Sunday, March 1, 2009

ಮುಂಬಯಿ ಮುಖಗಳು ಭಾಗ ೧.....


ಸದಾ ತಡವಾಗಿ ಓಡುವ ಲೋಕಲ್ ಟ್ರೇನುಗಳ ರಭಸ, ಸತ್ತ ಮೀನುಗಳೇ ತುಂಬಿರುವ ಬುಟ್ಟಿಗಳ ನಾರು ವಾಸನೆ, ರೈಲು ಹಳಿಯುದ್ದಕ್ಕೂ ಮೈ-ಮರೆತು ಪ್ಲಾಸ್ಟಿಕ್ ತಂಬಿಗೆ ಹಿಡಿದು ಕೂತಿರುವ ಭಯ್ಯಾಗಳ ಕೄತಘ್ನತೆ, ಯಾವ ಬಾಂಬು ಎಲ್ಲಿ ಸಿಡಿಯುವುದೋ ಎಂಬ ಕರಿ ಭಯದ ನೆರಳಲ್ಲೇ ಎದ್ದು ಮೈ ಮುರಿಯುತ್ತದೆ ಮುಂಬಯಿ. ದೂರದ ಬ್ಯಾಂಡ್ ಸ್ಟಾಂಡ್ ನಲ್ಲಿ ಚರಸ್ ಸೇವಿಸಿ, ಹೈರಾಣಾಗಿ, ಗೆಳೆಯನ ಅಪ್ಪನ ಕ್ವಾಲಿಸ್ ಗಾಡಿಯಲ್ಲಿ ಕುಳಿತು ಮನೆಗಡೆ ಹಿಂದಿರುಗುವ ಯೋಚನೆಯಲ್ಲಿ ಕಾಲ್ ಸೆಂಟರ್ ನ ಹೈ-ಟೆಕ್ ಹೈಕಳು ಚರ್ಚಿಸುತ್ತಿದ್ದರೆ, ಈಚೆ ಗಡದ್ದಾಗಿ ಹೊದ್ದು ಮಲಗಿದ ಲಕ್ಷ್ಮಣ ಭಾವೂ ಸುರ್ವೆ ಚಾಳಿನ ಹದಿನೇಳನೇ ನಂಬರ್ ಮನೆಯಲ್ಲಿ ದೀಪ ಝಗ್ಗನೇ ಬೆಳಗುತ್ತದೆ. ವಸಂತರಾವ್ ವಿಠೋಬಾ ಪಾರಂಗೆಯ ಅರೆ-ತೆರೆದ ಕಣ್ಣುಗಳು, ಆತನಿಗೆ ಎಂದೂ ಮೋಸ ಮಾಡಿಲ್ಲ. ಅಡ್ಡಾದಿಡ್ಡಿ ಮಲಗಿದ ಮಕ್ಕಳಿಗೆ ಕಾಲು ತಾಕದಂತೆ ಎಚ್ಚರವಹಿಸಿ, ಚೊಂಬು ಹಿಡಿದು ಆತ ಮೆಲ್ಲನೆ ಹೊರಬರುತ್ತಾನೆ. ಹದಿನಾರು ವರ್ಷಗಳೇ ಕಳೆದು ಹೋಗಿವೆ ನೋಡಿ, ಆತ ಚಾಳಿನ ಪಾಯಖಾನೆಯ ಬಳಕೆಗಾಗಿ ಲೈನಿನಲ್ಲಿ ನಿಂತಿರುವವರ ಜೊತೆ ಜಗಳವಾಡಿ. ಜಗಳಾಡಲು, ಮೂರೂ ಮುಕ್ಕಾಲರ ’ಮಟಮಟ’ ಮುಂಜಾನೆ ಅಲ್ಲಿ ಯಾರಿರುತ್ತಾರೆ? ಪಾಯಖಾನೆಯ ಬಳಿ ಮಲಗಿರುತ್ತಿದ್ದ ಮೋತಿ ಕೂಡ ಹೋದ ಸಾಯಿಬಾಬಾ ದಿಂಡಿಯ ದಿನ ಸತ್ತು ಹೋಯ್ತು. ಆವತ್ತಿನಿಂದ ಪಾರಂಗೆ ಕಾಕಾನ, ಮುಂಜಾವಿನ ಗುಣು ಗುಣು ಭಜನೆಯನ್ನು ಕೇಳುವವರೆ ಇಲ್ಲ. ಪಾರಂಗೆ ಕಾಕಾನ ಬಳಿ ಮರಾಠಿ ಭಜನೆಗಳ ಭಾಂಡಾರವೇ ಇದೆ. "ಆಜ ಆನಂದೀ ಆನಂದ ಝಾಲಾ..", "ವಿಠೂ ಮಾವುಲೀ ತೂ ಮಾವುಲೀ ಜಗಾಚೀ..", " ಬಾಬಾಂಚಾ ಝಾಲಾ ಪ್ರಸಾದ...", ಹೀಗೆ ಒಂದೇ, ಎರಡೇ?. ಪಾರಂಗೆ ಕಾಕಾ ಹಾಡಲು ಕುಳಿತರೆಂದರೆ, ಚಾಲಿಗೆ ಚಾಳೇ ಕಿವಿಯಾಗುತ್ತದೆ. ನಿನ್ನೆ ಸಂಜೆ ತಂದ ಕ್ಯಾಸೆಟ್ ನ ಹೊಸ ಹಾಡೊಂದನ್ನು ಗುಣಗುಣಿಸುತ್ತ, ಕಾಕಾ ಪಾಯಖಾನೆಯ ಬಳಿ ಹೆಜ್ಜೆ ಹಾಕುತ್ತಿದ್ದರೆ, ಅದಕ್ಕೆ ತಾಳ ಹಾಕುವಂತೆ, ಫನ್ಸೆಕರ್ ಮಾವಶಿಯ ಭಯಾನಕ ಕೆಮ್ಮು. "ಈ ಮುದುಕಿ ರಾತ್ರಿ ಇಡೀ ಕೆಮ್ಮುತ್ತೆ. ಹ್ಯಾಗಾದ್ರೂ ಸಹಿಸ್ತಾರೊ ಆ ಜನ? ರಾತ್ರಿ ಅವಕ್ಕೆ ನಿದ್ದೆಯಾದ್ರೂ ಬರುತ್ತೋ? ಒಂದೇ ಒಂದ್ಸಲ ಸತ್ತಾದ್ರೂ ಹೋಗ್ಬಾರದೆ ಈ ಗೊಡ್ಡು" ಎಂದು ಒಂದು ಕ್ಷಣ ಅಂದುಕೊಳ್ಳುತ್ತಾರೆ ಪಾರಂಗೆ ಕಾಕಾ. ಆದರೆ ವಿನಾಯಕನಿಗೆ ಆಕ್ಸಿಡೆಂಟ್ ಆದಾಗ, ದಿನ ರಾತ್ರಿ ಅನ್ನದೇ ಅವನನ್ನು ನೋಡಿಕೊಂಡದ್ದು ಅದೇ ಮುದುಕಿಯಲ್ಲವೇ ಎಂಬುದು ನೆನಪಾಗಿ ತಮ್ಮ ಯೋಚನೆಗೆ ತಾವೇ ಪಶ್ಚಾತ್ತಾಪ ಪಡುತ್ತ, ತಮ್ಮ ಭಜನೆಯನ್ನು ಮುಂದುವರಿಸುತ್ತ, ನಿರ್ಭೀತರಾಗಿ ಪಾಯಖಾನೆಯೊಳಗೆ ನುಗ್ಗುತ್ತಾರೆ.

"ಇವರ ಭಜನೆಗಳೆಂದರೆ, ಇವರ ಆಫೀಸಿನಲ್ಲೇ ವರ್ಲ್ಡ್ ಫೇಮಸ್, ಗೊತ್ತಾ?" ಎಂದು ಯಾವತ್ತೂ ನೆರೆಕೆರೆಯವರಲ್ಲಿ ಒಣಗಿದ ಎದೆಯನ್ನುಬ್ಬಿಸಿ ಹೇಳುತ್ತಾರೆ ಸಾವಿತ್ರಿತಾಯಿ. ಅಮ್ಮನ ಈ ಮಾತು ಕೇಳಿ, ಪಾಲಿಟಿಕಲ್ ಸಾಯನ್ಸ್ ಪಠ್ಯಪುಸ್ತಕದಲ್ಲಿ ಅಡಗಿರುವ, ಕಾಮಕೇಳಿಯಲ್ಲಿ ಮುಳುಗಿರುವ ಬಿಳಿ-ಬಿಳಿ ವಿದೇಶೀಯರ ಫೋಟೊವನ್ನು ನಿಬ್ಬೆರಗಾಗಿ ನೋಡುತ್ತಿರುವ ವಿನಾಯಕ ಕೂಡ ಒಮ್ಮೆ ನಕ್ಕುಬಿಡುತ್ತಾನೆ. ಅವರ ಆ ಮಾತಿನಲ್ಲಿ ಅದೆಷ್ಟು ನಿಜಾಂಶವಿದೆಯೋ ಗೊತ್ತಿಲ್ಲ. ಆದರೆ, ಮುಂಜಾನೆ ೫.೧೨ ಕ್ಕೆ ವಿರಾರ್ ಪ್ಲಾಟಫಾರ್ಮಿನಿಂದ, ಚರ್ಚಗೇಟ್ ಕಡೆಗೆ ಹೊರಡುವ ಆ ಲೋಕಲ್ ಟ್ರೇನಿನ ಕೊನೆಯ ಬೋಗಿಯಲ್ಲಿ ಪಾರಂಗೆ ಕಾಕಾ ಕಂಡುಬರದಿದ್ದರೆ, ಇಡೀ ಬೋಗಿಯೇ ’ಭಣ-ಭಣ’ ಅನ್ನೋದಂತೂ ನಿಜ. ಅವರಿಗಾಗಿಯೇ ಆ ಬೋಗಿಯಲ್ಲೊಂದು ಸೀಟು ರಿಸರ್ವ್ ಆಗಿರುತ್ತೆ. ಅವರು ತಡವಾಗಿ ಬಂದರೂ ಚಿಂತೆಯಿಲ್ಲ. ಮೊದಲೇ ಬಂದು ಜಾಗ ಹಿಡಿದ ಸ್ವಪ್ನಿಲ್ ಪಾಂಚಾಳ್, ಪಾರಂಗೆ ಕಾಕಾ ಟ್ರೇನ್ ಹತ್ತಿದ ಕೂಡಲೇ ಅವರಿಗಾಗಿ ಜಾಗ ತೆರವು ಮಾಡಿಕೊಡುತ್ತಾನೆ. ನೋಡ-ನೋಡುತ್ತಿದ್ದಂತೆ, ೮ ಜನರು ಕೂಡಬಹುದಾದ ಆ ಜಾಗದಲ್ಲಿ ಹದಿನಾಲ್ಕು ಜನರ ತಂಡ ತಾಳ, ಗೆಜ್ಜೆ ಹಿಡಿದು ಸಿದ್ಧಾರಾಗಿರುತ್ತಾರೆ. ಟ್ರೇನಿನ ಕಿಟಕಿಯ ಮೇಲಿನ ತಗಡು ಭಾಗವೇ ಅವರಿಗೆ ತಬಲಾ. ಆ ಪೋರ ತುಷಾರ್ ಕೆಣಿ ಅದೆಷ್ಟು ಚೆನ್ನಾಗಿ ತಗಡು ಉರ್ಫ್ ತಬಲಾ ಬಾರಿಸುತ್ತಾನೆ. ತಾವು ಹಾಡುವಾಗ, ಎಲ್ಲಿ ಎತ್ತಬೇಕು, ಯಾವಾಗ ಮುರ್ಕೀ ಹೊಡೆಯಬೇಕು, ಯಾವಾಗ ತಾಳವನ್ನು ಡಬಲ್ ಮಾಡಬೇಕು, ಎಲ್ಲ ಅವನಿಗೆ ಸರಿಯಾಗಿ ಗೊತ್ತಿದೆ. ಈ ಜನ್ಮದಲ್ಲಿ ಯಾವತ್ತಾದ್ರೂ ತನಗೆ ಸುರೇಶ್ ವಾಡ್ಕರ್ ನ ಪರಿಚಯವಾದ್ರೆ, ಈ ಹುಡುಗನ ಪರಿಚಯವನ್ನೂ ಅವರಿಗೆ ಮಾಡಿಕೊಡಬೇಕು, ಎಂದು ಪ್ರಾರಂಭವಾದ ಯೋಚನಾಸರಣಿ, ಮಗಳು ಸ್ನೇಹಾಳ ಮದುವೆ ಇವನ ಜೊತೆ ಆದ್ರೆ ಚೆನ್ನಾಗಿರಬಹುದೇ, ಎಂಬಲ್ಲಿಯವರೆಗೆ ಓಡುತ್ತೆ. ಥತ್, ಬೇಡ ಬೇಡ. ಬಾಯ್ತುಂಬ ಗುಟ್ಕಾ ತಿನ್ನುತ್ತಾನೆ ಈ ಬಡ್ಡಿ ಮಗ. ನನ್ನ ಹುಡುಗಿಗೆ ಇವನ ಜೊತೆ ಮದುವೆಯೇ? ಹೇಗಿದ್ರೂ ವರ್ಲಿಯ ಸಾವಂತ್ ಕಾಕಿ ಸ್ನೇಹಾಳಿಗೋಸ್ಕರ ಹುಡುಗನನ್ನು ಹುಡುಕುವ ಜವಾಬ್ದಾರಿ ತೊಗೊಂಡಾಗಿದೆ. ಮತ್ಯಾಕೆ ನನಗೆ ಈ ಯೋಚನೆ ಅಂದುಕೊಳ್ಳುತ್ತಾ, ತಮ್ಮ ಬಾಯಿಯಲ್ಲಿರುವ ತಂಬಾಕೂವನ್ನು, ಕಿಟಕಿಯಿಂದ ಹೊರಕ್ಕೆ ಹಾಕಿ, ಗಂಟಲನ್ನು ರೆಡಿ ಮಾಡುತ್ತಾರೆ. ವಿನಾಯಕನಿಗೆ ಅದೆಷ್ಟು ಸಲ ಹೇಳಿಲ್ಲ ’ತಬಲಾ ಕಲಿಯೋ’ ಅಂತ. ಆ ಮಹಾಶಯ ಯಾವತ್ತು ನನ್ನ ಮಾತನ್ನು ಕೇಳಿದ್ದಾನೆ?

ಇನ್ನೇನು ಗಾಡಿ ಹೊರಡಲು ಸಿದ್ಧವಾಗಿದೆ ಅಂದಾಗ, ಕಿಟಕಿಗೆ ನೇತು ಹಾಕಿದ ಗಣಪತಿಯ ಚಿಕ್ಕ ಫೋಟೊಗೆ, ಎಲ್ಲರೂ ಭಯಭಕ್ತಿಗಳಿಂದ ನಮಿಸಿ "ವಕ್ರತುಂಡ ಮಹಾಕಾಯ..." ದ ಹರಕೆ ಸಲ್ಲಿಸಿ, ತಮ್ಮ ತಮ್ಮ ಆಯುಧಗಳನ್ನು ಹಿಡಿದುಕೊಳ್ಳುತ್ತಾರೆ. ಪಾರಂಗೆ ಕಾಕಾ, ಮತ್ತೊಮ್ಮೆ ತಮ್ಮ ಗಂಟಲನ್ನು ಶುದ್ಧೀಕರಿಸಿ "ಓಂ" ಎಂದು ಏರು ಸ್ವರದಲ್ಲಿ ಪ್ರಾರಂಭಿಸಿದರೋ, ಇಡೀ ೫.೧೨ರ ಕೊನೆಯ ಬೋಗಿ ಪುಳಕಿತಗೊಳ್ಳುತ್ತದೆ.

ಪಾರಂಗೆ ಕಾಕಾ, ಪರೇಲಿನ ಶಿಥಿಲವಾದ, ಪಾಳು-ಬೀಳಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಮೂವತ್ತು ವರ್ಷಗಳ ಹಿಂದೆ, ಅಟೆಂಡರ್ ಆಗಿ ನೌಕರಿಗೆ ಸೇರಿದ್ದರು ಕಾಕಾ. ತಮ್ಮ ಪರಿಶ್ರಮ ಹಾಗೂ ಕಲಿಯುವ ಅದಮ್ಯ ಬಯಕೆಗಳ ಬಲದಿಂದ, ಇಂದು ಟರ್ನರ್-ಫಿಟ್ಟರ್ ಆಗಿ ಭಡ್ತಿ ಹೊಂದಿದ್ದಾರೆ. ಕಂಪನಿಯ ವಾರ್ಷಿಕೋತ್ಸವದಲ್ಲಿ, ಗಣೇಶೋತ್ಸವದಲ್ಲಿ, ಆರತಿ, ಭಜನೆ, ಹಾಡಿನ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ಪಾರಂಗೆ ಕಾಕಾನದ್ದು. ಅವರ ಭಜನೆಗಳನ್ನು ಕೇಳಿ, ಕಂಪನಿಯ ಸೂಟು ಬೂಟಿನ ಎಂ ಡಿ ಕೂಡ ತಲೆದೂಗುತ್ತಾರಂತೆ. ಪ್ರತಿ ವರ್ಷ ಪಾರಂಗೆ ಕಾಕಾ ಹಾಡುವ "ದೇವಾಚಿಯೇ ದ್ವಾರೀ.." ಹಾಡಿಗೆ ಒನ್ಸ್ ಮೋರ್ ಬಂದೆ ಬರುತ್ತದೆ. ಎಂ ಡಿ ಸಾಹೇಬರು ಖುಷಿಯಾಗಿ ನೂರರ ನೋಟೊಂದನ್ನು ಬಹುಮಾನವಾಗಿ ನೀಡುತ್ತಾರೆ. ಛೆ!! ವಿನಾಯಕ, ತಬಲಾ ಕಲಿತಿದ್ದರೆ!!! ನನ್ನ ಹಾಡು, ವಿನಾಯಕನ ತಬಲಾ!!

ಮೊದಲು ಮಧ್ಯಾಹ್ನದ ಶಿಫ್ಟ್ ನಲ್ಲಿದ್ದರು. ಈಗ ಕಳೆದ ಹದಿನಾರು ವರ್ಷಗಳಿಂದ ಮುಂಜಾನೆಯ ಶಿಫ್ಟು. ಈ ಮೂವತ್ತು ವರ್ಷಗಳಲ್ಲಿ ಎಷ್ಟೆಲ್ಲ ಬದಲಾಗಿ ಹೋಗಿದೆ. ಫ್ಯಾಕ್ಟರಿಯ ಹೊರಗಿದ್ದ, ನರ್ಸೀ ಭಾಯಿಯ ಚಹಾದಂಗಡಿ ಈಗ ಇಲ್ಲ. ಅಲ್ಲಿ ರಾಘು ಶೆಟ್ಟಿಯ ಬಿಯರ್ ಬಾರ್ ಬಂದಿದೆ. ಹಿಂಭಾಗದಲ್ಲಿದ್ದ ವಿಶಾಲ ಮೈದಾನದಲ್ಲಿ ಹೊಸದೊಂದು ’ಮಾಲ್’, ರಾಕ್ಷಸನಂತೆ ಬೆಳೆದು ನಿಂತದ್ದಷ್ಟೇ ಅಲ್ಲ, ಈ ಶಿಥಿಲ ಫ್ಯಾಕ್ಟರಿಯನ್ನು ಅನುಕಂಪ ಹಾಗೂ ಅಸಹ್ಯ ಬೆರೆತ ದೃಷ್ಟಿಯಿಂದ ನೋಡುತ್ತಿದೆ. ಯಾರೋ ಕರೋಡಪತಿಯೊಬ್ಬ, ಪಾರಂಗೆ ಕಾಕಾ ಕೆಲಸ ಮಾಡುತ್ತಿರುವ ಕಂಪನಿಯನ್ನು ಕೊಂಡುಕೊಳ್ಳಲಿದ್ದಾನೆ ಎಂಬ ಸುದ್ದಿಯೊಂದು, ಕಳೆದ ಆರು ತಿಂಗಳಿಂದ ಫ್ಯಾಕ್ಟರಿಯ ಗೋಡೆಗಳಾಚೆಯಿಂದ ಕೇಳಿಬರುತ್ತಿದೆ. ’ಹಾಗೇನಾದ್ರೂ ಆಗಿಯೇ ಬಿಟ್ಟರೆ, ನಮ್ಮ ನೌಕರಿಯ ಗತಿಯೇನು’ ಎಂಬ ಚಿಂತೆ ಹೊತ್ತ ಸಹೋದ್ಯೋಗಿಗಳಿಗೆ ಸಮಾಧಾನ ಹೇಳುವ ಜವಾಬ್ದಾರಿಯೂ ಕಾಕಾನದ್ದೆ. ಇದೇ ಕಾರಣಕ್ಕಾಗಿ ಇಡೀ ಫ್ಯಾಕ್ಟರಿಯಲ್ಲಿ ಕಾಕಾನಿಗೆ ತುಂಬ ಮರ್ಯಾದೆಯಿದೆ. ಕಾಕಾ ಜೊತೆ ಕಠೋರವಾಗಿ ಮಾತಾಡಿದ ಯುವಕನೊಬ್ಬನನ್ನು, ಫ್ಯಾಕ್ಟರಿಯ ನೌಕರರು ಸೇರಿ ಹಿಗ್ಗಾ ಮುಗ್ಗಾ ಥಳಿಸಿದ್ದು, ಸ್ವತ: ಕಾಕಾ, ಆ ಯುವಕನನ್ನು ಸಂತೈಸಿ, ಮನೆಗೆ ಕಳುಹಿಸಿದ ಕತೆ, ಅಲ್ಲಿ ಜನಪ್ರಿಯ. ಕಾಕಾನಿಗೆ ಆ ಹುಡುಗ, ತಮ್ಮ ಮಗ ವಿನಾಯಕನಂತೆ ಕಂಡಿದ್ದನಂತೆ.

ಎಲ್ಲರ ಚಿಂತೆಯನ್ನು ದೂರ ಮಾಡುವ ಪಣ ತೊಟ್ಟಿರುವ ಕಾಕಾನಿಗೆ, ತನ್ನದೇ ಆದ ಎರಡು ಚಿಂತೆಗಳಿವೆ. ಮಗಳು ಸ್ನೇಹಾಳ ಮದುವೆಯ ಚಿಂತೆಯೊಂದಾದರೆ, ಮಗ ವಿನಾಯಕನ ನೌಕರಿಯ ಚಿಂತೆಯೊಂದು. ಸ್ನೇಹಾ, ಹೇಳಿಕೊಳ್ಳುವಷ್ಟು ಸುಂದರಿಯಲ್ಲ. ವಿನಾಯಕ ಹೇಳಿಕೊಳ್ಳುವಷ್ಟು ಜಾಣನಲ್ಲ. ಆತ ಬಿ.ಎ ಕೊನೆಯ ವರ್ಷದಲ್ಲಿದ್ದಾನೆ. ಈಗಿನ ದಿನಗಳಲ್ಲಿ, ಬಿ.ಎ ಓದಿಕೊಂಡವರಿಗೆ ಯಾವ ಕೆಲಸವೂ ಸಿಗೋದಿಲ್ಲ. ಅಲ್ಲದೇ, ಆತನಿಗೆ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವೇ ಇಲ್ಲ. ಅದೊಂದು ಬಂದಿದ್ದರೆ, ಯಾವುದೋ ಒಂದು ಕಾಲ್ ಸೆಂಟರಿನಲ್ಲಿ ನೌಕರಿಗೆ ತಾಗಿಸಿ, ಕೈ ತೊಳೆದುಕೊಳ್ಳಬಹುದಿತ್ತು. ಆದರೆ ದರಿದ್ರದವನಿಗೆ, ಕ್ರಿಕೆಟ್ಟು, ಸಿನೇಮ ಬಿಟ್ಟರೆ ಬೇರೆ ಯಾವುದರಲ್ಲೂ ಆಸಕ್ತಿಯೇ ಇದ್ದಂತಿಲ್ಲ. ಆ ಬಗ್ಗೆ ಕೇಳಿದಾಗಲೆಲ್ಲ "ತುಮ್ಹೀ ಗಪ್ಪ ಬಸಾನಾ.. ಮಲಾ ಮಾಹಿತಿ ಆಹೆ ಕಾಯ್ ಕರಾಯಚಾ ಆಹೆ..." ಎಂದು ಹೇಳಿ ಬಾಯಿ ಮುಚ್ಚಿಸುತ್ತಾನೆ. ಅವನಿಗೆ ಬೆಂಬಲ ನೀಡುವುದರಲ್ಲಿ ಸಾವಿತ್ರಿ ಕೂಡ ಹಿಂದೆ ಮುಂದೆ ನೋಡೋದಿಲ್ಲ. ಹಾಳಾಗಲಿ, ಇವನ ನಶೀಬು ಕೂಡ ನನ್ನ ಹಾಗೆಯೇ ಇದೆ. ಎಂ ಡಿ ಸಾಹೇಬರ ಕಾಲಿಗೆ ಬಿದ್ದು, ನಮ್ಮದೇ ಕಂಪನಿಯಲ್ಲಿ ಇವನಿಗೆ ಒಂದು ನೌಕರಿ ಕೊಡಿಸಿದರಾಯ್ತು ಎಂದು ತಮಗೆ ತಾವೇ ಹೇಳಿಕೊಂಡು, ಸಮಾಧಾನ ಪಡುತ್ತಾರೆ ಕಾಕಾ.

ದಿನವಿಡೀ, ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ, ಪರೇಲಿನಿಂದ ಸಂಜೆ ೪.೨೧ರ ಲೋಕಲ್ ಹಿಡಿದು, ದಾದರಿನಲ್ಲಿಳಿದು, ಪ್ಲಾಟಫಾರ್ಮ್ ಬದಲಾಯಿಸಿ, ವಿರಾರ್ ಗೆ ಹೋಗುವ ಫಾಸ್ಟ್ ಟ್ರೇನ್ ಹಿಡಿಯುತ್ತಾರೆ ಕಾಕಾ. ದಾದರಿನಿಂದ ಹೊರಡುವ ಆ ಟ್ರೇನಿನಲ್ಲಿ ಅಷ್ಟು ಜನಸಂದಣಿ ಇರುವುದಿಲ್ಲ. ಆರಾಮವಾಗಿ ಕೂತುಕೊಂಡೇ ಹೋಗಬಹುದು. ಇವತ್ತ್ಯಾಕೋ ತಡ ಆಯ್ತು, ದಾದರಿನ ಆ ಟ್ರೇನು ಸಿಗುತ್ತೋ ಇಲ್ವೋ ಎಂಬ ಆತಂಕದಲ್ಲಿದ್ದ ಕಾಕಾಗೆ, ಪ್ಲಾಟಫಾರ್ಮ್ ನಂಬರ್ ಆರರಲ್ಲಿ ನಿಂತಿದ್ದ ಆ ಗಾಡಿಯನ್ನು ನೋಡಿ ಜೀವ ಮರಳಿದಂತಾಯ್ತು. ಒಂದು ಪ್ಲಾಟಫಾರ್ಮಿನಿಂದ ಇನ್ನೊಂದಕ್ಕೆ ಹೋಗಲು ಬ್ರಿಜ್ಜನ್ನು ಬಳಸಬೇಕು. ಬ್ರಿಜ್ಜು ಹತ್ತಲು ಇವತ್ತ್ಯಾಕೋ ತುಂಬ ಆಯಾಸ ಅನ್ನಿಸ್ತಾ ಇದೆ. ’ಮುದುಕನಾಗಿಬಿಟ್ಟೆನಾ ನಾನು?’ ಎಂಬ ಯೋಚನೆ ಬಂದು, ಕೈಕಾಲುಗಳು ನಡುಗಹತ್ತಿದವು. ’ನನ್ನ ಆಯುಷ್ಯ ಮುಗೀತಾ ಬಂತೆ? ಅಯ್ಯೋ, ಮಾಡೋಕೆ ಅದೆಷ್ಟು ಕೆಲಸಗಳಿವೆ, ನಾನು ಸತ್ತು ಹೋದರೆ, ಸಾವಿತ್ರಿಯನ್ನ ಯಾರು ನೋಡಿಕೊಳ್ತಾರೆ?, ಸ್ನೇಹಾಳ ಮದುವೆ ಆಗುತ್ತದೆಯೇ?, ವಿನಾಯಕನಿಗೆ ನೌಕರಿ ಸಿಕ್ಕು, ಆತ ಮನೆಯ ಜವಾಬ್ದಾರಿ ಹೊರುತ್ತಾನೆಯೆ?’ ಎಂಬ ಪ್ರಶ್ನೆಗಳ ಬಾಣಗಳು ಕಾಕಾನನ್ನು ಚುಚ್ಚತೊಡಗಿದವು. ಸಾವರಿಸಿಕೊಂಡ ಕಾಕಾ, ಟ್ರೇನನ್ನೇರಿದರು. ಇದೆಂಥ ಚಡಪಡಿಕೆಯಪ್ಪಾ ಅಂದುಕೊಳ್ಳುತ್ತಾ, ಹಗುರಾಗಲು, ತಮ್ಮ ಚೀಲದಲ್ಲಿದ್ದ ಮಹಾರಾಷ್ಟ್ರ ಟೈಮ್ಸ್ ಪತ್ರಿಕೆಯನ್ನು ತೆರೆದರು. ಸ್ವಲ್ಪ ಹೊತ್ತು ’ಸು-ಡೋಕು’ ಆಡಿದರೆ, ವಿರಾರ್ ಬಂದದ್ದೇ ಗೊತ್ತಾಗೋದಿಲ್ಲ. ವಿನಾಯಕನಾದ್ರೆ, ಪಟಪಟಾಂತ ಸುಡೋಕು ಬಿಡಿಸಿ, ಎದೆಯುಬ್ಬಿಸುತ್ತಾನೆ. ಈ ವಿಷಯದಲ್ಲಿ ಜಾಣ ಅವನು. ಕ್ರಿಕೆಟ್ ಬಗ್ಗೆ ಏನಾದ್ರೂ ಮಾಹಿತಿ ಬೇಕಿದ್ದಲ್ಲಿ, ಅವನ ಹತ್ತಿರ ಕೇಳ್ಬೇಕು. ತೆಂಡೂಲ್ಕರ್ ನಿಂದ ಹಿಡಿದು ಲಾರಾವರೆಗೆ, ಕ್ರಿಕೆಟ್ಟಿನ ವಿಷಯದಲ್ಲಿ, ಆತನಿಗೆ ತಿಳಿಯದೇ ಇರೋದು ಯಾವುದೂ ಇಲ್ಲ. ಆದರೆ ಸ್ವಲ್ಪ ಅಭ್ಯಾಸ ಮಾಡಿ, ಇಂಗ್ಲಿಷ್ ಭಾಷೆ ಕಲಿತುಕೊಂಡಿದ್ದರೆ, ಆತ ದೊಡ್ಡ ಮನುಷ್ಯನಾಗ್ತಿದ್ದ ಅನ್ನೋದ್ರಲ್ಲಿ ಸಂಶಯವೇ ಇಲ್ಲ. "ಅಪ್ಪನಾಗಿ ನಾನೆಲ್ಲೂ ಸೋತಿಲ್ಲ. ಚಾಳಿನಲ್ಲಿರುವ ಇತರರಿಗಿಂತ ಹೆಚ್ಚೇ ಮಾಡಿದ್ದೇನೆ, ನನ್ನ ಮಕ್ಕಳಿಗೋಸ್ಕರ. ಇಡೀ ಚಾಳಿನಲ್ಲಿ, ಮೊದಲು ಟಿ.ವಿ ಬಂದದ್ದೇ ನಮ್ಮ ಮನೆಗೆ. ಮೊಟ್ಟ ಮೊದಲು ಕೇಬಲ್ ಕನೆಕ್ಷನ್ ಬಂದದ್ದು ನಮ್ಮ ಮನೆಗೆ. ಮೊನ್ನೆ ಮೊನ್ನೆ ೨೦೦೦ ಕೊಟ್ಟು, ವಿ ಸಿ ಡಿ ಪ್ಲೇಯರ್ ಕೂಡ ತಂದಿದ್ದೇನೆ. ಮಕ್ಕಳನ್ನು ಮುನ್ಸಿಪಾಲಿಟಿ ಶಾಲೆಗೆ ಕಳಿಸಿದ್ದೆ, ನಿಜ, ಆದರೆ ಅದು ಅವರ ಒಳಿತಿಗಾಗಿಯೇ" ಎಂದೆಲ್ಲ ಯೋಚಿಸುತ್ತ ಸುಡೋಕು ಬಿಡಿಸುತ್ತ ಕುಳಿತ ಕಾಕಾನ ದೃಷ್ಟಿ ಪಕ್ಕದ ಸೀಟಿನಲ್ಲಿ ಕೂತಿದ್ದ ಯುವಕನ ಮೇಲೆ ನೆಟ್ಟಿತು. ನುಣ್ಣಗೆ ಶೇವ್ ಮಾಡಿಕೊಂಡು, ಟಿಪ್-ಟಾಪ್ ಆಗಿ ಬಿಳಿ ಅಂಗಿ, ಟೈ ಹಾಕಿಕೊಂಡ ಆ ಹುಡುಗ ತನ್ನ ತೊಡೆಯ ಮೇಲೆ ಲ್ಯಾಪ್-ಟಾಪ್ ಕಂಪ್ಯೂಟರ್ ಹರಡಿ, ಅದೇನೊ ಲೆಕ್ಕಾಚಾರ ಮಾಡುತ್ತಿದ್ದ. ಹೊಟ್ಟೆ ತೊಳೆಸಿ ಬಂದಂತಾಯ್ತು ಕಾಕಾನಿಗೆ.

೫.೪೫ಕ್ಕೆ ವಿರಾರ್ ತಲುಪಬೇಕಿದ್ದ ಟ್ರೇನು, ಇವತ್ತು ಆರೂ ಕಾಲಿಗೆ ಬಂದು, ಬಸವಳಿದು ನಿಂತಿತು. ಕೂತಲ್ಲಿಯೇ ಮಲಗಿದ್ದ ಕಾಕಾನನ್ನು, ಯಾರೋ ಎಬ್ಬಿಸಿ, ವಿರಾರ್ ಬಂದಿರುವ ಸೂಚನೆ ನೀಡಿದರು. ಇವತ್ತ್ಯಾಕೋ ದಿನವೇ ಸರಿ ಇಲ್ಲ ಅಂದುಕೊಂಡ ಕಾಕಾ, ಲಗುಬಗನೇ ಧುರಿ ಬಿಯರ್ ಬಾರ್ ಕಡೆಗೆ ಹೆಜ್ಜೆಯನ್ನಿಟ್ತರು. ವಿನಾಯಕ ಎಂದಾದ್ರೂ ಸ್ವಂತ ಕಮಾಯಿಯಿಂದ ಲ್ಯಾಪ್ ಟಾಪ್ ಕೊಳ್ಳುವಷ್ಟು ಬೆಳೆದು ನಿಲ್ಲಬಲ್ಲನೇ? ಎಂಬ ಪ್ರಶ್ನೆಗೆ ಮನದಲ್ಲೇ ಬೆಂಕಿ ಹಚ್ಚಿ, ಡಿ ಎಸ್ ಪಿ ಕ್ವಾರ್ಟರ್ ಗೇ ಆರ್ಡರ್ ನೀಡಿದರು ಪಾರಂಗೆ ಕಾಕಾ. ಇಡಿ ಕ್ವಾರ್ಟರ್ ಹೊಟ್ಟೆಯಲ್ಲಿ ಕರಗಿ ಹೋದರೂ, ನಶೆಯೇ ಏರುತ್ತಿಲ್ಲವೇಕೆ ಎಂಬ ಪ್ರಶ್ನೆಗೂ ಇವತ್ತು ಉತ್ತರವಿಲ್ಲ. ಇವತ್ತ್ಯಾಕೋ ಸಮಾಧಾನವೇ ಇಲ್ಲವಲ್ಲ, ಎಂದುಕೊಂಡು, ಶೇರ್ ರಿಕ್ಷಾ ಹಿಡಿದು, ಪುನ: ಲಕ್ಷ್ಮಣ ಭಾವೂ ಸುರ್ವೆ ಚಾಳಿಗೆ ಪ್ರವೇಶಿಸಿದರು ಕಾಕಾ. "ಮನೆಗೆ ಹೋಗುವಷ್ಟರಲ್ಲಿ ಸಾವಿತ್ರಿ ಅಡುಗೆ ಮಾಡ್ತಾ ಇರ್ತಾಳೆ, ಸ್ನೇಹಾ, ಪಕ್ಕದ ಮನೆಯ ಸಂಗೀತಾಳ ಜೊತೆ ಕೂತು ಹರಟೆ ಹೊಡೆಯುತ್ತ ಮುಸಿ ಮುಸಿ ನಗುತ್ತಿರುತ್ತಾಳೆ, ಇನ್ನು ರಾತ್ರಿ ಹನ್ನೆರಡರ ಮೊದಲು ವಿನಾಯಕನ ಪತ್ತೆಯೇ ಇರುವುದಿಲ್ಲ"... ಇದೆಲ್ಲ ಪ್ರತಿ ದಿನದ ಕತೆಯೇ ಎಂದುಕೊಂಡು, ಇನ್ನೇನು ಮನೆಗೆ ಪ್ರವೇಶ ಮಾಡಬೇಕು ಅನ್ನುವಷ್ಟರಲ್ಲಿ, ಕಿಟಕಿಯೊಳಗಿಂದ ಒಳಗಿನ ದೃಷ್ಯ ಕಂಡು ಬರುತ್ತದೆ. ಸಾವಿತ್ರಿ ಅಡುಗೆ ಮಾಡುತ್ತಿದ್ದಾಳೆ. ಸ್ನೇಹಾ ಪಕ್ಕದ ಮನೆಯ ಸಂಗೀತಾಳ ಜೊತೆ ಕೂತು ಹರಟೆಹೊಡೆಯುತ್ತಿದ್ದಾಳೆ. ಅರೆ!! ವಿನಾಯಕ ಅಭ್ಯಾಸ ಮಾಡುತ್ತಿದ್ದಾನೆ. ಹೌದೇ? ನಿಜಕ್ಕೂ? ಹೌದು. ವಿನಾಯಕ ನಿಜಕ್ಕೂ ಅಭ್ಯಾಸ ಮಾಡುತ್ತಿದ್ದಾನೆ.

ಚಪ್ಪಲಿಯನ್ನು ಕಳಚಲು ಕಾಲಕಡೆ ಹೋಗಿದ್ದ ಕೈಗಳು, ತಂತಾನೇ ಮೇಲೆ ಬರುತ್ತವೆ. ಕಣ್ತುಂಬಿ ಬರುತ್ತವೆ. ಕಾಕಾ ಮೆಲ್ಲನೆ, ಧುರಿ ಬಿಯರ್ ಬಾರ್ ಕಡೆ ಮುಖ ಮಾಡುತ್ತಾರೆ.

1 comment:

Jayalaxmi said...

ಮುಂಬಯಿನ ಚಾಳ್ ಮತ್ತು ಲೋಕಲ್ ಟ್ರೈನಿನ ಜೀವನವನ್ನು ಅದೆಷ್ಟು ನೈಜವಾಗಿ ಅಕ್ಷರಗಳಲ್ಲಿ ಹಿಡಿದಿಟ್ಟಿದ್ದೀರಿ ಅಂದರೆ ನಿಮ್ಮ ಈ ಆರ್ಟಿಕಲ್ ಓದ್ತಾ ಓದ್ತಾ ನಿಜಕ್ಕೂ ನಾನು ಮತ್ತೆ ಮುಂಬಯಿನಲ್ಲಿದ್ದೀನೇನೊ ಅನಿಸಿತು. ಅಲ್ಲಿಯ ಲೋಕಲ್ ಟ್ರೈನಿನ ಗರ್ದಿಗಮ್ಮತ್ತು ಅನುಭವಿಸಿದವರಿಗೇ ಗೊತ್ತು.