Sunday, March 1, 2009

ಮುಂಬಯಿ ಮುಖಗಳು ಭಾಗ ೨......


ಭೂಷಣ್ ಭಾಯಿ ಬಟುಕ್ ಲಾಲ್ ಪಟೇಲನ ಜೀವನವೇ ವಿಚಿತ್ರ. ಮೊದಲು ಯಾವ ವಸ್ತುಗಳು ಅವನಿಗೆ ತುಂಬ ಇಷ್ಟವಾಗುತ್ತಿದ್ದವೋ, ಇಂದು ಅವನ್ನು ಕಂಡರೆ ಆಗುವುದಿಲ್ಲ. ಮೊದಲು ಯಾವ ವಸ್ತು ಅಂದರೆ ಉರಿದುಬೀಳುತ್ತಿದ್ದನೋ, ಇಂದು ಅವುಗಳೇ ಪಂಚ ಪ್ರಾಣ. ಅದರಲ್ಲಿ ಅವನ ಅಲಾರ್ಮ್ ಕೂಡ ಒಂದು. ಮೊದಲಾದರೆ ಅಲಾರ್ಮ್ ಕಂಡುಹಿಡಿದ ಪ್ರಾಣಿಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ಆದರೆ ಈಗ ಬೆಳಿಗ್ಗೆ ಐದೂ ಕಾಲಿಗೆ ಅಲಾರ್ಮ್ ಬಾರಿಸುತ್ತಲೆ, ನಿದ್ದೆಯಲ್ಲೇ ಮಂದಹಾಸ ಬೀರುತ್ತಾನೆ. ಮೊದಲಾದರೆ ಅಲಾರ್ಮ್ ಬಾರಿಸಿದ ನಂತರವೂ ಹತ್ತು ನಿಮಿಷ ಸುಖನಿದ್ರೆಗೆ ಹಪಹಪಿಸುತ್ತಿದ್ದವ, ಇಂದು ಅದು ಹೊಡೆದುಕೊಳ್ಳುತ್ತಲೇ, ಎದ್ದು ನೀಟಾಗುತ್ತಾನೆ. ಹಾಗೆ ನೋಡಿದರೆ, ಅಷ್ಟು ಬೇಗ ಏಳುವ ಅವಶ್ಯಕತೆ ಆತನಿಗಿಲ್ಲ. ಆದರೆ ಈ ಮೂರು ತಿಂಗಳಿನಿಂದೀಚೆ, ಅಂತಹ ಅವಶ್ಯಕತೆ ಬಂದು ನಿಂತಿದೆ. ಅದು ಅವನ ಜೀವನ್ಮರಣದ ಪ್ರಶ್ನೆ.

ನಾಲಾಸೋಪಾರಾ ಪೂರ್ವದಲ್ಲಿ ರೇಲ್ವೇ ಹಳಿಗುಂಟ ಒಂದೈವತ್ತು ಹೆಜ್ಜೆ ನಡೆದರೆ, ಎದುರುಗಡೆಯೇ ಕಾಣುತ್ತೆ ’ಜೈ ಜಿನೇಂದ್ರ ಕೋ-ಆಪ್ ಹೌಸಿಂಗ್ ಸೊಸಾಯಟಿ’. ನಾಲ್ವತ್ತು ಮನೆಗಳಿವೆ ಅಲ್ಲಿ. ಹೆಚ್ಚಾಗಿ ಎಲ್ಲರೂ ಇಮಿಟೇಶನ್ ಜೆವೆಲ್ಲರಿ ಕೆಲಸ ಮಾಡುವವರೇ. ನಮ್ಮ ಭೂಷಣ್ ಭಾಯಿ ಈ ಸೊಸಾಯಟಿಯ ಹೆಮ್ಮೆಯ ಸೆಕ್ರೆಟರಿ. ಅತ್ಯಂತ ಜನಪ್ರಿಯ ಕೂಡ. ಚೂರು ಬೊಕ್ಕ ತಲೆ- ಚೂರೇ ಚೂರು ಹೊಟ್ಟೆ ಇರದಿದ್ರೆ, ಆತ ಗುಜರಾತಿ ಫಿಲ್ಮುಗಳ ನಾಯಕನಾಗಿರಬಹುದಿತ್ತೆಂದು, ಬಹಳ ಜನರು ಆತನಿಗೆ ಹೇಳಿದ್ದಿದೆ. ಅದನ್ನು ಆತ ಈಗೀಗ ನಂಬತೊಡಗಿದ್ದಾನೆ. ವಯಸ್ಸು ನಾಲ್ವತ್ತೈದು ದಾಟಿದೆ ಎಂಬುದನ್ನು ಆತ ಮೂರು ತಿಂಗಳ ಹಿಂದೆಯೇ ಮರೆತಿದ್ದಾನೆ. ಮೂರು ತಿಂಗಳ ಹಿಂದೆ ಅಂಥದ್ದೇನು ಅನಾಹುತ ಆಯ್ತೂಂತೀರಾ? ನವರಾತ್ರಿಯ ಉತ್ಸವದ ಸಮಯ. ಅಂದು ಸೊಸಾಯಟಿ ಕಂಪೌಂಡಿನಲ್ಲಿ ಬಹಳ ವಿಜೃಂಭಣೆಯಿಂದ ದಾಂಡಿಯಾ ನೃತ್ಯ ನಡೆಯುತ್ತಿತ್ತು. ಒಂಭತ್ತು ದಿನಗಳ ಸುದೀರ್ಘ ಹಬ್ಬಕ್ಕೆ ಅಂದು ತೆರೆ ಬೀಳಲಿತ್ತು. ಇಡೀ ಸೊಸಾಯಟಿ ಸಂಭ್ರಮದಲ್ಲಿತ್ತು. ದೂರದ ಜೀವದಾನಿ ಬೆಟ್ಟದಿಂದ ನೋಡಿದರೆ, ಇಡೀ ನಾಲಾಸೋಪಾರಾದಲ್ಲಿ ಜೈ ಜಿನೇಂದ್ರ ಬಿಲ್ಡಿಂಗ್ ಮಾತ್ರ ಹೊಳೆಯುತ್ತಿರುವಂತಿತ್ತು. ಬಿಲ್ಡಿಂಗಿನ ಇಪ್ಪತ್ತೇಳು ವರ್ಷಗಳ ಇತಿಹಾಸದಲ್ಲೇ ಇಂಥದ್ದೊಂದು ಉತ್ಸವ ಆಗುತ್ತಿರುವುದೇ ಮೊದಲ ಬಾರಿ. ನವರಾತ್ರಿ ಆಚರಣೆಯ ಐಡಿಯಾ ಕೊಟ್ಟ, ಅದನ್ನು ಸಾಂಗವಾಗಿ ನೆರವೇರಿಸಿದ ಭೂಷಣ್ ಭಾಯಿ ಅಂದು ಸೊಸಾಯಟಿಯ ಹೀರೋ. ಜನರೆಲ್ಲ "ಮಾಡ ತಾರಾ ಮಂಡರಿಯಾಮಾ", "ತಾರಾ ವಿನಾ ಶಾಮ್ ಮನ್ನೆ ಇಕಲಡು ಲಾಗೆ" ಹಾಡುಗಳಿಗೆ ಮೈಮರೆತು ಕುಣಿಯುತ್ತಿದ್ದರೆ, ದೂರ ನಿಂತ ಭೂಷಣ ಭಾಯಿಯ ಕಣ್ಣುಗಳು ಅವಳನ್ನೇ ದಿಟ್ಟಿಸುತ್ತಿವೆ. ಆಕೆ ಕೊನೆಗೂ ಓರೆಗಣ್ಣಿನಿಂದ ಆತನನ್ನು ನೋಡಿ, ಒಂದು ಪುಟ್ಟ ಹೂ ನಗೆಯೊಂದನ್ನು ಅವನ ಮೇಲೆಸೆದಾಗ, ಜೀವನದಲ್ಲಿ ಎರಡನೇ ಬಾರಿ ಪ್ರೀತಿಯ ಹೊಂಡಕ್ಕೆ ಬಿದ್ದುಬಿಟ್ಟಿದ್ದ ಭೂಷಣ್. ಆಕೆ ರೀಟಾ.

ಅಲಾರ್ಮ್ ಬಾರಿಸುತ್ತಲೆ ಎದ್ದು ಲಗುಬಗನೇ ತಯಾರಾಗಿ, ಚಿಲ್ಲರೆ ಹಣ, ಸಿಗರೇಟ್ ಪ್ಯಾಕು ಮತ್ತೆ ಮೋಬಾಯಿಲನ್ನು ಜೇಬಿಗೆ ತುರುಕಿಕೊಂಡು ಸದ್ದಾಗದಂತೆ ಹೊರ ನಡೆಯುತ್ತಾನೆ. ಮಲಗಿದ ದಕ್ಷಾ, ಮಲಗಿದಲ್ಲೇ ಕೆಮ್ಮುತ್ತಾಳೆ. "ತಮೆ ಜಾವೋ ಛೋ? ಜಲ್ದೀ ಆವೋ" ಎನ್ನುತ್ತಾಳೆ. "ನಾನೇನೂ ಯುದ್ಧಕ್ಕೆ ಹೊರಟಿಲ್ಲ ಬಿಡೆ ದರಿದ್ರದೋಳೇ" ಅನ್ನಬೇಕೆನಿಸಿದರೂ, ಹಾಗೇನೂ ಅನ್ನಲಾರ. "ಬರುವಾಗ ನನ್ನ ಮಾತ್ರೆ ತರ್ತೀರಾ? ನಿನ್ನೆ ಮರೆತು ಬಂದ್ರಿ" ಎಂದು ಆಕೆ ಹೇಳಿದಾಗ, ಆತನ ಸಿಟ್ಟು ನೆತ್ತಿಗೇರುತ್ತದೆ. "ಮುಂಜಾನೆ ಐದೂವರೆಗೆ ನಿನ್ನಪ್ಪ ಅಂಗಡಿ ತೆಗೆದಿರ್ತಾನಾ?" ಎಂಬ ಮಾತುಗಳು ಗಂಟಲಲ್ಲೇ ಉಳಿದುಬಿಟ್ಟಿರುತ್ತವೆ. ಅದೂ ಅಲ್ದೇ, ನಿನ್ನೆ ಆತ ಮಾತ್ರೆಯನ್ನು ತರಲು ಮರೆತಿರಲಿಲ್ಲ. ಫ್ಯಾಕ್ಟರಿಯಿಂದ ಬರುವಾಗ, ಟ್ರೇನಿನಲ್ಲಿ ತನ್ನ ಗೆಳೆಯರ ಜೊತೆಗಿನ ರಮ್ಮಿ ಆಟದಲ್ಲಿ ನಾಲ್ಕು ನೂರ ಹದಿನಾರು ರೂಪಾಯಿಗಳನ್ನು ಕಳೆದುಕೊಂಡಿದ್ದ. ಜೇಬಲ್ಲಿ ಈಗ ಇಪ್ಪತ್ತು ರೂಪಾಯಿಯೂ ಇರಲಿಲ್ಲ. ಎಲ್ಲಿಂದ ತರೋದು ಮಾತ್ರೆ? ಈ ಹೆಂಗಸನ್ನು ಪ್ರೀತಿಸಿ ಮದುವೆಯಾದದ್ದು ತನ್ನ ಬದುಕಿನ ಅತ್ಯಂತ ದೊಡ್ಡ ತಪ್ಪು ಎನ್ನುವುದು ಆತನಿಗೆ ತಿಳಿದಿದೆ. ಆದರೆ ಮಾಡಿದ ಕರ್ಮವನ್ನು ಅನುಭವಿಸಬೇಕಲ್ಲವೆ. ’ರೀಟಾ ನನಗೆ ಮೊದಲೇ ಸಿಕ್ಕಿದ್ದರೆ! ಎಷ್ಟು ಚೆನ್ನಾಗಿರುತ್ತಿತ್ತು ಬದುಕು. ಎಂತಹ ಅದ್ಭುತ ಸೌಂದರ್ಯ ಅವಳದ್ದು. ಆಕೆ ದಾಂಡಿಯಾ ಕುಣಿಯುವಾಗ ಸೊಸಾಯಟಿಯ ಸಮಸ್ತ ಪುರುಷವರೇಣ್ಯರು ಬಾಯಿ ತೆರೆದು, ಎಲುಬನ್ನು ನೋಡುವ ಆಸೆಬುರುಕ ನಾಯಿಗಳ ಹಾಗೆ ಜೊಲ್ಲು ಸುರಿಸುತ್ತಾರೆ. ಅಂತಹ ಮೈ ಮಾಟ. ಅಂತಹ ನೃತ್ಯ. ಅಂತಹ ಹೆಂಗಸೊಬ್ಬಳು, ನನ್ನನ್ನು ಮನಸಾರೆ ಪ್ರೀತಿಸುತ್ತಿದ್ದಾಳೆ. ಅದೆಂತಹ ಮಧುರ ಬಾಂಧವ್ಯ. ಬತ್ತಿ ಹೋದ ನನ್ನ ಬದುಕಿನಲ್ಲಿ, ಪ್ರೀತಿಯ ಸಾಗರವನ್ನೇ ಹರಿಸಿದ್ದಾಳೆ. ನಾನೆಷ್ಟು ಅದೃಷ್ಟವಂತನಲ್ಲವೇ.. ಇನ್ನು ಇವಳೂ ಇದ್ದಾಳೆ, ರೋಗಿಷ್ಟೆ. ಯಾಕಾದ್ರೂ ಈ ಪೀಡೆ ಗಂಟು ಬಿದ್ದಿತೋ ನನಗೆ’ ಎಂದುಕೊಳ್ಳುತ್ತಾ, ಸೊಸಾಯಟಿಯಿಂದ ಚೂರು ಹೊರಗೆ ಬಂದಿದ್ದಾನಷ್ಟೇ.. ಮೊಬಾಯಿಲಿನ ಸಿಹಿ ರಿಂಗಣದ ಸದ್ದು ಕೇಳಿ ರೋಮಾಂಚನಗೊಳ್ಳುತ್ತಾನೆ. ಅದು ಅವಳದೇ ಮಿಸ್ ಕಾಲ್!

"ಗುಡ್ ಮಾರ್ನಿಂಗ್ ಸ್ವೀಟ್ ಹಾರ್ಟ್! ಎದ್ದು ಬಿಟ್ಯಾ?" ಎಂದು ಆತ ಕೇಳುವಾಗ, ಮಾತಿನ ಪ್ರತಿಯೊಂದು ಅಕ್ಷರದಲ್ಲೂ ರಾಶಿ ರಾಶಿ ಪ್ರೀತಿ.
"ಹಾಯ್ ಭೂಷಣ್.. ರಾತ್ರಿ ಇಡೀ ನಿದ್ರೆನೇ ಬರಲಿಲ್ಲಾ ರೀ... ನಿಮ್ಮದೇ ಯೋಚನೆ.. ಐ ಲಾವ್ ಯೂ ಭೂಷಣ್..".. ಭೂಷಣ್, ಮೂರ್ಛೆ ತಪ್ಪುವುದೊಂದೇ ಬಾಕಿ.
ಆತ "ಐ ಲ.. ಲ..ಲವ್.." ಎಂದು ತೊದಲುತ್ತಿರುವಾಗ ಅವಳೇ ಮುಂದುವರಿಸುತ್ತಾಳೆ "ಬರ್ತೀರಾ ಇವತ್ತು ಮನೆಗೆ?"
"ಬರಬೇಕೂಂತ್ಲೇ ಇದ್ದೆ ರೀಟಾ.. ಆದ್ರೆ ನಿನಗೆ ಗೊತ್ತಲ್ಲ. ಇವತ್ತು ಸೊಸಾಯಟಿಯಲ್ಲಿ ಸ್ಪೆಶಲ್ ಜೆನೆರಲ್ ಬಾಡಿ ಮೀಟಿಂಗ್ ಇದೆ. ಕೆಳಗೆ ಅಂಗಳದಲ್ಲಿ ಜನ ಸೇರಿರ್ತಾರೆ. ಅಂಥದ್ರಲ್ಲಿ ನಾನು ನಿಮ್ಮ ಮನೆಗೆ ಬರೋದು ಸರಿ ಹೋಗಲ್ಲ.. ಅಲ್ವಾ?"
"ಹೋಗಿ, ನೀವು ಯಾವತ್ತೂ ಹೀಗೇನೇ.. ನಿಮಗೆ ಗೊತ್ತಾ, ಮುಂದಿನ ತಿಂಗಳು ಚಿಂಕಿಯ ಪಪ್ಪಾ ದುಬಾಯಿಯಿಂದ ಬರ್ತಿದ್ದಾರೆ. ಆಮೇಲೆ ನಾವೆಲ್ಲ ಅಮದಾಬಾದ್ ಗೆ ಹೊರಡ್ತೀವಿ. ಮತ್ತೆ ಬರೋದು ಎರಡು ತಿಂಗಳ ನಂತ್ರ.."
"ಗೊತ್ತಿದೆ ರೀಟಾ. ನೀನು ಎರಡು ತಿಂಗಳು ಇಲ್ಲಿ ಇರೋಲ್ಲ ಅನ್ನೋ ಯೋಚನೆಯಿಂದ್ಲೇ ಪ್ರಾಣ ಹೋಗ್ತಿದೆ. ಆದ್ರೆ ಏನ್ ಮಾಡೋದು? ನಮ್ಮ ಪ್ರೀತಿಯ ಬಗ್ಗೆ ಜನರಿಗೆ ಗೊತ್ತಾಗಬಾರದಲ್ವೆ? ನನಗೆ ನನ್ನ ಮರ್ಯಾದೆಯ ಚಿಂತೆ ಇಲ್ಲ ಕಣೆ. ಆದ್ರೆ ಯಾರಾದ್ರೂ ನಿನ್ನ ಬಗ್ಗೆ ಒಂದೇ ಒಂದು ತಪ್ಪು ಮಾತು ಹೇಳಿದ್ರೂ ನಾನು ಸಹಿಸೋಲ್ಲ. ಅಂತಹ ಪರಿಸ್ಥಿತಿ ಬರಬಾರದೂಂತ್ಲೇ ಇಷ್ಟೆಲ್ಲ ಮಾಡ್ತಿದೀನಿ ಕಣೆ." ಎಂದು ಹೇಳಿದ ಆತನ ಮಾತಿನಲ್ಲಿ ಸಂಪೂರ್ಣ ಪ್ರಾಮಾಣಿಕತೆ ಇದೆ. ಅದನ್ನು ಅರಿಯಲಾರದಷ್ಟು ದಡ್ಡಿ ಅವಳು ಖಂಡಿತ ಅಲ್ಲ.
"ಐ ಎಮ್ ಸಾರೀ ಭೂಷಣ್.. ಸ್ವಾರ್ಥಿಯ ಹಾಗೆ ನಡಕೊಂಡೆ.. ಕ್ಷಮಿಸಿಬಿಡಿ.. ಐ ಲಾssss ವ್ ಯೂ..." ಭೂಷಣನಿಗೆ ಸ್ವರ್ಗಕ್ಕೆ ಮೂರೇ ಬಾಗಿಲು. ಅವಳೇ ಮುಂದುವರಿಸುತ್ತಾಳೆ "ಭೂಷಣ್.. ನನಗೆ ತುಂಬ ಟೆನ್ಶನ್ ಆಗಿದೆ ರೀ"
"ಯಾಕೆ? ಏನಾಯ್ತು ಕಣೆ? ಹೆದರಬೇಡ.. ನಮ್ಮ ಬಗ್ಗೆ ಯಾರಿಗೂ ಗೊತ್ತಾಗಲ್ಲ"
"ವಿಷಯ ಅದಲ್ಲ. ಏನೂಂದ್ರೆ... ಹೋಗಲಿ ಬಿಡಿ.. ನೀವು ತಪ್ಪು ತಿಳ್ಕೋತೀರಾ.."
"ನಾನು ತಪ್ಪು ತಿಳಿಯೋದೆ? ಹೇಳು ಕಣೆ.. ಏನಾಯ್ತು?"
"ಏನೂ ಇಲ್ಲ.. ಚಿಂಕಿಯ ಪಪ್ಪಾ ಇನ್ನೂ ಮನಿ ಆರ್ಡರ್ ಮಾಡಿಲ್ಲ.. ಫೋನ್ ಮಾಡಿದ್ರು. ಮುಂದಿನ ವಾರ ಕಳಿಸ್ತಾರಂತೆ. ನಾಡಿದ್ದು ಚಿಂಕಿಯ ಸ್ಕೂಲ್ ಫೀಸ್ ಕಟ್ಟೋಕಿದೆ. ನನಗೆ ಒಂದು ಸಹಾಯ ಮಾಡ್ತೀರಾ..."
ತಕ್ಷಣ ಕೈ ಜೇಬಿಗೆ ಹಾಕಿಕೊಂಡ ಭೂಷಣ್. ಸಿಗರೇಟು ಎಳೆದು ಬಾಯಿಗೆ ತುರುಕಿಕೊಂಡ. ತುಟಿ ನಡುಗುತ್ತಿತ್ತು.. ಉತ್ತರ ಬರಲು ತಡವಾದುದನ್ನು ಗಮನಿಸಿದ ರೀಟಾ "ಛೆ ಛೆ.. ನಿಮ್ಮಿಂದ ಹಣ ಕೇಳ್ತಿಲ್ಲ ನಾನು. ನಮ್ಮ ಪ್ರೀತಿಯ ಈ ರೀತಿ ಉಪಯೋಗ ಮಾಡಿಕೊಳ್ಳುವಷ್ಟು ಸ್ವಾರ್ಥಿ ನಾನಲ್ಲ ಭೂಷಣ್.. ನನ್ನ ಹತ್ರ ನನ್ನ ಬಂಗಾರದ ಮಂಗಳ ಸೂತ್ರ ಇದೆ.. ಅದನ್ನ ಅಡವಿಟ್ಟು ಸ್ವಲ್ಪ ಹಣ ಅಂದ್ರೆ, ಒಂದು ನಾಲಕ್ಕು ಸಾವಿರ ತಂದು ಕೊಡ್ತೀರಾ ಪ್ಲೀಸ್.."
ವಿಪರೀತ ಧರ್ಮ ಸಂಕಟಕ್ಕೆ ಸಿಲುಕಿದ್ದ ಭೂಷಣ್.. ಆದರೂ ಪ್ರೀತಿಯ ಸೆಳೆತದ ಎದುರು ಬಾಕಿ ಎಲ್ಲ ಯೋಚನೆಗಳು ಸತ್ತು ಹೋದವು.
"ಛೆ, ನಿನ್ನ ಮಂಗಳಸೂತ್ರವನ್ನು ಅಡವಿಡೋದೆ? ನಾನು ಇನ್ನೂ ಜೀವಂತವಿದ್ದೀನಿ ಡಾರ್ಲಿಂಗ್.. ಹತ್ತು ಗಂಟೆ ಸುಮಾರಿಗೆ ರಾಕೇಶನ ಕೈಯಲ್ಲಿ ಹಣ ಕಳಿಸ್ತೀನಿ. ಸರೀನಾ?" ಎಂದು ಹೇಳಿದವನು "ಮುಂದಿನ ವಾರ ನಿನ್ನ ಗಂಡ ಕಳಿಸಿದ ಕೂಡ್ಲೇ ಕೊಟ್ಟು ಬಿಡು ಪರವಾಗಿಲ್ಲ" ಅನ್ನೋದನ್ನೂ ಮರೀಲಿಲ್ಲ.
"ಥ್ಯಾಂಕ್ಯೂ ಭೂಷಣ್.. ಐ ಲಾವ್ ಯೂ ಸೋ ಮಚ್.. ನಿಮಗೆ ನಾನು ಎಷ್ಟು ಕಷ್ಟ ಕೊಡ್ತೀನಲ್ಲ..."
"ಛೆ ಛೆ.. ಹಾಗೇನಿಲ್ಲ ಕಣೆ.. ಪ್ರೀತಿಯಲ್ಲಿ ಅದನ್ನೆಲ್ಲ ಯೋಚಿಸಬಾರದು.."
"ಸರಿ, ರಾಕೇಶನ ಹತ್ರ ಹಣ ಕಳಿಸ್ತೀರಿ ತಾನೆ?"
"ಖಂಡಿತ ಮೈ ಲವ್.."
"ಓಹ್.. ಚಿಂಕಿ ಎದ್ದಳು ಅಂತ ಕಾಣುತ್ತೆ.. ಬಾಯ್ ಭೂಷಣ್".. ಎಂದು ಆತನ ಉತ್ತರಕ್ಕಾಗಿ ಕಾಯದೇ ಫೋನ್ ಇಡುತ್ತಾಳೆ, ರೀಟಾ ದೇವಿ.
ಈ ಹೊಸ ಟೆನ್ಶನ್ನೊಂದು ಅನವಶ್ಯಕವಾಗಿ ಶುರುವಾಯ್ತು. ಬ್ಯಾಂಕಿನಲ್ಲಿರೋದೇ ಹನ್ನೆರಡು ಸಾವಿರ. ಅದರಲ್ಲಿ ನಾಲ್ಕು ಸಾವಿರ ಇವಳಿಗೆ ಕೊಟ್ಬಿಟ್ರೆ.. ಊರಿಗೆ ಹಣ ಕಳಿಸೋಕಿದೆ. ಬ್ಯಾಂಕಿನ ಸಾಲದ ಕಂತು ತುಂಬೋಕಿದೆ. ಸಂಬಳ ಬರೋಕಿನ್ನೂ ಹದಿನೈದು ದಿನ. ಹೇಗೆ ನಡೆಸೋದು ಅನ್ನುವ ಯೋಚನೆಯಲ್ಲಿದ್ದವನಿಗೆ, ಹೇಗಿದ್ರೂ ಮುಂದಿನ ವಾರ ಅವಳ ಗಂಡ ಕಳಿಸಿದ ತಕ್ಷಣ ಅವಳು ಹಣ ಕೊಡ್ತಾಳೆ ಎಂಬ ಯೋಚನೆಯಿಂದ ತುಸು ಸಮಾಧಾನವಾಯ್ತು. ಕುಪ್ಪುಸ್ವಾಮಿಯ ಟಿ ಅಂಗಡೀಲಿ ಒಂದು ಖಾರೀ ಹಾಗೂ ಕಟಿಂಗ್ ಚಹಾ ಸೇವಿಸಿ, ಇನ್ನೊಂದು ಸಿಗರೇಟು ಸುಟ್ಟು ಬಿಲ್ಡಿಂಗಿಗೆ ಮರಳಿದ. ಮುರುಕು ಕುರ್ಚಿಯ ಮೇಲೆ ಮುದುಡಿ ಕುಳಿತಿದ್ದ ವಾಚಮನ್ ಧಿಗ್ಗನೆದ್ದು ಒಂದು ಸೆಲ್ಯೂಟ್ ಹೊಡೆದ.
"ಒಂಬತ್ತು ಗಂಟೆ ಸುಮಾರಿಗೆ, ರಾಕೇಶನ ಮನೆಗೆ ಹೋಗಿ, ನಾನು ಅವನನ್ನು ಕರೀತಾ ಇದೀನಿ ಅಂತ ಹೇಳು" ಎಂದು ವಾಚಮನ್ನನಿಗೆ ಆರ್ಡರ್ ಕೊಟ್ಟ ಭೂಷಣ್, ಮನೆಕಡೆಗೆ ನಡೆದು ಹೋದ.

ಜಗತ್ತಿನಲ್ಲಿ ಯಾರ ಮೇಲೂ ವಿಶ್ವಾಸ ಇರಲಿಲ್ಲ ಭೂಷಣನಿಗೆ. ರಾಕೇಶನನ್ನೊಬ್ಬನನ್ನು ಬಿಟ್ಟರೆ. ಒಳ್ಳೆಯ ಹುಡುಗ. ಮನೆಯಲ್ಲಿ ತುಂಬ ಕಷ್ಟ ಇದೆ. ಬಿ. ಕಾಂ ಕೊನೆಯ ವರ್ಷದಲ್ಲಿದ್ದಾನೆ ಹುಡುಗ. ಹೇಳಿದ ಎಲ್ಲ ಕೆಲಸ ಮಾಡ್ತಾನೆ. ಆತ ಏಳನೇ ತರಗತಿಯಲ್ಲಿದ್ದಾಗಿನಿಂದ ಪರಿಚಯ. ಅವನ ತಂದೆ ಮನೆ ಬಿಟ್ಟು ಓಡಿ ಹೋಗಿದ್ದಾಗಿನಿಂದ ಅವನ ತಾಯಿಯೇ ಸಣ್ಣ ಪುಟ್ಟ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದಾಳೆ. ಭೂಷಣನೇ ಆತನ ಶಾಲೆ-ಕಾಲೇಜಿನ ಫೀಸ್ ತುಂಬಲು ಅಷ್ಟು ಇಷ್ಟು ಸಹಾಯ ಮಾಡಿದ್ದ. ಹೀಗಾಗಿ ರಾಕೇಶನಿಗೆ, ಭೂಷಣ್ ಕಾಕಾ ಅಂದ್ರೆ ಅಪಾರ ಗೌರವ. ಭೂಷಣ್ ಹೇಳುವ ಎಲ್ಲ ಕೆಲಸಗಳನ್ನು ಮಾಡುತ್ತಿದ್ದ ಆತ. ಹೀಗಾಗಿಯೇ ಭೂಷಣ್, ಅವನಿಂದ ಸಾಕಷ್ಟು ಕೆಲಸಗಳನ್ನೂ ಮಾಡಿಸಿಕೊಳ್ಳುತ್ತಿದ್ದ.
ಒಂಬತ್ತಕ್ಕೆ ಇನ್ನೂ ಮೂರು ನಿಮಿಷ ಇರುವಾಗಲೇ ರಾಕೇಶ್, ಮನೆಯಲ್ಲಿ ಹಾಜರಾಗಿದ್ದ. ಅಷ್ಟರಲ್ಲಿ ತಯಾರಾಗಿದ್ದ ಭೂಷಣ್, ಕೈಯಲ್ಲೊಂದು ಚೆಕ್ ಬುಕ್ಕನ್ನು ಹಿಡಿದು ದಕ್ಷಾಳಿಗೆ ಒಂದು ಅಸಹ್ಯ ’ಬಾಯ್’ ಹೇಳಿ ಹೊರಬಂದ. ಇಬ್ಬರೂ ಬ್ಯಾಂಕಿನತ್ತ ನಡೆದರು.
"ರಾಕೇಶ್, ಬ್ಯಾಂಕಿನಿಂದ ನಾಲ್ಕು ಸಾವಿರ ಡ್ರಾ ಮಾಡಿ ಕೊಡ್ತೀನಿ. ಹೋಗಿ ಆ ಮೆಹ್ತಾ ಭಾಭೀ ಇದ್ದಾರಲ್ಲ.. ಅದೇ ಆ ಚಿಂಕಿಯ ಅಮ್ಮ, ಅವರಿಗೆ ಕೊಟ್ಟು ಬಾ. ಅದೇನೋ ಪಾಪ ಟೆನ್ಶನ್ನಲ್ಲಿದ್ದಾರೆ. ನಿನ್ನೆ ಸಂಜೆ ಮನೆಗೆ ಬಂದಾಗ ನನ್ನ ಹೆಂಡ್ತಿಗೆ ಹೇಳ್ತಾ ಇದ್ರಂತೆ.."
ನಿನ್ನೆ ಸಂಜೆ ಮೆಹ್ತಾ ಭಾಭೀ ಅಲಿಯಾಸ್ ರೀಟಾ ಭಾಭೀ, ಭೂಷಣನ ಮನೆಗೆ ಹೋಗಿರಲಿಲ್ಲ ಎಂಬುದು ರಾಕೇಶನಿಗೆ ಚೆನ್ನಾಗಿ ಗೊತ್ತಿತ್ತು. ಇಷ್ಟಿಷ್ಟೇ ಮೂಡಿದ ಮೀಸೆಯಡಿಯಲ್ಲಿಯೇ ಆತ ಸದ್ದಾಗದಂತೆ ನಕ್ಕಿದ್ದು, ಭೂಷಣನಿಗೆ ಕಾಣಿಸಲಿಲ್ಲ.
"ನಾನು ಹಣ ಕೊಟ್ಟದ್ದು ಯಾರಿಗೂ ಹೇಳಬೇಡ. ನಿನಗೆ ಗೊತ್ತಲ್ಲ. ನಮ್ಮ ಬಲಗೈ ಸಹಾಯ ಮಾಡಿದ್ದು ಎಡಗೈಗೂ ಗೊತ್ತಾಗಿರಬಾರದು" ಎಂದ ಭೂಷಣ್. ಆ ಮಾತುಗಳಲ್ಲಿ ಆರ್ಡರ್ ಇತ್ತು.

"ಇಲ್ಲ ಕಾಕಾ.. ಯಾವತ್ತಾದ್ರೂ ನಾನು ಆ ರೀತಿ ಮಾಡಿದ್ದೇನೆಯೇ? ನೀವು ಹೇಳಿದ ಮೇಲೆ ಮುಗೀತು. ನಾನು ಯಾರಿಗೂ ಹೇಳೋಲ್ಲ. ಯಾರಿಗಾದ್ರೂ ಗೊತ್ತಾದ್ರೆ, ನಾನೇ ಹಣ ಕೊಟ್ಟಿದ್ದು ಅಂತ ಹೇಳ್ತೀನಿ. ಸರೀನಾ ಕಾಕಾ?" ಛೇಡಿಕೆಯ ಛಾಯೆ ಇತ್ತು, ರಾಕೇಶನ ಉತ್ತರದಲ್ಲಿ.
ಬ್ಯಾಂಕಿನಿಂದ ಹಣ ತೆಗೆಸಿಕೊಟ್ಟ ಭೂಷಣನಿಗೆ ಒಂದು ವಿಚಿತ್ರ ರೀತಿಯ ಸಮಾಧಾನವಾಗಿತ್ತು. ಹಣ ಪಡೆದುಕೊಂಡು ರಾಕೇಶ್ ಹೊರಟು ಹೋದ. ಭೂಷಣ್ ರೇಲ್ವೇ ಸ್ಟೇಶನ್ನಿನ ಬಳಿ ಹೊರಟ.
ಅಂದು ಶನಿವಾರವಾದದ್ದರಿಂದ. ನಾಲ್ಕು ಗಂಟೆಯ ಸುಮಾರಿಗೆ ಮತ್ತೆ ನಾಲಾಸೋಪಾರಾಕ್ಕೆ ಮರಳಿದ್ದ ಭೂಷಣ್. ಸ್ಟೇಶನ್ನಿನ ಹೊರಗೆ ಬಂದಿದ್ದನಷ್ಟೇ, ಮೂಲೆಯ ಗಾಂವಕರ್ ಸ್ವೀಟ್ ಮಾರ್ಟ್ ನ ಎದುರೇ, ಪರೇಶ್ ಭಾಯಿ ಕಾಣಿಸಿದ.
"ಅಯ್ಯೋ ದೇವರೇ, ಈ ಪೀಡೆ ಇಲ್ಲೇಕೆ ನಿಂತಿದೆ? ಇವನೇನಾದ್ರೂ ನನ್ನನ್ನು ನೋಡಿಬಿಟ್ರೆ, ಮತ್ತೆ ಎಳ್ಕೊಂಡು ಹೋಗ್ತಾನೆ ಬಾರಿಗೆ. ಒಂದೈದು ನೂರು ರೂಪಾಯಿ ಕೈ ಬಿಟ್ಟು ಹೋಗುತ್ತೆ" ಅಂದುಕೊಂಡವನೇ, ಎಡಗಡೆಯ ಗಲ್ಲಿಗೆ ನುಗ್ಗಿದ. ಅಷ್ಟು ದೂರದಿಂದ ಹೇಗೆ ನೋಡಿದನೋ, "ಅರೆ ಭೂಸಣ್ ಭಾಯಿ... ಭೂಸಣ್ ಭಾಯಿ.." ಎಂದು ಕಿರಿಚಿದ ಪರೇಶ್ ಭಾಯಿ.
"ಮುಗಿದು ಹೋಯ್ತು ನನ್ನ ಕತೆ" ಎಂದುಕೊಂಡ ಭೂಷಣ್. ಅಷ್ಟರಲ್ಲಿ ಪರೇಶ್ ಓಡೋಡಿ ಬಂದ.
"ಏ ಹಾಲೋ ಭೂಸಣ್ ಭಾಯಿ.. ಕೇಂ ಛೋ? ಹಾಲೋ, ಆಪಣ್ ಬೈಸಿಯೇ ತುಂಗಾ ಮಾಂ" (ಬಾ, ಕೂತ್ಕೊಳ್ಳೋಣ ತುಂಗಾ ಬಾರ್ ನಲ್ಲಿ)
"ಬೇಡ ಪರೇಶ್ ಭಾಯಿ. ಮನೆಗೆ ಹೋಗೋಕಿದೆ. ಇವತ್ತು ಮೀಟಿಂಗ್ ಇದೆ ಗೊತ್ತಿದೆಯಲ್ಲ ಬಿಲ್ಡಿಂಗಿನಲ್ಲಿ" ಅಂದ ಭೂಷಣ್.
"ಇರಲಪ್ಪ.. ಮೀಟಿಂಗ್ ಇರೋದು ಏಳು ಗಂಟೆಗೆ. ಅಷ್ಟಕ್ಕೂ ಏನು ವಿಶೇಷ ಇದೆ ಇವತ್ತು ಮೀಟಿಂಗಿನಲ್ಲಿ?" ಕೇಳಿದ ಪರೇಶ್ ಭಾಯಿ.
"ಇವತ್ತು ಆ ಬಾರ್ ಗರ್ಲ್ ಮೀನಾಳದ್ದೇನಾದ್ರೂ ಇತ್ಯರ್ಥ ಆಗಲೇಬೇಕು ಪರೇಶ್ ಭಾಯಿ. ಇವತ್ತು ಅವಳನ್ನು ಬಿಲ್ಡಿಂಗಿನಿಂದ ಹೊರ ಹಾಕುವ ಬಗ್ಗೆ ರೆಸಾಲ್ಯೂಶನ್ ಪಾಸ್ ಮಾಡ್ಲೇ ಬೇಕು. ಇಲ್ಲಾಂದ್ರೆ ನಮ್ಮ ಬಿಲ್ಡಿಂಗಿನ ಮರ್ಯಾದೆ ಹೋದೀತು. ಅಷ್ಟೇ" ಎಂದ ಭೂಷಣನ ಮುಖದಲ್ಲಿ ನಿರ್ಧಾರವಿತ್ತು.
ಅಷ್ಟಕ್ಕೂ ಆದದ್ದೇನಪ್ಪ ಅಂದ್ರೆ, ಕೆಲವು ದಿನಗಳ ಹಿಂದೆ, ಜೈ ಜಿನೇಂದ್ರ ಬಿಲ್ಡಿಂಗಿನ ಒಂದು ಮನೆಯವರು, ಮೀನಾ ಎಂಬ ಹುಡುಗಿಗೆ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಸ್ವಲ್ಪ ದಿನಗಳು ಕಳೆದ ನಂತ್ರ ಅವಳೊಬ್ಬಳು ಬಾರ್ ಗರ್ಲ್ ಎಂಬುದು ಗೊತ್ತಾಗಿ, ಬಿಲ್ಡಿಂಗಿನ ಜನರಿಗೆಲ್ಲ - ಮುಖ್ಯವಾಗಿ ಹೆಂಗಸರಿಗೆಲ್ಲ- ಬಹಳ ಕಸಿವಿಸಿಯಾಗಿತ್ತು. ಮರ್ಯಾದಸ್ಥರ ಬಿಲ್ಡಿಂಗೊಂದರಲ್ಲಿ, ಇಂಥ ಬಾರ್ ಗರ್ಲ್ ಗಳು ಇರೋದು ಅಂದ್ರೇನು. ಅವಳನ್ನು ಹೇಗಾದ್ರೂ ಮಾಡಿ,ಬಿಲ್ಡಿಂಗಿನಿಂದ ಹೊರದೂಡಬೇಕು ಎನ್ನುವುದೇ ಎಲ್ಲ ಹೆಂಗಸರ ಆಸೆಯಾಗಿತ್ತು. ಹಾಗೆ ನೋಡಿದರೆ ಪಾಪ, ಅವಳು ಯಾರಿಗೂ ಕಷ್ಟವನ್ನು ಕೊಟ್ಟವಳಲ್ಲ. ಮಧ್ಯಾಹ್ನ ಮೂರೂವರೆಗೆ ಮನೆಯಿಂದ ಹೊರಡುತ್ತಿದ್ದಳು. ರಾತ್ರಿ ಒಂದು ಗಂಟೆಯ ಸುಮಾರಿಗೆ ವಾಪಸ್ಸು ಬರುತ್ತಿದ್ದಳು. ಯಾರ ಜೊತೆಯೂ ಮಾತಾಡುತ್ತಿರಲಿಲ್ಲ. ಆದರೆ ಅವಳು ಬಿಲ್ಡಿಂಗಿಗೆ ಬಂದಾಗಿನಿಂದ, ರಾತ್ರಿ ಹನ್ನೊಂದು ಗಂಟೆಯವರೆಗೆ ಹೊರಗೆ ಪಟ್ಟಾಂಗ ಹೊಡೆದು ಮನೆಯೊಳಗೆ ನುಸುಳುತ್ತಿದ್ದ ಪುರುಷವರೇಣ್ಯರು, ಈಗ ಒಂದು ಗಂಟೆಯವರೆಗೆ ಗೇಟಿನ ಬಳಿಯೇ ಮಾತನಾಡುತ್ತ ನಿಲ್ಲುವುದು, ಅವರವರ ಹೆಂಡತಿಯರಿಗೆ ಅಸಾಧ್ಯ ಸಿಟ್ಟು ತರಿಸಿತ್ತು. ಆಕೆಯನ್ನು ಹೇಗಾದರೂ ಮಾಡಿ ಈ ಬಿಲ್ಡಿಂಗಿನಿಂದ ಹೊರದೂಡಲೇಬೇಕೆಂಬುದು ಅವರ ನಿಲುವಾಗಿತ್ತು. ಬಹಳ ಜನರು ಇದೇ ಮಾತನ್ನು ಬಿಲ್ಡಿಂಗಿನ ಸೆಕ್ರೆಟರಿಯಾದ ಭೂಷಣನಿಗೆ ಹೇಳಿಯೂ ಇದ್ದರು. ಆದರೆ ಭೂಷಣ್, ಈ ಮಾತನ್ನು ಅಷ್ಟಾಗಿ ತಲೆಗೆ ಹಾಕಿಕೊಂಡಿರಲಿಲ್ಲ. ಆದರೆ ಆ ದಿನ ರೀಟಾ ಆತನಿಗೆ ಫೋನ್ ಮಾಡಿ ಕಂಪ್ಲೇಂಟ್ ಮಾಡಿದ್ದಳು.
"ನಿಮಗ್ಗೊತ್ತಾ ಭೂಷಣ್, ಆಕೆ ಬಾರ್ ಡ್ಯಾನ್ಸರ್. ಅಷ್ಟೇ ಅಲ್ಲ ವೇಷ್ಯಾವಾಟಿಕೆಯನ್ನೂ ಮಾಡುತ್ತಾಳೆ. ಇಂಥ ಹೆಂಗಸು ನಮ್ಮ ಸೊಸಾಯಟಿಯಲ್ಲಿದ್ರೆ, ಬಿಲ್ಡಿಂಗಿನ ಮಾನ ಮರ್ಯಾದೆ ಹಾಳಾಗಿ ಹೋಗುತ್ತೆ. ನಮ್ಮ ಮಕ್ಕಳ ಮೇಲೆ ಎಂಥ ಪರಿಣಾಮ ಆಗಬಹುದು. ನಿಮಗ್ಗೊತ್ತಾ, ನಿನ್ನೆ ಅವಳು ಚಿಂಕಿ ಹತ್ರ ಮಾತಾಡಿದಳಂತೆ.. ನಿನಗೆ ಡ್ಯಾನ್ಸ್ ಬರುತ್ತಾ ಚಿಂಕಿ ಅಂತ ಕೇಳಿದಳಂತೆ.. ನನಗೆ ಭಯ ಆಗ್ತಿದೆ ಭೂಷಣ್.. ಅವಳು ನಮ್ಮ ಬಿಲ್ಡಿಂಗಿನಲ್ಲಿರಬಾರದು.."
ರೀಟಾಳ ಬಾಯಿಂದ ಈ ಮಾತು ಬರುತ್ತಲೇ, ಭೂಷಣ್ ದೃಢ ಸಂಕಲ್ಪ ಮಾಡಿಯೇಬಿಟ್ಟಿದ್ದ. ಈ ಜೆನೆರಲ್ ಬಾಡಿ ಮೀಟಿಂಗಿನಲ್ಲಿ ಮೊದಲ ಅಜೆಂಡಾ, ಈ ಮೀನಾಳದ್ದೇ ಅಂದುಕೊಂಡಿದ್ದ.
"ಆಯಿತಪ್ಪ, ಆ ರೆಸಾಲ್ಯೂಶನ್ ಪಾಸ್ ಮಾಡಿಸೋಣ. ಮೊದಲು ಒಂದು ಪೆಗ್ ಹಾಕೋಣ ಬನ್ನಿ" ಮುಂದುವರಿಸಿದ ಪರೇಶ್ ಭಾಯಿ.
"ಇಲ್ಲ ಪರೇಶ್ ಭಾಯಿ, ಚೂರು ಹಣದ ತಾಪತ್ರಯ ಆಗಿದೆ. ಅಲ್ಲದೇ ಇನ್ನು ಕುಡಿಯೋದನ್ನ ನಿಲ್ಲಿಸಬೇಕು ಅಂದ್ಕೊಂಡಿದೀನಿ" ಎಂದು ಪ್ರಾಮಾಣಿಕವಾಗಿಯೇ ಹೇಳಿದ್ದ ಭೂಷಣ್.
"ಛೆ ಛೆ, ಇವತ್ತು ಹಣದ ಟೆನ್ಸನ್ ಮಾಡ್ಕೋಬೇಡಿ ಭೂಸಣ್ ಭಾಯಿ. ಇವತ್ತು ಒಳ್ಳೆ ದಿನ ನನಗೆ. ಇಲ್ನೋಡಿ, ಮೂರೂವರೆ ಸಾವಿರದ ಮಟ್ಕಾ ಹತ್ತಿದೆ ಬನ್ನಿ" ಎಂದು ಹೆಮ್ಮೆಯಿಂದ ಹೇಳುತ್ತ, ನೂರರ ಗರಿ ಗರಿ ನೋಟುಗಳನ್ನು ಜೇಬಿನಿಂದ ತೆಗೆದು ತೋರಿಸಿದ ಪರೇಶ್ ಭಾಯಿ.
ಇಂಥ ಅವಕಾಶಗಳು ಬಾರಿ ಬಾರಿ ಬರೋದಿಲ್ಲ ಎಂದು ಭೂಷಣನಿಗೆ ಚೆನ್ನಾಗಿ ಗೊತ್ತಿತ್ತು.
"ಅದಲ್ದೇ ಒಂದು ತುಂಬಾ ರುಚಿಕರವಾದ ಸುದ್ದಿಯನ್ನೂ ಹಳಬೇಕು ನಿಮಗೆ" ಅಂದ ಪರೇಶ್.
"ಏನದು? ಏನಾಯ್ತು?" ಎಂದು ಕುತೂಹಲದಿಂದ ಕೇಳಿದ ಭೂಷಣ್.
ಆದರೆ ಅಷ್ಟು ಬೇಗ ಎಲ್ಲವನ್ನೂ ಹೇಳಿಬಿಡುವ ಅವಸರ ಪರೇಶ ಭಾಯಿಗೆ ಇರಲಿಲ್ಲ.
ತುಂಗಾ ಬಾರಲ್ಲಿ ಕುಳಿತ ಗೆಳೆಯರು, ಓಲ್ಡ್ ಮಾಂಕ್ ರಂ ಹಾಗೂ ಚನಾ ದಾಲ್ ತರಿಸಿಕೊಂಡರು.
"ಏನೋ ರುಚಿಕರ ಸುದ್ದಿ ಅಂದ್ರಲ್ಲ ಪರೇಶ್ ಭಾಯಿ.. ಏನದು?" ಕೇಳಿದ ಭೂಷಣ್.
"ಹೇಳ್ತೀನಿ. ಆದರೆ ವಿಷಯ ನಮ್ಮಲ್ಲೇ ಇರಲಿ ಭೂಸಣ್ ಭಾಯಿ. ಆ ಮೆಹ್ತಾ ಭಾಭೀ ಇದ್ದಾಳಲ್ಲ.."
ಮೆಹ್ತಾ ಭಾಭೀಯ ಹೆಸರು ಕೇಳಿಯೇ ಭೂಷಣನ ಇಡೀ ಮೈ ನಡುಗಿಹೋಯ್ತು. ಕೈಯಲ್ಲಿದ್ದ ರಂ ಗ್ಲಾಸು ಕೆಳಗೆ ಬೀಳುವುದರಲ್ಲಿತ್ತು. ತುಟಿಗಳದುರಿದವು.
"ನನಗೆ ಮೊದಲಿಂದಲೂ ಸಂಶಯ ಇದ್ದೇ ಇತ್ತು ಭೂಸಣ್ ಭಾಯಿ.." ಎಂದು ಮುಂದುವರಿಸಿದ ಪರೇಶ್ ಭಾಯಿ. ಆತ ತನ್ನ ಮಾತು ಮುಂದುವರಿಸುವ ಮೊದಲೇ
ಭೂಷಣ್ ಆತನಿಗೆ ಸಮಜಾಯಿಶಿ ನೀಡುವ ಪ್ರಯತ್ನ ಮಾಡತೊಡಗಿದ. ಈ ಪರೇಶ್ ಭಾಯಿಗೆ ಗೊತ್ತಾಗಿಬಿಟ್ಟಿದ್ರೆ ಎಲ್ಲ ಮುಗಿದ ಹಾಗೆಯೇ. ಆತ ಬಿಬಿಸಿ ರೇಡಿಯೋ ಇದ್ದ ಹಾಗೆ. ಸಂಜೆಯೊಳಗೆ ಇಡೀ ಬಿಲ್ಡಿಂಗಿಗೆ ನಮ್ಮ ಬಗ್ಗೆ ಗೊತ್ತಾಗುತ್ತದೆ. ಮಾನ ಮರ್ಯಾದೆಯೂ ಹೋಗುತ್ತೆ. ದಕ್ಷಾ ಎದೆ ಒಡೆದುಕೊಂಡು ಸತ್ತೇ ಹೋಗಬಹುದು. ಆಮೇಲೆ, ಮುಂಜಾನೆ ರೀಟಾಗೆ ಕೊಟ್ಟ ನಾಲ್ಕು ಸಾವಿರಾನೂ ಹೋಗುತ್ತೆ. ಇಷ್ಟೆಲ್ಲ ರಂಪ ಆದ ಮೇಲೆ ಅವಳಲ್ಲಿ ಹಣ ಕೇಳೋಕಾಗುತ್ತದೆಯೇ?
"ಹಾಗೇನಿಲ್ಲ ಪರೇಶ್ ಭಾಯಿ. ಜನಾ ಎಲ್ಲ ಮಾತಾಡ್ಕೊಳ್ತಾರೆ. ನಿನಗ್ಗೊತ್ತಲ್ಲ, ನಾನು ಅಂಥವನಲ್ಲ. ಮತ್ತೆ ಪಾಪ ಆ ಹೆಂಗಸು ತುಂಬ ಒಳ್ಳೆಯವರು. ಜನರು ಆಡೋ ಮಾತನ್ನು ಕೇಳಿ ನೀವು ನಮ್ಮ ಮೇಲೆ.." ಆತ ಇನ್ನೂ ಮಾತು ಮುಗಿಸಿಯೇ ಇರಲಿಲ್ಲ, ಅಷ್ಟರಲ್ಲಿ ಪರೇಶ್ ತನ್ನ ರಾಗ ಎಳೆದ.
"ಅರೆ ಭೂಸಣ್ ಭಾಯಿ, ನೀವು ತುಂಬ ಮುಗ್ಧರು. ಎಂತೆಂಥ ಜನಾ ಇರ್ತಾರೆ ಅನ್ನೋದು ನಿಮಗೆ ಗೊತ್ತಿಲ್ಲ. ಅದರಲ್ಲೂ ಈ ಹೆಂಗಸಿದ್ದಾಳಲ್ಲ, ಅರೆರೆರೆ, ಭಯಂಕರ ಹೆಂಗಸಾಕೆ. ಅದೆಷ್ಟು ಸುಲಭವಾಗಿ ಗಂಡಸರನ್ನ ಬುಟ್ಟಿಗೆ ಹಾಕಿಕೊಳ್ತಾಳೆ ಅಂದ್ರೆ.."
ಭೂಷಣನ ಮೈನಡುಕ ಇನ್ನೂ ಹೋಗಿರಲಿಲ್ಲ. ಅಸಾಧ್ಯ ಸಿಟ್ಟೂ ಬರತೊಡಗಿತು. ಯಾರ ಬಗ್ಗೆ ಮಾತನಾಡುತ್ತಿದ್ದಾನಿವನು? ಎಷ್ಟು ಧೈರ್ಯ ಇವನಿಗೆ? ನಾನು ಮನಸಾರೆ ಪ್ರೀತಿಸುವ ಹೆಣ್ಣು ಆಕೆ. ನನ್ನಿಂದ ಏನೂ ಬಯಸಿಲ್ಲ. ಕೇವಲ ನಿಶ್ಕಲ್ಮಶ ಪ್ರೀತಿ ಕೊಟ್ಟವಳು. ಗಂಡನಿಂದ ಪ್ರೀತಿ ಸಿಕ್ಕಿಲ್ಲ. ಆ ಪ್ರೀತಿ ನಾನು ಕೊಟ್ಟೆ ಅಂತ ನಿಜವಾದ ಪ್ರೀತಿಯನ್ನರಸಿ ನನ್ನಲ್ಲಿಗೆ ಬಂದಿದ್ದಾಳೆ. ಅಂಥ ಒಬ್ಬ ನಿಷ್ಪಾಪಿ ಹೆಂಗಸನ್ನ ಈ ಕುಡುಕ ಹೀಗೆ ಬಯ್ಯುವುದೆ? ಸಾಧ್ಯವಾದರೆ ಇವನನ್ನು ಕೊಂದೇ ಹಾಕಬೇಕು ಎಂದುಕೊಂಡ ಭೂಷಣ. ಕೊಂದೇಬಿಟ್ಟಿರುತ್ತಿದ್ದ. ಆದರೆ ಆವತ್ತಿನ ಬಿಲ್ ಕೊಡಬೇಕಾದದ್ದು ಪರೇಶ್ ಭಾಯಿ ಎಂಬುದು ನೆನಪಾಗಿತ್ತು.
"ಛೆ ಛೆ, ಏನು ಮಾತಾಡ್ತೀ ಪರೇಶ್ ಭಾಯಿ. ಆ ಹೆಂಗಸು ಅಂಥವಳಲ್ಲಪ್ಪ" ಎಂದ ಬಹಳ ಪ್ರಯಾಸದಿಂದ.
"ನಾನೇ ಸ್ವತಹ ನೋಡಿದೆ ಭೂಸಣ್ ಭಾಯಿ ಇವತ್ತು." ಎಂದ ಪರೇಶ್.
"ಇವತ್ತಾ? ಏನು ನೋಡಿದಿ?" ಆಶ್ಚರ್ಯದಿಂದ ಕೇಳಿದ ಭೂಷಣ್. ಇವತ್ತು ತಾನು ರೀಟಾಳನ್ನ ಭೇಟಿಯೇ ಆಗಿಲ್ಲ.
"ಹೂಂ. ಇವತ್ತು ಮನೆಯಿಂದ ಕೆಳಗೆ ಇಳೀತಾ ಇದ್ದೆ. ಆ ರಾಕೇಶ ಇದ್ದಾನಲ್ಲ, ಆತ ಅವಳ ಮನೆಗೆ ನುಗ್ಗಿದ.."
"ಓಹೋ, ಹಾಗೋ ವಿಷಯ. ಏನಯ್ಯ ನೀನು ಪರೇಶ್. ನಿನಗ್ಗೊತ್ತಾ ಆ ರಾಕೇಶನನ್ನು ಅವಳ ಮನೆಗೆ ಕಳಿಸಿದ್ದೇ ನಾನು. ಮೆಹ್ತಾ ಭಾಭಿಗೆ ಸ್ವಲ್ಪ ಹಣ ಬೇಕಿತ್ತಂತೆ. ನಾನೇ ವಿಡ್ರಾ ಮಾಡಿ, ರಾಕೇಶನ ಕೈಯಲ್ಲಿ ಕಳಿಸಿಕೊಟ್ಟಿದ್ದೆ" ಸ್ವಲ್ಪ ಧೈರ್ಯ ಬಂದಂತಾಗಿತ್ತು ಭೂಷಣನಿಗೆ.
"ಸ್ವಲ್ಪ ಮುಂದೆ ಕೇಳು ಭೂಸಣ್ ಭಾಯಿ. ನನಗೆ ಮೊದಲಿಂದ್ಲೂ ಅವರಿಬ್ಬರ ಮೇಲೆ ಒಂದು ಡೌಟ್ ಇತ್ತು. ನಾನು ಕೆಳಗೆ ಗೇಟ್ ಬಳಿಯೇ ನಿಂತಿದ್ದೆ. ಅರ್ಧ ಗಂಟೆ ಆದ್ರೂ ಈ ಹುಡುಗ ಅವಳ ಮನೆಯಿಂದ ಬರಲೇ ಇಲ್ಲ. ನನಗೆ ಗ್ಯಾರಂಟೀ ಆಯ್ತು. ಒಳಗೆ ಏನೋ ನಡೀತಾ ಇದೆ ಅಂತ" ತನ್ನ ಗರಮಾಗರಂ ಸುದ್ದಿಯನ್ನು ಪರೇಶ್ ಭಾಯಿ ನೀಡುತ್ತಲೇ ಇದ್ದ.
ಭೂಷಣನ ಎದೆಯಲ್ಲಿ ಸಂಕಟ. ಆ ಬಡ್ಡಿ ಮಗ ಅರ್ಧ ಗಂಟೆ ಅವಳ ಮನೆಯಲ್ಲಿ ಏನು ಮಾಡುತ್ತಿರಬಹುದು? ನಿಜಕ್ಕೂ ಪರೇಶ್ ಹೇಳುವ ಹಾಗೆ ರಾಕೇಶ್ ಮತ್ತೆ ರೀಟಾ ಮಧ್ಯೆ... ಛೆ ಛೆ ಸಾಧ್ಯವಿಲ್ಲದ ಮಾತು. ರೀಟಾ ಅಂಥವಳಲ್ಲವೇ ಅಲ್ಲ. ಅವಳು ಕೇವಲ ನನ್ನನ್ನು ಮಾತ್ರ ಪ್ರೀತಿಸ್ತಾಳೆ. ಇಬ್ಬರೂ ಪಾಪ ಏನೋ ಪಟ್ಟಾಂಗ ಹೊಡೆಯುತ್ತ ಕೂತಿರಬಹುದು. ಅದನ್ನೇ ತಿರುಚುತ್ತಿದ್ದಾನೆ ಈ ನಾಲಾಯಕ್ ನನ್ಮಗ.
"ಏನು ಅಂತ ಮಾತಾಡ್ತೀಯಾ ಪರೇಶ್ ಭಾಯ್. ಅರ್ಧ ಗಂಟೆ ಆತ ಅವಳ ಮನೆಯಲ್ಲಿ ಕೂತಿದ್ದ ಅಂದ ಮಾತ್ರಕ್ಕೆ, ಅವರಿಬ್ಬರ ಮಧ್ಯೆ ಏನೋ ಇದೆ ಅಂತ ಹೇಳ್ತಿದ್ದೀಯಲ್ಲ, ನಿನಗೆ ನಾಚಿಕೆ ಆಗ್ಬೇಕು. ಮೆಹ್ತಾಭಾಭಿಯ ವಯಸ್ಸೇನು, ಆ ಹುಡುಗನ ವಯಸ್ಸೇನು.. ಛೆ.."
"ಆ ಹುಡುಗ ಕಾಲೇಜಿನಲ್ಲಿ ಕಲಿಯುತ್ತಿದ್ದಾನೆ. ಭೂಸಣ್ ಭಾಯ್. ಅವನ ವಯಸ್ಸಿನಲ್ಲಿ, ನನ್ನ ಮದುವೆ ಆಗಿತ್ತು. ಕತೆ ಇನ್ನೂ ಮುಗಿದಿಲ್ಲ, ಮುಂದೆ ಕೇಳು" ಎಂದು ಗದರಿಸಿದ ಪರೇಶ್.
ಇನ್ನೊಂದು ಪೆಗ್ ತರಿಸಿದ ಭೂಷಣ್.
"ನಾನು ಹೋಗಿ, ಚೌರಸಿಯಾನ ಅಂಗಡಿಯಲ್ಲಿ ಮಾವಾ ತೊಗೊಳ್ತಾ ಇದೀನಿ, ಅಷ್ಟರಲ್ಲಿ ರಾಕೇಶ್ ಬಂದ. ಜೇಬಿನಿಂದ ಒಂದು ಪೊಟ್ಟಣ ತೆಗೆದು, ಕಚರಾಪೇಟಿಯಲ್ಲಿ ಹಾಕಿದ. ಒಂದು ಸಿಗರೇಟ್ ತೊಗೊಂಡು ಅಲ್ಲಿಂದ ಹೊರಟು ಹೋದ. ಚೌರಸಿಯಾ ನಕ್ಕಿದ್ದು ನೋಡಿ, ನಾನು ಅವನಿಗೆ ಕೇಳಿದೆ, ಏನಾಯ್ತೂಂತ. ಚೌರಸಿಯಾ ಹೇಳಿದ, ನಿಮ್ಮ ಬಿಲ್ಡಿಂಗಿನ ಮಕ್ಕಳು ದೊಡ್ಡವರಾದರು ಸ್ವಾಮಿ. ಆ ಹುಡುಗ ಆಗ ಬಂದು ಕಾಂಡಮ್ ಪ್ಯಾಕೇಟ್ ತೊಗೊಂಡುಹೋದ ಅಂತ. ನನಗೆ ನಂಬೋಕಾಗಲಿಲ್ಲ. ರಾಕೇಶ್ ಎಸೆದ ಪೊಟ್ಟಣ ತೆಗೆದು ನೋಡ್ತೀನಿ. ಯೂಸ್ ಮಾಡಿದ ಕಾಂಡಮ್. ಈಗೇನಂತೀರಿ ಭೂಸಣ್ ಭಾಯ್? ಬೇಕಿದ್ರೆ ಕೇಳಿ ಚೌರಸಿಯಾಗೆ"
ಭೂಷಣನ ಬಾಯಿಂದ ಮಾತೇ ಹೊರಡಲಿಲ್ಲ. ಒಂದು ಪೆಗ್ ಎರಡಾಯ್ತು. ಎರಡು- ನಾಲ್ಕಾಯ್ತು.
ಜೈ ಜಿನೇಂದ್ರ ಕೋ-ಆಪ್ ಹೌಸಿಂಗ್ ಸೊಸಾಯಟಿ ಲಿಮಿಟೆಡ್ ನ ಜೆನೆರಲ್ ಬಾಡಿ ಮೀಟಿಂಗ್ ಶುರುವಾಯ್ತು. ಪ್ರತಿಯೊಂದು ಮನೆಯಿಂದ ಒಬ್ಬ ಪ್ರತಿನಿಧಿ ಮೀಟಿಂಗಿನಲ್ಲಿ ಹಾಜರಿದ್ದ. ಬಾರ್ ಗರ್ಲ್ ಮೀನಾಳನ್ನು ಈ ಬಿಲ್ಡಿಂಗಿನಿಂದ ಓಡಿಸಲೇಬೇಕೆಂಬ ನಿರ್ಧಾರ ಪ್ರತಿಯೊಬ್ಬರು ಮಾಡಿಕೊಂಡೇ ಬಂದಿದ್ದರು.
"ಎಜೆಂಡಾ ಏನು ಭೂಷಣ್ ಭಾಯಿ?" ಅಂತ ಯಾರೋ ಕೇಳಿದರು. ನಡುಗುತ್ತ ಎದ್ದು ನಿಂತ ಭೂಷಣ್ ಭಾಯಿ. ಕಾಲುಗಳಲ್ಲಿ ಶಕ್ತಿಯೇ ಇರಲಿಲ್ಲ. ಸಂಪೂರ್ಣ ಎರಡು ಕ್ವಾರ್ಟರ್ ರಂ ಹೊಟ್ಟೆಯೊಳಗಿತ್ತು. ತಲೆ ಹಾಳಾಗಿತ್ತು.
"ನಮ್ಮದು ಮರ್ಯಾದಸ್ಥರ ಸೊಸಾಯಟಿ. ಇಲ್ಲಿ ವೇಷ್ಯೆಯರಿರುವುದು ನಮಗೆಲ್ಲ ಅಪಮಾನದ ಸಂಗತಿ. ರೀಟಾಳಂಥ ಬಾರ್ ಗರ್ಲ್ ಗಳು, ಇಡೀ ಸಮಾಜಕ್ಕೇ ಕುತ್ತು ತರ್ತಾರೆ. ಈ ರೀಟಾಳಂಥ ವೇಷ್ಯೆಯರಿದ್ದರೆ, ನಾಳೆ ನಮ್ಮ ಮಕ್ಕಳು ತಪ್ಪು ದಾರಿ ಹಿಡೀತಾರೆ. ರೀಟಾಳನ್ನು ತಕ್ಷಣ ಇಲ್ಲಿಂದ ಓಡಿಸಲೇಬೇಕು...."

ಜನ ಅವಾಕ್ಕಾಗಿ ನಿಂತಿದ್ದರು...

5 comments:

naveen said...

ಗುರು ನಿಮ್ಮ ಎಲ್ಲಾ ಲೇಖನಗಳ೦ತೆ ಈ ಲೇಖನವು ತು೦ಬ ಚೆನ್ನಾಗಿದೆ. ಹೀಗೆ ಬರೆಯುತ್ತಾ ಜೊತೆ ಬರೆದಾಗ ನಮಗೂ ತಿಳಿಸುತ್ತಾ ಇರಿ. ಆಲ್ ದಿ ಬೆಸ್ಟ್

Avinash Kamath said...

ಧನ್ಯವಾದಗಳು ನವೀನ್..

jayalaxmi said...

ನಿರೂಪಣೆ ತುಂಬಾ ಸೊಗಸಾಗಿದೆ. ತಾನೆ ತಪ್ಪಿತಸ್ಥ ಸ್ಥಾನದಲ್ಲಿದ್ದಾಗಲೂ ಎದುರಿನವರಿಂದ ಮಾತ್ರ ನಿಯತ್ತು ಬಯಸುವುದು ಮನುಷ್ಯನ ವೀಕ್‍ನೆಸ್%ಗಳಲ್ಲೊಂದು.. ಕಥೆಯ ಅಂತ್ಯ ಇಷ್ಟ ಆಯ್ತು. ಅಭಿನಂದನೆ.

Badarinath Palavalli said...

ಸರ್,

ಶೈಲಿ ಸಲೀಸಾಗಿ ಮನಮುಟ್ಟುತ್ತದೆ. ಕ್ಲೈಮ್ಯಾಕ್ಸ್ ಬಹಳ ಸೊಗಸಾಗಿದೆ. ಹೀಗೆ ಮುಂದುವರೆಸಿರಿ...

ಅಂದ ಹಾಗೇ ’ನನ್ನ ಕೂಸೇ’ ಕವನ ಓದಿ ಕಮೆಂಟ್ ಹಾಕಿ..
http://badari-poems.blogspot.com/2010/11/blog-post.html

email: cameraman@rediffmail.com

I am in Facebook search “Badarinath.Palavalli”

Anonymous said...

ತುಂಬಾ ಚೆನ್ನಾಗಿದೆ ..... ಕೆಲವೊಮ್ಮೆ ನನ್ನ ಮನಸ್ಸು ಸಹ ಸ್ವಲ್ಪ ಕಸಿವಿಸಿ ಗೊಂಡು ಬಹಳ ಹೊತ್ತು ಯೋಚಿಸುವಂತೆ ಮತ್ತು ಯಾಕೆ ಹೀಗೆ ಅನ್ನೋ ಗೊಂದಲ .. ಮನ ಮುಟ್ಟಿತು ಅಂದ್ರೆ ,ಲೇಖನದ ಸಾರ್ಥಕ್ಯ ಸಾದಿಸಿದಂತಲ್ಲವೆ ?ಅರಿನ್ಗ್