Wednesday, March 11, 2009

ಮೃಗತೃಷ್ಣ... ಮಣ್ಣ್ ದ ಲೆಪ್ಪು


ಮುಂಬಯಿಯ ಸುಪ್ರಸಿದ್ಧ ಸಂಸ್ಥೆ ಕರ್ನಾಟಕ ಸಂಘದ ’ಕಲಾಭಾರತಿ’ ತಂಡವು ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರಸ್ತುತ ಪಡಿಸುತ್ತಿರುವ ಒಂದು ವಿಶೇಷ ನಾಟಕದ ಹೆಸರು ’ಮೃಗತೃಷ್ಣ’. ಖ್ಯಾತ ಲೇಖಕಿ ವಸುಮತಿ ಉಡುಪರು ಈ ನಾಟಕವನ್ನು ರಚಿಸಿದ್ದಾರೆ. ಅತ್ಯಂತ ಸರಳ Narrative ಹೊಂದಿರುವ ಈ ನಾಟಕವು, ಕೆಲವು ಕ್ಲಿಷ್ಟ ಪ್ರಶ್ನೆಗಳನ್ನು ಕೇಳುತ್ತದೆ.

ಭುವನ ವರ್ಮ ಎಂಬ ರಾಜ ಬೇಟೆಗೆಂದು ಕಾಡಿಗೆ ಬಂದಿರುತ್ತಾನೆ. ಅದೇ ಸಮಯದಲ್ಲಿ ದೇವಲೋಕದ ಕನ್ಯೆಯೊಬ್ಬಳು (ಸುಗಂಧಿನಿ), ದೇವಲೋಕದ ಕಟ್ಟುಪಾಡುಗಳನ್ನು ಮೀರಿ, ತನ್ನ ಸಖಿಯೊಂದಿಗೆ ಭೂಲೋಕಕ್ಕೆ ಇಳಿದು ಅದೇ ಅರಣ್ಯಕ್ಕೆ ಬಂದಿದ್ದಾಳೆ. ಕಾಡಿನ ಪಕ್ಕದಲ್ಲಿರುವ ಅಲಕನಂದಾ ನದಿಯ ತೀರದಲ್ಲಿ ಅವರಿಬ್ಬರ ಭೇಟಿಯಾಗಿ, ಪ್ರೇಮಾಂಕುರವಾಗುತ್ತದೆ. ಸುಗಂಧಿನಿ ಗರ್ಭಿಣಿಯಾಗುತ್ತಾಳೆ.

ಮರ್ತ್ಯನೊಬ್ಬನ ಜೊತೆ ಅಂಗಸಂಗ ಮಾಡಿದ್ದಕ್ಕಾಗಿ ಸಿಟ್ಟಿಗೆದ್ದ ದೇವಲೋಕದ ರಾಜ, ತನ್ನ ಮಗಳು ಸುಗಂಧಿನಿಯನ್ನು ಹೀಯಾಳಿಸುತ್ತಾನೆ. ಭುವನವರ್ಮನನ್ನು ಮರೆತುಬಿಡುವಂತೆ ಅವಳಿಗೆ ಆದೇಶಿಸುತ್ತಾನೆ. ಆದರೆ ಸುಗಂಧಿನಿ ಆತನ ಮಾತನ್ನು ಒಪ್ಪುವುದಿಲ್ಲ. ಮತ್ತೆ ಭೂಲೋಕಕ್ಕೆ ತೆರಳಿ, ತಾನು ಪ್ರೀತಿಸಿದ ರಾಜನ ಜೊತೆಯೇ ಬದುಕುವೆ ಎನ್ನುತ್ತಾಳೆ. ಅವಳ ತಾಯಿಯೂ (ದೇವಲೋಕದ ರಾಣಿ) ಆಕೆಯನ್ನು ಸಮರ್ಥಿಸಿದಾಗ, ದೇವತಾ ರಾಜ ಸುಗಂಧಿನಿಯನ್ನು ಮತ್ತೆ ಭೂಲೋಕಕ್ಕೆ ಕಳುಹಿಸಿಕೊಡಲು ಒಪ್ಪಿಗೆ ನೀಡುತ್ತಾನೆ. ಭುವನವರ್ಮನಿಗೆ ’ಚಿರಂಜೀವಿತ್ವದ’ ವರವನ್ನೂ ನೀಡುತ್ತಾನೆ. ಆದರೆ ಅವನದ್ದೊಂದು ಶರತ್ತು ಇದೆ. ಪ್ರೀತಿಯು ಮಾಸಿ, ಭೂಲೋಕದ ಸಹವಾಸ ಸಾಕು ಎನಿಸಿ ಆಕೆ ಮರಳಿ ದೇವಲೋಕಕ್ಕೆ ಬಂದರೆ, ಪುನಹ ಆಕೆ ಭೂಲೋಕಕ್ಕೆ ತೆರಳುವಂತಿಲ್ಲ ಎಂಬುದು. ಆ ಶರತ್ತನ್ನು ಮನಸಾರೆ ಒಪ್ಪಿ, ತಾನು ಪ್ರೀತಿಸುವ ರಾಜನಿಗೆ ’ಅಮರತ್ವದ’ ವರ ಸಿಕ್ಕಿದ್ದನ್ನು ಕೇಳಿ, ಸುಗಂಧಿನಿ ಅತ್ಯಂತ ಸಂತಸದಿಂದ ಭೂಲೋಕಕ್ಕೆ ಮರಳಿ, ಭುವನವರ್ಮನ ಜೊತೆ ಸಂಸಾರ ನಡೆಸುತ್ತಾಳೆ.

ಒಂದು ದಿನ, ಭುವನವರ್ಮನ ಆಪ್ತ ಮಿತ್ರ, ಅರಮನೆಯ ಬಾಣಸಿಗನ ಮಗ ರಕ್ತಾಕ್ಷನಿಗೆ, ತನ್ನ ಒಡೆಯನಿಗೆ ಸಿಕ್ಕ ವರದ ಬಗ್ಗೆ ಗೊತ್ತಾಗುತ್ತದೆ. ಆತ "ನಿಮ್ಮ ಜಾಗದಲ್ಲಿ ನಾನಿದ್ದರೆ, ಈ ವರವೇ ಬೇಡ, ಚಿರಯೌವನ ಇಲ್ಲದ ಚಿರಂಜೀವಿತ್ವವನ್ನು ಪಡೆದುಕೊಂಡು ಏನು ಮಾಡುವುದು ಎಂದು ಕೇಳುತ್ತಿದ್ದೆ" ಎಂದು ಭುವನವರ್ಮನಿಗೆ ಹೇಳಿದಾಗ, ರಾಜನಿಗೆ ಆಘಾತವಾಗುತ್ತದೆ. ಸಮಯ ಕಳೆದಂತೆ ಮುದುಕುನಾಗುತ್ತ ಹೋಗಬೇಕು, ರೋಗಗ್ರಸ್ತನಾಗಬೇಕು, ಅದೆಷ್ಟೋ ನೋವುಗಳನ್ನನುಭವಿಸಬೇಕು, ಅನುಭವಿಸುತ್ತಲೇ ಇರಬೇಕು, ಆದರೆ ಸಾವೆಂಬುದು ಮಾತ್ರ ತನ್ನ ಹತ್ತಿರವೂ ಸುಳಿಯದು ಎಂಬುದು ಆತನಿಗೆ ಗೊತ್ತಾದಾಗ, ತನಗೆ ಸಿಕ್ಕಿದ್ದು ವರವಲ್ಲ, ಅದೊಂದು ಶಾಪ ಎನ್ನುವುದು ಆತನಿಗೆ ಅರಿವಾಗುತ್ತದೆ.

ಕಾಲಚಕ್ರ ಉರುಳುತ್ತದೆ. ಭುವನವರ್ಮನಿಗೆ ವೃದ್ಧಾಪ್ಯದ ಸಮಯ ಬರುತ್ತದೆ. ಹಣ್ಣು ಹಣ್ಣು ಮುದುಕನಾಗುತ್ತಾನೆ. ಆದರೆ ಆತನಿಗೆ ಸಾವೇ ಇಲ್ಲ. ಆತ ಸುಗಂಧಿನಿಗೆ ಮರಳಿ ದೇವಲೋಕಕ್ಕೆ ಹೋಗಿ, ತಂದೆ ಕೊಟ್ಟ ಶಾಪವನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸುವಂತೆ ಕೇಳಿಕೊಳ್ಳುತ್ತಾನೆ. ಒಮ್ಮೆ ದೇವಲೋಕವನ್ನು ಸೇರಿದರೆ, ಆಕೆ ಮರಳಿ ಬರುವಂತಿಲ್ಲ. ಹೀಗಾಗಿ ಅವಳು ರಾಜನನ್ನು ಬಿಟ್ಟು ಹೋಗಲು ತಯಾರಿಲ್ಲ. ಪ್ರತಿದಿನ ಅವರ ಮಧ್ಯೆ ಇದೇ ವಾಗ್ವಾದ.

ಹೀಗಿರಲು, ಚಿರ ಯೌವನೆಯಾದ ಸುಗಂಧಿನಿಯ ಮರಿ ಮೊಮ್ಮಗ ಅವಳಲ್ಲಿ ಅನುರಕ್ತನಾಗುತ್ತಾನೆ. ದೈಹಿಕವಾಗಿ ಅವಳನ್ನು ಕೂಡಿಕೊಳ್ಳಲು ಪ್ರಯತ್ನಿಸುತ್ತಾನೆ. ಇಂತಹ ಅಪಮಾನಕರ ಪರಿಸ್ಥಿತಿಯಲ್ಲೂ ಆಕೆ, ತನ್ನ ರಾಜನನ್ನು ಬಿಟ್ಟು ಹೋಗುವುದಿಲ್ಲ. ಕೊನೆಗೊಮ್ಮೆ, ಭುವನವರ್ಮನ ವೃದ್ಧಾಪ್ಯದ ಪರಿತಾಪವನ್ನು ನೋಡಲಾಗದೇ, ಶಾಶ್ವತವಾಗಿ ತನ್ನ ಲೋಕಕ್ಕೆ ಮರಳುತ್ತಾಳೆ. ಅಲ್ಲಿ ಭುವನವರ್ಮನಿಗೆ ಮುಕ್ತಿ ಕರುಣಿಸುವಂತೆ, ತನ್ನ ತಂದೆಯ ಬಳಿ ಕೇಳಿಕೊಳ್ಳುತ್ತಾಳೆ. ಕೊಟ್ಟ ಶಾಪವನ್ನು ಮರಳಿ ಪಡೆಯಲು ಸಾಧ್ಯವಿಲ್ಲವಾದರೂ, ಭುವನವರ್ಮ ಒಂದು ಹುಳುವಾಗಲಿ, ಮಳೆಗಾಲದಲ್ಲಿ ಭೂಮಿಗೆ ಬಂದು, ಬೇಸಗೆಯಲ್ಲಿ ಮತ್ತೆ ಭೂಮಿಯೊಳಗೆ ಸೇರಿಕೊಳ್ಳುವಂತಾಗಲಿ ಎಂಬ ವರವನ್ನು ಆತ ಕರುಣಿಸುತ್ತಾನೆ.

ಇದಿಷ್ಟು ಕತೆಯ ತಿರುಳು.

ಯೌವನದ ನಿರಂತರತೆಯ ಬಯಕೆ, ಮುಪ್ಪಿನ ಭಯ, ಸಾವಿಗಾಗಿ ತವಕ, ಈ ನಾಟಕದ ಒಂದು ಆಯಾಮವಾಗಿದ್ದರೆ, ಪ್ರೀತಿ ಶ್ರೇಷ್ಠವಾಗಿರುವುದು, ಪ್ರೀತಿ ಕಾಲಾತೀತ ಹಾಗೂ ಸೀಮಾತೀತವಾಗಿರುವುದು ಇನ್ನೊಂದು ಆಯಾಮವನ್ನು ಕಲ್ಪಿಸುತ್ತದೆ. ಈ ವಿಭಿನ್ನ ಧ್ರುವಗಳು, ಒಂದರ ಜೊತೆಗೊಂದು ಸಂಘರ್ಷಿಸುತ್ತಲೇ ಇರುವುದೇ ನಾಟಕದ ನಡೆಯಾಗಿದೆ.

ಈ ಅಮರತ್ವದಂಥ ಗಂಭೀರ ವಸ್ತು, ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಮೂಡಿ ಬಂದಿರುವುದು ಈ ನಾಟಕದ ವಿಶೇಷ. ಸ್ತ್ರೀ ಶೋಷಣೆ, ತ್ಯಾಗ, ಪುರುಷ ಪ್ರಧಾನ ವ್ಯವಸ್ಥೆಯ ಅಹಂಕಾರ ಇತ್ಯಾದಿಗಳು, ಅಮರತ್ವದ ಮೂಲವಸ್ತುವಿನ ಜೊತೆ ನಾಜೂಕಾಗಿ ನೇಯ್ದುಕೊಂಡಿರುವುದು, ಈ ನಾಟಕದ ಆಯಾಮವನ್ನು ಇನ್ನೂ ವಿಸ್ತೃತಗೊಳಿಸುತ್ತದೆ.

ನಾಟಕದ ನಿರ್ದೇಶಕರಾದ ಶ್ರೀ ಭರತ್ ಕುಮಾರ್ ಪೊಲಿಪು ಅವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಾಟಕದ ಅಂತ್ಯದಲ್ಲಿ ಒಂದು ದೃಷ್ಯವನ್ನು ಸೇರಿಸಿದ್ದಾರೆ. ಭುವನವರ್ಮನಿಗೆ ಮುಕ್ತಿ ದೊರೆತು, ಆತ ಹುಳುವಾದ ಮೇಲೆ, ಮತ್ತೊಮ್ಮೆ ತನ್ನ ತಂದೆಯ ಅಪ್ಪಣೆಯನ್ನು ಮೀರಿ, ಸುಗಂಧಿನಿ ಭೂಲೋಕಕ್ಕಿಳಿದು, ಆ ಹುಳುವನ್ನು ಅಪ್ಪಿಕೊಳ್ಳುವುದರೊಂದಿಗೆ ನಾಟಕಕ್ಕೆ ತೆರೆ ಬೀಳುತ್ತದೆ. ಪ್ರೀತಿ ಎಂಬುದು, ಯಾವುದೇ ಕಟ್ಟುಪಾಡುಗಳಿಗೆ ಆಧೀನವಲ್ಲ ಎಂಬ interpretation ಕೊಟ್ಟು, ನಿರ್ದೇಶಕರು ಪ್ರೀತಿಯ ಇನ್ನೊಂದು ಆಯಾಮವನ್ನು ತೆರೆದಿಡುತ್ತಾರೆ.

ಈ ನಾಟಕವನ್ನು, ಶ್ರೀ ಭರತ್ ಕುಮಾರ್ ಅವರೇ ತುಳು ಭಾಷೆಗೆ ಅನುವಾದಿಸಿದ್ದಾರೆ. ಅದರ ಹೆಸರು "ಮಣ್ಣ್ ದ ಲೆಪ್ಪು". (ಮಣ್ಣಿನ ಕರೆ). ನಮ್ಮ ತಂಡವು, ಮುಂಬಯಿ, ಬೆಂಗಳೂರು, ನವ ದೆಹಲಿ, ಧಾರವಾಡ, ಹೂವಿನ ಹಡಗಲಿ ಸೇರಿದಂತೆ ಹಲವಾರು ಕಡೆ, ಈ ನಾಟಕವನ್ನು ಪ್ರದರ್ಶಿಸಿದೆ. ಉಡುಪಿಯಲ್ಲಿ ಪ್ರತಿ ವರ್ಷ ನಡೆಯುವ ಕೆಮ್ತೂರು ದೊಡ್ಡಣ್ಣ ಶೆಟ್ಟಿ ತುಳು ನಾಟಕ ಸ್ಫರ್ಧೆಯಲ್ಲಿ, ಕಳೆದ ವರ್ಷ ’ಮಣ್ಣ್ ದ ಲೆಪ್ಪು’ ಗೆ ಅತ್ಯುತ್ತಮ ನಟ- ಪ್ರಥಮ (ಭುವನ ವರ್ಮನ ಪಾತ್ರದಲ್ಲಿ ಶ್ರೀ ಮೋಹನ್ ಮಾರ್ನಾಡ್), ಅತ್ಯುತ್ತಮ ನಟಿ- ಪ್ರಥಮ (ಸುಗಂಧಿನಿಯಾಗಿ ಕು. ವೀಣಾ ಸರಪಾಡಿ), ಅತ್ಯುತ್ತಮ ಸಂಗೀತ - ಪ್ರಥಮ, ಅತ್ಯುತ್ತಮ ಬೆಳಕು - ಪ್ರಥಮ, ಅತ್ಯುತ್ತಮ ವೇಷ ಭೂಷಣ ಹಾಗೂ ರಂಗ ವಿನ್ಯಾಸ - ಪ್ರಥಮ, ಅತ್ಯುತ್ತಮ ನಾಟಕ - ಪ್ರಥಮ ಹಾಗೂ ಅತ್ಯುತ್ತಮ ನಿರ್ದೇಶನ ದ್ವಿತೀಯ ಬಹುಮಾನಗಳು ದೊರೆತಿವೆ.

ನಮ್ಮ ತಂಡದಲ್ಲಿರುವ ಉತ್ತಮ ನಟರ ಕಾರಣದಿಂದಾಗಿ, ಪ್ರದರ್ಶಿಸಿದಲ್ಲೆಲ್ಲ ನಾಟಕವು ಯಶಸ್ಸನ್ನೇ ಕಂಡಿದೆ. ಮುಂಬಯಿ ಕನ್ನಡ ರಂಗಭೂಮಿಯು ಕಂಡ ಒಬ್ಬ ಅದ್ಭುತ ನಟರಾದ ಶ್ರೀ ಮೋಹನ್ ಮಾರ್ನಾಡ್, ವೃದ್ಧ ಭುವನ ವರ್ಮನ ಪಾತ್ರವನ್ನು ಅದೆಷ್ಟು ಪರಿಣಾಮಕಾರಿಯಾಗಿ ನಟಿಸುತ್ತಾರೆಂದರೆ, ಪ್ರೇಕ್ಷಕರಲ್ಲಿ ರೋಮಾಂಚನವುಂಟಾಗುತ್ತದೆ. ನಾಟಕದ ಕೊನೆಯಲ್ಲಿ, ಅವರು ಹುಳುವಿನ ಹಾಗೆ ತೆವಳುತ್ತ ಹೋಗುತ್ತಿದ್ದರೆ, ಪ್ರತಿಯೊಂದು ಪ್ರದರ್ಶನದಲ್ಲೂ, ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆಯುವುದನ್ನು ನೋಡಿದಾಗ, ನಮ್ಮ ಇಡೀ ತಂಡಕ್ಕೆ ಹೆಮ್ಮೆ. ಬೆಂಗಳೂರಿನ ಪ್ರದರ್ಶನದ ನಂತರ ನಡೆದ ಒಂದು ಘಟನೆಯನ್ನು ನಮ್ಮ ತಂಡದವರು ಯಾವತ್ತೂ ಮರೆಯಲಾರರು. ಬೆಂಗಳೂರಿನಲ್ಲಿ ಈ ಪ್ರದರ್ಶನ ಮುಗಿದಾಗ, ಹಿರಿಯ ಮಹಿಳೆಯೊಬ್ಬರು ರಂಗಕ್ಕೆ ಬಂದು, ಮೋಹನ್ ಮಾರ್ನಾಡರ ಎದುರು ನಿಂತು ಈ ಮಾತನ್ನು ಹೇಳಿದರು "ನನಗೆ ತುಂಬ ವಯಸ್ಸಾಯ್ತು. ಯಾವುದೇ ಕ್ಷಣ ಸಾವು ಬರಬಹುದು. ಇಷ್ಟು ದಿನ ಸಾವು ಎಂದರೇನೇ ಭಯ ಆಗ್ತಿತ್ತು. ಆದರೆ ನಿಮ್ಮ ನಾಟಕ ನೋಡಿದ ಮೇಲೆ, ಸಾವಿನ ಭಯ ಹೊರಟು ಹೋಯ್ತು. ಮುದಿತನದ ಆ ನೋವಿಗಿಂತ ಸಾವೇ ಉತ್ತಮ". ಈ ಮಾತನ್ನು ಕೇಳಿದ ನಮಗೆಲ್ಲ Shock ಆಗಿತ್ತು. ಒಂದು ಒಳ್ಳೆಯ ನಾಟಕ, ಒಬ್ಬ ಉತ್ತಮ ನಟ, ಪ್ರೇಕ್ಷಕರ ಮನಸ್ಸಿನಲ್ಲಿ ಅದೆಂತಹ ಪರಿಣಾಮವನ್ನುಂಟುಮಾಡಬಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಮಗೆಲ್ಲ ಅವಿಸ್ಮರಣೀಯ ಅನುಭವ.

1 comment:

Jayalaxmi said...

ನಿಜಕ್ಕು ಮೋಹನ್ ಅಣ್ಣ ಹುಳುವಾಗಿ ತೆವಳುತ್ತಾ ಹೋಗುವ ದೃಶ್ಯ ಮೈ ನವಿರೇಳಿಸುವಂಥದ್ದು! ಪ್ರದರ್ಶನದ ನಂತರ ಆ ಹಿರಿಯರು ಬಂದು ಹೇಳಿದ ಮಾತು ಈ ನಾಟಕ ನೋಡಿದ ಎಲ್ಲ ಪ್ರೇಕ್ಷಕರ ಮನದಲ್ಲೂ ಮೂಡಿ ಮರೆಯಾಗುತ್ತದೆ. ನಿಮ್ಮದು ಇದರಲ್ಲಿ ಪುಟ್ಟ ಪಾತ್ರವಾದರೂ ಅಭಿನಯ ಮನೋಜ್ಞ!