ್ರದವನಿಗೆ, ಕ್ರಿಕೆಟ್ಟು, ಸಿನೇಮ ಬಿಟ್ಟರೆ ಬೇರೆ ಯಾವುದರಲ್ಲೂ ಆಸಕ್ತಿಯೇ ಇದ್ದಂತಿಲ್ಲ. ಆ ಬಗ್ಗೆ ಕೇಳಿದಾಗಲೆಲ್ಲ "ತುಮ್ಹೀ ಗಪ್ಪ ಬಸಾನಾ.. ಮಲಾ ಮಾಹಿತಿ ಆಹೆ ಕಾಯ್ ಕರಾಯಚಾ ಆಹೆ..." ಎಂದು ಹೇಳಿ ಬಾಯಿ ಮುಚ್ಚಿಸುತ್ತಾನೆ. ಅವನಿಗೆ ಬೆಂಬಲ ನೀಡುವುದರಲ್ಲಿ ಸಾವಿತ್ರಿ ಕೂಡ ಹಿಂದೆ ಮುಂದೆ ನೋಡೋದಿಲ್ಲ. ಹಾಳಾಗಲಿ, ಇವನ ನಶೀಬು ಕೂಡ ನನ್ನ ಹಾಗೆಯೇ ಇದೆ. ಎಂ ಡಿ ಸಾಹೇಬರ ಕಾಲಿಗೆ ಬಿದ್ದು, ನಮ್ಮದೇ ಕಂಪನಿಯಲ್ಲಿ ಇವನಿಗೆ ಒಂದು ನೌಕರಿ ಕೊಡಿಸಿದರಾಯ್ತು ಎಂದು ತಮಗೆ ತಾವೇ ಹೇಳಿಕೊಂಡು, ಸಮಾಧಾನ ಪಡುತ್ತಾರೆ ಕಾಕಾ.

ದಿನವಿಡೀ, ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ, ಪರೇಲಿನಿಂದ ಸಂಜೆ ೪.೨೧ರ ಲೋಕಲ್ ಹಿಡಿದು, ದಾದರಿನಲ್ಲಿಳಿದು, ಪ್ಲಾಟಫಾರ್ಮ್ ಬದಲಾಯಿಸಿ, ವಿರಾರ್ ಗೆ ಹೋಗುವ ಫಾಸ್ಟ್ ಟ್ರೇನ್ ಹಿಡಿಯುತ್ತಾರೆ ಕಾಕಾ. ದಾದರಿನಿಂದ ಹೊರಡುವ ಆ ಟ್ರೇನಿನಲ್ಲಿ ಅಷ್ಟು ಜನಸಂದಣಿ ಇರುವುದಿಲ್ಲ. ಆರಾಮವಾಗಿ ಕೂತುಕೊಂಡೇ ಹೋಗಬಹುದು. ಇವತ್ತ್ಯಾಕೋ ತಡ ಆಯ್ತು, ದಾದರಿನ ಆ ಟ್ರೇನು ಸಿಗುತ್ತೋ ಇಲ್ವೋ ಎಂಬ ಆತಂಕದಲ್ಲಿದ್ದ ಕಾಕಾಗೆ, ಪ್ಲಾಟಫಾರ್ಮ್ ನಂಬರ್ ಆರರಲ್ಲಿ ನಿಂತಿದ್ದ ಆ ಗಾಡಿಯನ್ನು ನೋಡಿ ಜೀವ ಮರಳಿದಂತಾಯ್ತು. ಒಂದು ಪ್ಲಾಟಫಾರ್ಮಿನಿಂದ ಇನ್ನೊಂದಕ್ಕೆ ಹೋಗಲು ಬ್ರಿಜ್ಜನ್ನು ಬಳಸಬೇಕು. ಬ್ರಿಜ್ಜು ಹತ್ತಲು ಇವತ್ತ್ಯಾಕೋ ತುಂಬ ಆಯಾಸ ಅನ್ನಿಸ್ತಾ ಇದೆ. ’ಮುದುಕನಾಗಿಬಿಟ್ಟೆನಾ ನಾನು?’ ಎಂಬ ಯೋಚನೆ ಬಂದು, ಕೈಕಾಲುಗಳು ನಡುಗಹತ್ತಿದವು. ’ನನ್ನ ಆಯುಷ್ಯ ಮುಗೀತಾ ಬಂತೆ? ಅಯ್ಯೋ, ಮಾಡೋಕೆ ಅದೆಷ್ಟು ಕೆಲಸಗಳಿವೆ, ನಾನು ಸತ್ತು ಹೋದರೆ, ಸಾವಿತ್ರಿಯನ್ನ ಯಾರು ನೋಡಿಕೊಳ್ತಾರೆ?, ಸ್ನೇಹಾಳ ಮದುವೆ ಆಗುತ್ತದೆಯೇ?, ವಿನಾಯಕನಿಗೆ ನೌಕರಿ ಸಿಕ್ಕು, ಆತ ಮನೆಯ ಜವಾಬ್ದಾರಿ ಹೊರುತ್ತಾನೆಯೆ?’ ಎಂಬ ಪ್ರಶ್ನೆಗಳ ಬಾಣಗಳು ಕಾಕಾನನ್ನು ಚುಚ್ಚತೊಡಗಿದವು. ಸಾವರಿಸಿಕೊಂಡ ಕಾಕಾ, ಟ್ರೇನನ್ನೇರಿದರು. ಇದೆಂಥ ಚಡಪಡಿಕೆಯಪ್ಪಾ ಅಂದುಕೊಳ್ಳುತ್ತಾ, ಹಗುರಾಗಲು, ತಮ್ಮ ಚೀಲದಲ್ಲಿದ್ದ ಮಹಾರಾಷ್ಟ್ರ ಟೈಮ್ಸ್ ಪತ್ರಿಕೆಯನ್ನು ತೆರೆದರು. ಸ್ವಲ್ಪ ಹೊತ್ತು ’ಸು-ಡೋಕು’ ಆಡಿದರೆ, ವಿರಾರ್ ಬಂದದ್ದೇ ಗೊತ್ತಾಗೋದಿಲ್ಲ. ವಿನಾಯಕನಾದ್ರೆ, ಪಟಪಟಾಂತ ಸುಡೋಕು ಬಿಡಿಸಿ, ಎದೆಯುಬ್ಬಿಸುತ್ತಾನೆ. ಈ ವಿಷಯದಲ್ಲಿ ಜಾಣ ಅವನು. ಕ್ರಿಕೆಟ್ ಬಗ್ಗೆ ಏನಾದ್ರೂ ಮಾಹಿತಿ ಬೇಕಿದ್ದಲ್ಲಿ, ಅವನ ಹತ್ತಿರ ಕೇಳ್ಬೇಕು. ತೆಂಡೂಲ್ಕರ್ ನಿಂದ ಹಿಡಿದು ಲಾರಾವರೆಗೆ, ಕ್ರಿಕೆಟ್ಟಿನ ವಿಷಯದಲ್ಲಿ, ಆತನಿಗೆ ತಿಳಿಯದೇ ಇರೋದು ಯಾವುದೂ ಇಲ್ಲ. ಆದರೆ ಸ್ವಲ್ಪ ಅಭ್ಯಾಸ ಮಾಡಿ, ಇಂಗ್ಲಿಷ್ ಭಾಷೆ ಕಲಿತುಕೊಂಡಿದ್ದರೆ, ಆತ ದೊಡ್ಡ ಮನುಷ್ಯನಾಗ್ತಿದ್ದ ಅನ್ನೋದ್ರಲ್ಲಿ ಸಂಶಯವೇ ಇಲ್ಲ. "ಅಪ್ಪನಾಗಿ ನಾನೆಲ್ಲೂ ಸೋತಿಲ್ಲ. ಚಾಳಿನಲ್ಲಿರುವ ಇತರರಿಗಿಂತ ಹೆಚ್ಚೇ ಮಾಡಿದ್ದೇನೆ, ನನ್ನ ಮಕ್ಕಳಿಗೋಸ್ಕರ. ಇಡೀ ಚಾಳಿನಲ್ಲಿ, ಮೊದಲು ಟಿ.ವಿ ಬಂದದ್ದೇ ನಮ್ಮ ಮನೆಗೆ. ಮೊಟ್ಟ ಮೊದಲು ಕೇಬಲ್ ಕನೆಕ್ಷನ್ ಬಂದದ್ದು ನಮ್ಮ ಮನೆಗೆ. ಮೊನ್ನೆ ಮೊನ್ನೆ ೨೦೦೦ ಕೊಟ್ಟು, ವಿ ಸಿ ಡಿ ಪ್ಲೇಯರ್ ಕೂಡ ತಂದಿದ್ದೇನೆ. ಮಕ್ಕಳನ್ನು ಮುನ್ಸಿಪಾಲಿಟಿ ಶಾಲೆಗೆ ಕಳಿಸಿದ್ದೆ, ನಿಜ, ಆದರೆ ಅದು ಅವರ ಒಳಿತಿಗಾಗಿಯೇ" ಎಂದೆಲ್ಲ ಯೋಚಿಸುತ್ತ ಸುಡೋಕು ಬಿಡಿಸುತ್ತ ಕುಳಿತ ಕಾಕಾನ ದೃಷ್ಟಿ ಪಕ್ಕದ ಸೀಟಿನಲ್ಲಿ ಕೂತಿದ್ದ ಯುವಕನ ಮೇಲೆ ನೆಟ್ಟಿತು. ನುಣ್ಣಗೆ ಶೇವ್ ಮಾಡಿಕೊಂಡು, ಟಿಪ್-ಟಾಪ್ ಆಗಿ ಬಿಳಿ ಅಂಗಿ, ಟೈ ಹಾಕಿಕೊಂಡ ಆ ಹುಡುಗ ತನ್ನ ತೊಡೆಯ ಮೇಲೆ ಲ್ಯಾಪ್-ಟಾಪ್ ಕಂಪ್ಯೂಟರ್ ಹರಡಿ, ಅದೇನೊ ಲೆಕ್ಕಾಚಾರ ಮಾಡುತ್ತಿದ್ದ. ಹೊಟ್ಟೆ ತೊಳೆಸಿ ಬಂದಂತಾಯ್ತು ಕಾಕಾನಿಗೆ.

೫.೪೫ಕ್ಕೆ ವಿರಾರ್ ತಲುಪಬೇಕಿದ್ದ ಟ್ರೇನು, ಇವತ್ತು ಆರೂ ಕಾಲಿಗೆ ಬಂದು, ಬಸವಳಿದು ನಿಂತಿತು. ಕೂತಲ್ಲಿಯೇ ಮಲಗಿದ್ದ ಕಾಕಾನನ್ನು, ಯಾರೋ ಎಬ್ಬಿಸಿ, ವಿರಾರ್ ಬಂದಿರುವ ಸೂಚನೆ ನೀಡಿದರು. ಇವತ್ತ್ಯಾಕೋ ದಿನವೇ ಸರಿ ಇಲ್ಲ ಅಂದುಕೊಂಡ ಕಾಕಾ, ಲಗುಬಗನೇ ಧುರಿ ಬಿಯರ್ ಬಾರ್ ಕಡೆಗೆ ಹೆಜ್ಜೆಯನ್ನಿಟ್ತರು. ವಿನಾಯಕ ಎಂದಾದ್ರೂ ಸ್ವಂತ ಕಮಾಯಿಯಿಂದ ಲ್ಯಾಪ್ ಟಾಪ್ ಕೊಳ್ಳುವಷ್ಟು ಬೆಳೆದು ನಿಲ್ಲಬಲ್ಲನೇ? ಎಂಬ ಪ್ರಶ್ನೆಗೆ ಮನದಲ್ಲೇ ಬೆಂಕಿ ಹಚ್ಚಿ, ಡಿ ಎಸ್ ಪಿ ಕ್ವಾರ್ಟರ್ ಗೇ ಆರ್ಡರ್ ನೀಡಿದರು ಪಾರಂಗೆ ಕಾಕಾ. ಇಡಿ ಕ್ವಾರ್ಟರ್ ಹೊಟ್ಟೆಯಲ್ಲಿ ಕರಗಿ ಹೋದರೂ, ನಶೆಯೇ ಏರುತ್ತಿಲ್ಲವೇಕೆ ಎಂಬ ಪ್ರಶ್ನೆಗೂ ಇವತ್ತು ಉತ್ತರವಿಲ್ಲ. ಇವತ್ತ್ಯಾಕೋ ಸಮಾಧಾನವೇ ಇಲ್ಲವಲ್ಲ, ಎಂದುಕೊಂಡು, ಶೇರ್ ರಿಕ್ಷಾ ಹಿಡಿದು, ಪುನ: ಲಕ್ಷ್ಮಣ ಭಾವೂ ಸುರ್ವೆ ಚಾಳಿಗೆ ಪ್ರವೇಶಿಸಿದರು ಕಾಕಾ. "ಮನೆಗೆ ಹೋಗುವಷ್ಟರಲ್ಲಿ ಸಾವಿತ್ರಿ ಅಡುಗೆ ಮಾಡ್ತಾ ಇರ್ತಾಳೆ, ಸ್ನೇಹಾ, ಪಕ್ಕದ ಮನೆಯ ಸಂಗೀತಾಳ ಜೊತೆ ಕೂತು ಹರಟೆ ಹೊಡೆಯುತ್ತ ಮುಸಿ ಮುಸಿ ನಗುತ್ತಿರುತ್ತಾಳೆ, ಇನ್ನು ರಾತ್ರಿ ಹನ್ನೆರಡರ ಮೊದಲು ವಿನಾಯಕನ ಪತ್ತೆಯೇ ಇರುವುದಿಲ್ಲ"... ಇದೆಲ್ಲ ಪ್ರತಿ ದಿನದ ಕತೆಯೇ ಎಂದುಕೊಂಡು, ಇನ್ನೇನು ಮನೆಗೆ ಪ್ರವೇಶ ಮಾಡಬೇಕು ಅನ್ನುವಷ್ಟರಲ್ಲಿ, ಕಿಟಕಿಯೊಳಗಿಂದ ಒಳಗಿನ ದೃಷ್ಯ ಕಂಡು ಬರುತ್ತದೆ. ಸಾವಿತ್ರಿ ಅಡುಗೆ ಮಾಡುತ್ತಿದ್ದಾಳೆ. ಸ್ನೇಹಾ ಪಕ್ಕದ ಮನೆಯ ಸಂಗೀತಾಳ ಜೊತೆ ಕೂತು ಹರಟೆಹೊಡೆಯುತ್ತಿದ್ದಾಳೆ. ಅರೆ!! ವಿನಾಯಕ ಅಭ್ಯಾಸ ಮಾಡುತ್ತಿದ್ದಾನೆ. ಹೌದೇ? ನಿಜಕ್ಕೂ? ಹೌದು. ವಿನಾಯಕ ನಿಜಕ್ಕೂ ಅಭ್ಯಾಸ ಮಾಡುತ್ತಿದ್ದಾನೆ.

ಚಪ್ಪಲಿಯನ್ನು ಕಳಚಲು ಕಾಲಕಡೆ ಹೋಗಿದ್ದ ಕೈಗಳು, ತಂತಾನೇ ಮೇಲೆ ಬರುತ್ತವೆ. ಕಣ್ತುಂಬಿ ಬರುತ್ತವೆ. ಕಾಕಾ ಮೆಲ್ಲನೆ, ಧುರಿ ಬಿಯರ್ ಬಾರ್ ಕಡೆ ಮುಖ ಮಾಡುತ್ತಾರೆ.

Tuesday, February 17, 2009

’ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ?’



ನಮ್ಮಲ್ಲಿ ಶ್ರೀರಂಗರನ್ನೂ, ಅವರ ನಾಟಕಗಳನ್ನೂ ಸಾರಾಸಗಟಾಗಿ ತಳ್ಳಿ ಹಾಕುವ, ತೆಗಳುವ ಹಲವಾರು ನಿರ್ದೇಶಕರಿದ್ದಾರೆ. ನಯಾ ಪೈಸೆ ಉಪಯೋಗವಿಲ್ಲದ ನಾಟಕಶಾಲೆಗಳಲ್ಲಿ ನಿರ್ದೇಶನವನ್ನು ಕಲಿತು (?) ಬಂದಿರುವ ಈ ಮಹಾಶಯರಿಗೆ ಶ್ರೀರಂಗರ ನಾಟಕಗಳೆಂದರೆ ಅದೇಕೋ ಅಲರ್ಜಿ-ಅಸಡ್ಡೆ. ನಿರ್ದೇಶಕನು ಮಾಡಬೇಕಾದ ಕ್ರಿಯೆಗಳನ್ನು, ಶ್ರೀರಂಗರು ತಾವೇ, ನಾಟಕ ರಚನೆಯ ವೇಳೆಯಲ್ಲಿ ಮಾಡಿಬಿಡುತ್ತಾರೆ, ಬ್ರಾಕೆಟ್ ನಲ್ಲಿ ನಿರ್ದೇಶನವನ್ನು ಮಾಡಿರುತ್ತಾರೆ ಎಂಬುದು ಇವರ ತಾತ್ಸಾರಕ್ಕೆ ಕಾರಣ. ಇತ್ತೀಚೆಗೆ ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್.ಎಸ್.ಡಿ) ಕಲಿಸುವ ಹಿರಿಯ ನಿರ್ದೇಶಕರೊಬ್ಬರು ಶ್ರೀರಂಗರನ್ನು ಸಾರಾಸಗಟಾಗಿ ಬಯ್ಯುವಾಗ ತಡೆದುಕೊಳ್ಳಲಾಗಲಿಲ್ಲ. ಒಂದು ಸಣ್ಣ ವಾಗ್ವಾದವೇ ನಡೆಯಿತು. ಅವರು ವಯಸ್ಸಿನಲ್ಲೂ, ಅನುಭವದಲ್ಲೂ ಸಾಕಷ್ಟು ಹಿರಿಯರು ಎಂಬ ಒಂದೇ ಕಾರಣದಿಂದ ವಾದವನ್ನು ಜಗಳದ ಮಟ್ಟಕ್ಕೆ ಏರಿಸಲಿಲ್ಲ ನಾನು. ಶ್ರೀರಂಗರನ್ನಷ್ಟೇ ಬಯ್ದಿದ್ದರೆ ಮುಗಿದುಹೋಗಿರುತ್ತಿತ್ತೇನೋ, ಆದರೆ ಆ ಮಹಾಶಯರು Authorial Intention ಅನ್ನುವುದೇ ಅಪ್ರಸ್ತುತ ಅನ್ನುವಂಥ ಒಂದು silly ಮಾತನ್ನು ಹೇಳಿದರು. ಅಂದರೆ ಈ ನಿರ್ದೇಶಕರ ಪ್ರಕಾರ "ನಾಟಕಕಾರನೊಬ್ಬ, ತನ್ನ ನಾಟಕದ ಮೂಲಕ ಏನು ಹೇಳಬಯಸುತ್ತಾನೋ, ಅದು ಅಪ್ರಸ್ತುತ. ನಾಟಕದ ರಚನೆ ಆದ ನಂತರ, ನಾಟಕಕಾರನಿಗೆ ಅದರ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಆ ನಾಟಕವನ್ನು ಪ್ರದರ್ಶಿಸಲು ಕೈಗೆತ್ತಿಕೊಂಡ ನಿರ್ದೇಶಕನು, ಅದನ್ನು ತನಗೆ ಬೇಕಾದ ಹಾಗೆ interpret ಮಾಡಿಕೊಳ್ಳಬಹುದು".
Interpretation ಬೇರೆ. ಆದರೆ ನಾಟಕಕಾರನ ಮೂಲ ಆಶಯವನ್ನು ನಿರ್ದೇಶಕನೊಬ್ಬ ತಿರುಚಬಹುದೇ? ಹಾಗೆ ಮಾಡಿದರೆ ಅದು ನಾಟಕಕಾರನ ಮೇಲಾಗುವ ಅನ್ಯಾಯವಲ್ಲವೇ? ಶ್ರೀರಂಗರ ನಾಟಕಗಳನ್ನು ಅಷ್ಟು ಸುಲಭವಾಗಿ ತಿರುಚಲು ಸಾಧ್ಯವಿಲ್ಲ, ಹೀಗಾಗಿ ಅವರು ಈ ಮಹಾನ್ ನಿರ್ದೇಶಕರ ಅವಹೇಳನಕ್ಕೆ ಗುರಿಯಾಗಿದ್ದಾರಲ್ಲವೆ? ಇಷ್ಟಾಗಿಯೂ ಈ ನಿರ್ದೇಶಕರು, ಮೇಲ್ಕಂಡ ಮಾತನ್ನು ಹೇಳಿದ್ದು ಎಲ್ಲಿ ಗೊತ್ತೆ? ಇತ್ತೀಚೆಗೆ ನಡೆದ ’ನಾಟಕಾ ರಚನಾ ಶಿಬಿರವೊಂದರಲ್ಲಿ’. ಅಂದರೆ ನಾಟಕಗಳನ್ನು ಬರೆಯುವ ಹುಚ್ಚಿರುವ ಹೊಸ ಪೀಳಿಗೆಯ ಜನರಿಗೆ ಇವರು ಮೊದಲೇ ಎಚ್ಚರಿಕೆಯನ್ನು ನೀಡುತ್ತಿದ್ದಾರೆ "ನೀವೇನಾದ್ರೂ ಬರ್ಕೊಳ್ಳಿ, ರಂಗದಲ್ಲಿ ಕೊನೆಗೆ ಬರುವುದು ನಿಮ್ಮ ಕೃತಿ ಅಲ್ಲ, ನಾವು ತೋರಿಸಿದ್ದು".
ನಾಟಕಕಾರ V/S ನಿರ್ದೇಶಕನ ಈ ಯುದ್ಧ ಹಳೆಯದೇ ಬಿಡಿ. ಈ ಎನ್.ಎಸ್.ಡಿ ಹಾಗೂ ಇಂಥ ನಾಟಕ ಶಾಲೆಗಳು ಹೇಳಿಕೊಳ್ಳುವಂಥ ಯಾವುದೇ ದೊಡ್ಡ ಸಾಧನೆ ಮಾಡಲಾಗದಿದ್ದರೂ, ’ನಾಟಕವೆಂಬುದು ನಟರ ಮಾಧ್ಯಮ’ ಎಂಬ ವಾದವನ್ನು ಸುಳ್ಳು ಮಾಡಲು ಹೊರಟ ಅಸಂಖ್ಯಾತ ನಿರ್ದೇಶಕರನ್ನು ಮಾತ್ರ ಹೊರಹಾಕಿವೆ. ಈ ಮಹಾನ್ ನಿರ್ದೇಶಕರು ಶ್ರೀರಂಗರನ್ನು ಎಷ್ಟೇ ತೆಗಳಲಿ, ಒಂದು ಮಾತು ಮಾತ್ರ ನಿಜ. ಶ್ರೀರಂಗರು, ಆಧುನಿಕ ಕನ್ನಡ ರಂಗಭೂಮಿಯ ಹರಿಕಾರರು. ಮೆಲೊಡ್ರಾಮಾಟಿಕ್ ಕಂಪನಿ ರಂಗಭೂಮಿಯ ಬದಲಾಗಿ ಹವ್ಯಾಸಿ ಕಲಾವಿದರೂ ಪಾಲ್ಗೊಳ್ಳಬಹುದಾದಂಥ ಹೊಸ ರಂಗಭೂಮಿಯನ್ನು ಹುಟ್ಟು ಹಾಕಲು ಪ್ರಯತ್ನಿಸಿದವರೇ ಶ್ರೀರಂಗರು. ೩೪ ದೊಡ್ಡ ಹಾಗೂ ೫೦ ಏಕಾಂಕ ನಾಟಕಗಳನ್ನು ಬರೆದ ಶ್ರೀರಂಗರ ಸಾಧನೆಯ ಕೇವಲ ೧೦% ನಷ್ಟು ಸಾಧನೆಯನ್ನು ಮಾಡಲಾಗದ ಈ ನಿರ್ದೇಶಕರು ಶ್ರೀರಂಗರನ್ನು ಬಯ್ಯುವಾಗ ಮೈ ಉರಿದುಹೋಗಲಾರದೆ?

ಶ್ರೀರಂಗರು ಬರೆದಂಥ ಒಂದು ಅದ್ಭುತ ನಾಟಕ- ’ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೊ?’. ತುಂಬ ಕಡಿಮೆ ನಾಟಕ ತಂಡಗಳು ಈ ನಾಟಕವನ್ನು ಪ್ರದರ್ಶಿಸಿವೆ, ಏಕೆಂದರೆ ಅತ್ಯಂತ ಕಠಿಣವಾದ ನಾಟಕವಿದು. ಪ್ರೇಕ್ಷಕರಿಗೂ ಸುಲಭವಾಗಿ ನಿಲುಕಲಾರದ, ಸುಲಭಗ್ರಾಹ್ಯವಲ್ಲದ ನಾಟಕವಿದು. ನಾಟಕದ ಮುನ್ನುಡಿಯಲ್ಲಿ ಶ್ರೀರಂಗರೇ ಸೂಚಿಸಿದಂತೆ, ಒಂದು ನಾಟಕವನ್ನು ಬರೆಯಲೇಬೇಕು ಎಂಬ ಮಾನಸಿಕ ಒತ್ತಡದಿಂದ, ಶ್ರೀರಂಗರು ಈ ನಾಟಕವನ್ನು ಬರೆಯಲು ಪ್ರಾರಂಭಿಸಿದರು. ನಾಟಕದ ಸಂಭಾಷಣಾ ಅಂಶಗಳು ಒಂದು ತಾರ್ಕಿಕ flow ನಲ್ಲಿ ಇಲ್ಲದೇ, ಅತ್ತಿತ್ತ ಹರಿದುಹೋಗಿವೆ. "ಮನುಷ್ಯ ಬುದ್ಧಿವಂತನಾಗಿರುವುದರಿಂದಲೇ ತೋರಿಕೆಯ ಜಗತ್ತಿನೊಳಗಿರುವನೋ, ಅಥವಾ ಬುದ್ಧಿವಂತನಾದ ಮನುಷ್ಯನೊಳಗೆಯೇ ತೋರಿಕೆ ಹುಟ್ಟಿಕೊಂಡಿರುವುದೋ?" ಎಂಬುದು ಈ ನಾಟಕದ ಜಿಜ್ಞಾಸೆ.
ಇಪ್ಪತ್ನಾಲ್ಕೂ ಗಂಟೆ ಸಾರಾಯಿ ಕುಡಿದು ಬೀಳುತ್ತಿದ್ದ ತಂದೆ, ಹೊಟ್ಟೆ ಹೊರೆಯಲು ಹಾದರ ಮಾಡುವ ತಾಯಿಗೆ ಹುಟ್ಟಿದ ನಾಯಕ, ತನ್ನ ಸುತ್ತಲಿನ ಸಮಾಜದಲ್ಲಿ ಆರ್ಥಿಕ ಅಸಮಾನತೆಗಳನ್ನು ಕಂಡು ರೋಸಿ ಹೋಗುತ್ತಾನೆ. ಮನುಷ್ಯನ ಈ ಪರಿಸ್ಥಿತಿಗೆ ಬಡತನವೇ ಕಾರಣವಿರಬಹುದೆಂದುಕೊಂಡು, ಕಳ್ಳತನ, ಸುಲಿಗೆ ಹಾಗೂ ದರೋಡೆಯ ಮಾರ್ಗವನ್ನು ಹಿಡಿಯುತ್ತಾನೆ. ನಗರಗಳಲ್ಲಿ ಸೈಕಲ್ಲುಗಳನ್ನು ಕದ್ದು, ಹಳ್ಳಿಗಳಲ್ಲಿ ಅವನ್ನು ಮಾರುತ್ತಾನೆ. ಬಂದ ಹಣವನ್ನು ಬಡವರಿಗೆ ಹಂಚಿ, ಅಷ್ಟಿಷ್ಟು ಉಳಿಸಿ ಸ್ಕೂಲ್ ಫೀಸ್ ತುಂಬುತ್ತಾನೆ. ದೊಡ್ಡ ಮನುಷ್ಯನಾಗಿ ಬೆಳೆದು ಬಡವರ ಸಹಾಯ ಮಾಡಬೇಕು ಎನ್ನುವುದು ಆತನ ಹಂಬಲ. ಮುಂದೊಂದು ದಿನ ದರೋಡೆ ತಂಡವೊಂದನ್ನು ಕಟ್ಟಿಕೊಳ್ಳುತ್ತಾನೆ.
ಆದರೆ ಆ ದರೋಡೆ ತಂಡದ ಇತರ ಸದಸ್ಯರು ತನ್ನಂತೆ ಯೋಚನೆ ಮಾಡುತ್ತಿಲ್ಲ, ಅವರು ದರೋಡೆ ಮಾಡುವುದು ತಮ್ಮ ಹೆಂಡತಿ-ಮಕ್ಕಳ ಹೊಟ್ಟೆ ತುಂಬಿಸುವ ಸಲುವಾಗಿ ಎಂಬುದು ಗೊತ್ತಾದಾಗ, ಕನಲಿ ಹೋಗುತ್ತಾನೆ. ಒಂದು ನೌಕರಿಗೆ ಸೇರಿಕೊಳ್ಳುತ್ತಾನೆ. ಅಲ್ಲಿಯೂ ಕೂಡ, ಆ ಬುದ್ಧಿವಂತ ಜನರು, ದರೋಡೆ ಸದಸ್ಯರ ಹಾಗೆಯೇ ಯೋಚನೆ ಮಾಡುತ್ತ, ಕೇವಲ ತಮ್ಮ ಹೆಂಡತಿ-ಮಕ್ಕಳಿಗಾಗಿ ದುಡಿಯುವುದು, ಇನ್ನೊಬ್ಬರನ್ನು ಮೆಚ್ಚಿಸಿ ಹೆಚ್ಚಿನ ಗಳಿಕೆಗಾಗಿ ಮಾತ್ರ ತಮ್ಮ ಬುದ್ಧಿಯ ಉಪಯೋಗವನ್ನು ಮಾಡುವುದು, ಇತ್ಯಾದಿಯನ್ನು ನೋಡಿದಾಗ, ಆತನ ಭ್ರಮನಿರಸನವಾಗುತ್ತದೆ. ಮನುಷ್ಯನ ಸ್ವಭಾವವೇ ಇಂಥದ್ದು, ಇದಕ್ಕೆ ಬಡತನ ಅಥವಾ ಅಜ್ಞಾನ ಕಾರಣ ಅಲ್ಲ ಅನಿಸಿ ನೌಕರಿಯನ್ನೂ ಬಿಟ್ಟುಬಿಡುತ್ತಾನೆ.

"ಮನುಷ್ಯನಿಂದ ಏನೂ ಸಾಧ್ಯವಿಲ್ಲ, ಹಾಗಿದ್ದರೆ ಇನ್ನು ಮಾಡುವುದೇನು?" ಎನ್ನುವುದು ಆತನೆದುರಿಗಿರುವ ಪ್ರಶ್ನೆ.

ಆತ ದರೋಡೆ ಮಾಡುವ ದಿನಗಳಲ್ಲಿ ಒಬ್ಬ ಸಿರಿವಂತ ಮಧ್ಯವಯಸ್ಕನನ್ನು ಕೊಂದಿರುತ್ತಾನೆ. ಅವನನ್ನು ಕೊಂದು, ಪೋಲೀಸರಿಂದ ತಪ್ಪಿಸಿಕೊಂಡು ಓಡುವಾಗ, ಒಬ್ಬ ತರುಣಿಯ ಮನೆಯನ್ನು ಹೊಕ್ಕುತ್ತಾನೆ. ಆಕೆಯ ಗಂಡ ಕೆಲಸದ ನಿಮಿತ್ತ ಯಾವಾಗಲೂ ಪರ ಊರಿಗೆ ತಿರುಗುವವ. ತನ್ನ ಮನೆಗೆ ಬಂದಿರುವ ನಾಯಕನತ್ತ ಈ ತರುಣಿ ಆಕರ್ಷಿತಳಾಗಿರುತ್ತಾಳೆ. ತನ್ನನ್ನು ಪೋಲೀಸರಿಂದ ಕಾಪಾಡಿದ ತರುಣಿಗೆ, ನಾಯಕ ಬಂಗಾರದ ಬಳೆಯೊಂದನ್ನು ಕೊಡುತ್ತಾನೆ. ಮರುದಿನ ಮರಳಿ ಬಂದ ಆ ತರುಣಿಯ ಗಂಡ ಆ ಬಳೆಯನ್ನು ನೋಡಿ ಅವಳ ಮೇಲೆ ಸಂದೇಹಪಡುತ್ತಾನೆ. ಆಕೆ ಆತ್ಮ ಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಅವಳ ನೆರೆಮನೆಯವ, ಅವಳು ಆತ್ಮ ಹತ್ಯೆ ಮಾಡಿಕೊಳ್ಳಲಿಲ್ಲ, ಅವಳ ಗಂಡ, ಅವಳನ್ನು ಕೊಂದ ಎಂದು ಹೇಳುತ್ತಾನೆ. ಸಿಟ್ಟಿಗೆದ್ದ ನಾಯಕ, ಆ ತರುಣಿಯ ಗಂಡನನ್ನೂ ಕೊಲ್ಲುತ್ತಾನೆ.
ಈಗ ಆ ಮಧ್ಯವಯಸ್ಕ, ತರುಣಿ ಹಾಗೂ ತರುಣರ ಪ್ರೇತಗಳು, ನಾಯಕನ ಕನಸಿನಲ್ಲಿ ಬಂದು ಆತ ಮಾಡಿದ ತಪ್ಪುಗಳನ್ನು ಆತನಿಗೆ ತಿಳಿಸುತ್ತಿದ್ದಾರೆ. ಬುದ್ಧಿ ಎಂಬುದೇ ಮನುಷ್ಯನ ಶತ್ರು ಎಂಬುದಾಗಿ ಹೇಳುತ್ತಾರೆ.
ಇಷ್ಟೆಲ್ಲ ಆದರೂ ’ಸಮಾನತೆ’ ಎಂಬುದನ್ನು ಸಾಧಿಸಲು ಬೇಕಾದ ಸೂತ್ರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಆತ ಬಿಡುವುದಿಲ್ಲ. ಬಡವರಿಗೆ ಸಹಾಯ ಮಾಡಿ, ಜನಪ್ರಿಯನಾಗುತ್ತಾನೆ. ರಾಜಕಾರಣಿಯಾಗುತ್ತಾನೆ. ಆದರೂ ಬಡತನದ ನಿರ್ಮೂಲನೆ ಸಾಧ್ಯವಾಗದಿರುವುದರಿಂದ ಸಾವಿರಾರು ಬಡವರನ್ನು ಕೊಂದು, ’ಬಡತನದ ನಿರ್ಮೂಲನೆ’ ಆಯ್ತು ಎನ್ನುವ ಭ್ರಮೆಗೆ ಒಳಗಾಗುತ್ತಾನೆ. ಆದರೆ ಜೀವದಿಂದಿರೋ ಹಕ್ಕು ಮನುಷ್ಯನಿಗೆ ಸದಾ ಕಾಲದ್ದು ಎಂಬ ಜ್ಞಾನೋದಯವಾದಾಗ, ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗೆ ನಾಟಕ ಅಂತ್ಯಗೊಳ್ಳುತ್ತದೆ.
ಮನುಷ್ಯನಲ್ಲಿರುವ ಬುದ್ಧಿ, ತೀರಾ ತೋರಿಕೆಯ ಸ್ವರೂಪದ್ದು ಹಾಗೂ ಅದಕ್ಕೆ ನಿಜತ್ವದ ಗುಣಗಳಿಲ್ಲ ಎಂಬುವುದು ಶ್ರೀರಂಗರ ಈ ನಾಟಕದ ತಿರುಳಾಗಿದೆ.

ಇಂದಿನ ಜಗತ್ತಿನಲ್ಲಿ ನಡೆಯುತ್ತಿರುವ ಅನಾಹುತಗಳಿಗೆಲ್ಲ ಕಾರಣ ಮನುಷ್ಯನ ಬುದ್ಧಿಯೇ ಅಲ್ಲವೆ? ಒಂದು ಕೊಟ್ಟಿಗೆಯಲ್ಲಿ ಹತ್ತು ಹಸುಗಳನ್ನು ಕಟ್ಟಿಟ್ಟರೆ, ಅವು ತಮ್ಮ ಮುಂದಿರುವ ಮೇವನ್ನು ಮೇಯುತ್ತ, ಸಮಾಧಾನದಿಂದಿರುತ್ತವೆ. ಆದರೆ ಇಬ್ಬರೇ ಮನುಷ್ಯರಲ್ಲಿ ಇದು ಸಾಧ್ಯವಿಲ್ಲ ಎಂದು ಶ್ರೀರಂಗರು ಹೇಳುತ್ತಾರೆ. ಅದೆಷ್ಟು ಅದ್ಭುತವಾದ ಕಲ್ಪನೆಯಿದು. ಇಂತಹ ಅಸಾಧಾರಣ ಕಲ್ಪನೆಗಳನ್ನು, ಅತ್ಯಂತ ಸುಲಭವಾಗಿ ನಾಟಕದಲ್ಲಿ ಕಟ್ಟುವ ಶ್ರೀರಂಗರನ್ನು ತೆಗಳುವ ನಿರ್ದೇಶಕೋತ್ತಮರ ಹೇಳಿಕೆಗಳನ್ನು ಖಂಡಿಸದೇ ಇರಲು ಸಾಧ್ಯವೇ?

ಮುಂಬಯಿ ಕರ್ನಾಟಕ ಸಂಘದ ಕಲಾಭಾರತಿ ತಂಡವು ಕೆಲವು ವರ್ಷಗಳಿಂದ ಈ ನಾಟಕವನ್ನು ಪ್ರದರ್ಶಿಸುತ್ತಲೇ ಇದೆ. ನಾಯಕನ ಅತ್ಯಂತ ಸಂಕೀರ್ಣ ಪಾತ್ರವನ್ನು ನಿರ್ವಹಿಸುವ ಅವಕಾಶ ನನ್ನದಾಗಿದೆ. ಮುಂಬಯಿಯ ಮೈಸೂರು ಎಸೋಸಿಯೇಶನ್ನಿನ ಸಭಾಗೃಹದಲ್ಲಿ, ಈ ನಾಟಕದ ಪ್ರಥಮ ಪ್ರದರ್ಶನವಾದಾಗ, ಶ್ರೀರಂಗರ ಪುತ್ರಿಯರಾದ ಉಶಾ ದೇಸಾಯಿ ಹಾಗೂ ಶಶಿ ದೇಶಪಾಂಡೆ (ಖ್ಯಾತ ಆಂಗ್ಲ ಲೇಖಕಿ) ಉಪಸ್ಥಿತರಿದ್ದರು. ನಾಟಕದ ನಂತರ ಅವರು ವೇದಿಕೆಗೆ ಆಗಮಿಸಿ ’ಇಂಥದ್ದೊಂದು ಉತ್ತಮ ನಾಟಕವನ್ನು ನಮ್ಮ ತಂದೆಯವರು ಬರೆದಿದ್ದರು ಎಂಬುದು ನಮಗೇ ಗೊತ್ತಿರಲಿಲ್ಲ’ ಎಂದು ಹೇಳಿದ್ದು, ನಮ್ಮ ತಂಡಕ್ಕೆ ಸಾರ್ಥಕ್ಯವನ್ನು ನೀಡಿತ್ತು.

Friday, May 23, 2008

I was destined to act in plays...

Destiny is strange. It can turn your life upside down in a jiffy. You never know whats in store for you next moment. I hadn't even imagined in my wildest dreams that I would be acting in Kannada Plays in Mumbai someday. I surely did not know that humming a song in the stinky toilet could provide me with an opportunity of playing major role in a beautiful play, which eventually turned my life upside down.

It was the fag end of the year 1998. I was working for Karnataka Sangha as a Clerk. Decent job for a young fresher with very lowly marks in the final year of graduation. The best thing about that particular job was, there were no pressures. Come to office at 12 noon, leave anytime after 8. Prepare petty cash vouchers, and tackle people who are there to book the auditorium for a musical program, or book the hall for a wedding. Take cheques and prepare receipts. That's all. All this for a princely salary of Rs.2500 only. There were no targets, no deadlines, no female colleague to flirt around with and of course no incentives. But for me, the best thing about the job was, there were no bosses to keep an eye on us till the evening. Till 6 pm, you could do anything. From roaming around to sitting in the library and reading some great Kannada books. It is there that I read very interesting and great Kannada novels and books of Dr. Shivaram Karanth, Masti, Bhairappa, and loads of others.

It was the month of November, 1998. It was a casual day of work. I was doing some usual stuff in the office. Enter the then General Secretary of the Sangha, Mr. Bharat Kumar Polipu who tells me to follow him to the meeting room of the Sangha. I was confused. This guy had never spoken to me even once during last six months and now orders me to come to the meeting room. I wondered why! Maybe somebody had complained to him that I spend more time at the library than at my work table. He was the secretary and had every right to fire me. I went to the meeting room with my legs shaking. The first thing he asks me is to sing a nice song for him. Best way to fire a poor chap, or so I thought. I started singing a couple of lines from a film called Damini. "Jab Se Tumko dekha hai Sanam...". "Good, but please sing the song that you were singing in the toilet a few minutes ago" says the Secretary. I started crooning "Kabhi Kabhi mere dil mein Khayal aata hai".

I did not know what was going on here. And before I could finish my song, he asks "Have you acted in a drama before?".. Have I acted in a drama before? Ask this to the K E Board's high school, Dharwad. Ask that to AIR station of Dharwad. Ask that to Katti Sir and Koulagi madam of KEB high. Ask that to Mukund Maigoor, to Tumkoor Shivakumar., to Ma Gu Sadanandaiah, even to the chapraasi of Kalabhavan. I always thought I was the next best thing after Marlon Brando to have happened to the World of theater. Unfortunately my answer to him had to be a little milder than that. He was my boss after all. I said "Yes Sir. I would love to act in a drama too". He then commanded, "Well, then here is a script for you. It is a play called 'Gummanelliha Toramma' by the great Sri Ranga. Read the script and come to the rehearsals from tomorrow. You are going to play the central role of 'Haadugaara' (the singer)".

There was no chance of me saying NO to him, because a colleague had told me that this very laid back and relaxed Secretary of the Sangha was a brilliant Kannada Director too. I was pretty happy to say yes. More than that, I was happy because I could now spend much more time in the library in the pretext of researching for the play.

I thought the journey from the rehearsals to the actual show, would be a smooth sailing for me. It was anything but that. Its there in the rehearsals that, I started re-inventing myself as an actor. The long gap of 10 years between acting in plays, had taken a toll. I found I was a no hoper in the beginning. It was pretty tough. I was always an actor who needed my freedom. I would not mind If the Director ordered me about the movements; But I could not take it when he tried to make me act in a way he wanted; I would not tolerate If the Director told me to emote in a certain way. I would hate it when the director would say a line in a particular way and ordered me to say that line exactly the way he did. No Sir, I am not a mimic, I am a far better an actor than that, or SO I thought. The first week of the rehearsals was a living hell for me. I could never get it right. Even the Songs I was supposed to sing were composed in a very high pitch. My request to shift the pitch to a lower octave were met with complete disdain. There were days when I thought to myself, It would be better If I quit. But I also knew that it was too late to quit. I decided that this was going to be the last drama of my life. I changed my attitude. I realized that I had not understood the character well. I sat with the director once after the rehearsals and discussed at length about the character. Suddenly it was smooth sailing. The comic timing was magically back.

We were producing the play for the yearly festival conducted by Kannada Kala Kendra, a very reputed Kannada theater institution of Mumbai. The day was 10th December, 1998. Venue- karnataka Sangha's Auditorium. And the Show was a GRAND success. Every one liked the play and so many of them came to the backstage and congratulated me. I clearly remember a senior actor called Krishnaraj Shetty calling me the 'Find of the season'. I was in seventh heaven. Director was all praise for me. Even a veteran like Sai Ballal congratulated me. But the best one came from Mr. Mohan Marnad, who simply hugged me and gave me a thumb's up.

I am proud that I started or rather re-started my stint with Kannada theater for a wonderful institution like Kala Kendra. I am proud that today I am the Joint secretary of the same institution. Destiny is strange after all.