Tuesday, February 17, 2009

’ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ?’ನಮ್ಮಲ್ಲಿ ಶ್ರೀರಂಗರನ್ನೂ, ಅವರ ನಾಟಕಗಳನ್ನೂ ಸಾರಾಸಗಟಾಗಿ ತಳ್ಳಿ ಹಾಕುವ, ತೆಗಳುವ ಹಲವಾರು ನಿರ್ದೇಶಕರಿದ್ದಾರೆ. ನಯಾ ಪೈಸೆ ಉಪಯೋಗವಿಲ್ಲದ ನಾಟಕಶಾಲೆಗಳಲ್ಲಿ ನಿರ್ದೇಶನವನ್ನು ಕಲಿತು (?) ಬಂದಿರುವ ಈ ಮಹಾಶಯರಿಗೆ ಶ್ರೀರಂಗರ ನಾಟಕಗಳೆಂದರೆ ಅದೇಕೋ ಅಲರ್ಜಿ-ಅಸಡ್ಡೆ. ನಿರ್ದೇಶಕನು ಮಾಡಬೇಕಾದ ಕ್ರಿಯೆಗಳನ್ನು, ಶ್ರೀರಂಗರು ತಾವೇ, ನಾಟಕ ರಚನೆಯ ವೇಳೆಯಲ್ಲಿ ಮಾಡಿಬಿಡುತ್ತಾರೆ, ಬ್ರಾಕೆಟ್ ನಲ್ಲಿ ನಿರ್ದೇಶನವನ್ನು ಮಾಡಿರುತ್ತಾರೆ ಎಂಬುದು ಇವರ ತಾತ್ಸಾರಕ್ಕೆ ಕಾರಣ. ಇತ್ತೀಚೆಗೆ ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್.ಎಸ್.ಡಿ) ಕಲಿಸುವ ಹಿರಿಯ ನಿರ್ದೇಶಕರೊಬ್ಬರು ಶ್ರೀರಂಗರನ್ನು ಸಾರಾಸಗಟಾಗಿ ಬಯ್ಯುವಾಗ ತಡೆದುಕೊಳ್ಳಲಾಗಲಿಲ್ಲ. ಒಂದು ಸಣ್ಣ ವಾಗ್ವಾದವೇ ನಡೆಯಿತು. ಅವರು ವಯಸ್ಸಿನಲ್ಲೂ, ಅನುಭವದಲ್ಲೂ ಸಾಕಷ್ಟು ಹಿರಿಯರು ಎಂಬ ಒಂದೇ ಕಾರಣದಿಂದ ವಾದವನ್ನು ಜಗಳದ ಮಟ್ಟಕ್ಕೆ ಏರಿಸಲಿಲ್ಲ ನಾನು. ಶ್ರೀರಂಗರನ್ನಷ್ಟೇ ಬಯ್ದಿದ್ದರೆ ಮುಗಿದುಹೋಗಿರುತ್ತಿತ್ತೇನೋ, ಆದರೆ ಆ ಮಹಾಶಯರು Authorial Intention ಅನ್ನುವುದೇ ಅಪ್ರಸ್ತುತ ಅನ್ನುವಂಥ ಒಂದು silly ಮಾತನ್ನು ಹೇಳಿದರು. ಅಂದರೆ ಈ ನಿರ್ದೇಶಕರ ಪ್ರಕಾರ "ನಾಟಕಕಾರನೊಬ್ಬ, ತನ್ನ ನಾಟಕದ ಮೂಲಕ ಏನು ಹೇಳಬಯಸುತ್ತಾನೋ, ಅದು ಅಪ್ರಸ್ತುತ. ನಾಟಕದ ರಚನೆ ಆದ ನಂತರ, ನಾಟಕಕಾರನಿಗೆ ಅದರ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಆ ನಾಟಕವನ್ನು ಪ್ರದರ್ಶಿಸಲು ಕೈಗೆತ್ತಿಕೊಂಡ ನಿರ್ದೇಶಕನು, ಅದನ್ನು ತನಗೆ ಬೇಕಾದ ಹಾಗೆ interpret ಮಾಡಿಕೊಳ್ಳಬಹುದು".
Interpretation ಬೇರೆ. ಆದರೆ ನಾಟಕಕಾರನ ಮೂಲ ಆಶಯವನ್ನು ನಿರ್ದೇಶಕನೊಬ್ಬ ತಿರುಚಬಹುದೇ? ಹಾಗೆ ಮಾಡಿದರೆ ಅದು ನಾಟಕಕಾರನ ಮೇಲಾಗುವ ಅನ್ಯಾಯವಲ್ಲವೇ? ಶ್ರೀರಂಗರ ನಾಟಕಗಳನ್ನು ಅಷ್ಟು ಸುಲಭವಾಗಿ ತಿರುಚಲು ಸಾಧ್ಯವಿಲ್ಲ, ಹೀಗಾಗಿ ಅವರು ಈ ಮಹಾನ್ ನಿರ್ದೇಶಕರ ಅವಹೇಳನಕ್ಕೆ ಗುರಿಯಾಗಿದ್ದಾರಲ್ಲವೆ? ಇಷ್ಟಾಗಿಯೂ ಈ ನಿರ್ದೇಶಕರು, ಮೇಲ್ಕಂಡ ಮಾತನ್ನು ಹೇಳಿದ್ದು ಎಲ್ಲಿ ಗೊತ್ತೆ? ಇತ್ತೀಚೆಗೆ ನಡೆದ ’ನಾಟಕಾ ರಚನಾ ಶಿಬಿರವೊಂದರಲ್ಲಿ’. ಅಂದರೆ ನಾಟಕಗಳನ್ನು ಬರೆಯುವ ಹುಚ್ಚಿರುವ ಹೊಸ ಪೀಳಿಗೆಯ ಜನರಿಗೆ ಇವರು ಮೊದಲೇ ಎಚ್ಚರಿಕೆಯನ್ನು ನೀಡುತ್ತಿದ್ದಾರೆ "ನೀವೇನಾದ್ರೂ ಬರ್ಕೊಳ್ಳಿ, ರಂಗದಲ್ಲಿ ಕೊನೆಗೆ ಬರುವುದು ನಿಮ್ಮ ಕೃತಿ ಅಲ್ಲ, ನಾವು ತೋರಿಸಿದ್ದು".
ನಾಟಕಕಾರ V/S ನಿರ್ದೇಶಕನ ಈ ಯುದ್ಧ ಹಳೆಯದೇ ಬಿಡಿ. ಈ ಎನ್.ಎಸ್.ಡಿ ಹಾಗೂ ಇಂಥ ನಾಟಕ ಶಾಲೆಗಳು ಹೇಳಿಕೊಳ್ಳುವಂಥ ಯಾವುದೇ ದೊಡ್ಡ ಸಾಧನೆ ಮಾಡಲಾಗದಿದ್ದರೂ, ’ನಾಟಕವೆಂಬುದು ನಟರ ಮಾಧ್ಯಮ’ ಎಂಬ ವಾದವನ್ನು ಸುಳ್ಳು ಮಾಡಲು ಹೊರಟ ಅಸಂಖ್ಯಾತ ನಿರ್ದೇಶಕರನ್ನು ಮಾತ್ರ ಹೊರಹಾಕಿವೆ. ಈ ಮಹಾನ್ ನಿರ್ದೇಶಕರು ಶ್ರೀರಂಗರನ್ನು ಎಷ್ಟೇ ತೆಗಳಲಿ, ಒಂದು ಮಾತು ಮಾತ್ರ ನಿಜ. ಶ್ರೀರಂಗರು, ಆಧುನಿಕ ಕನ್ನಡ ರಂಗಭೂಮಿಯ ಹರಿಕಾರರು. ಮೆಲೊಡ್ರಾಮಾಟಿಕ್ ಕಂಪನಿ ರಂಗಭೂಮಿಯ ಬದಲಾಗಿ ಹವ್ಯಾಸಿ ಕಲಾವಿದರೂ ಪಾಲ್ಗೊಳ್ಳಬಹುದಾದಂಥ ಹೊಸ ರಂಗಭೂಮಿಯನ್ನು ಹುಟ್ಟು ಹಾಕಲು ಪ್ರಯತ್ನಿಸಿದವರೇ ಶ್ರೀರಂಗರು. ೩೪ ದೊಡ್ಡ ಹಾಗೂ ೫೦ ಏಕಾಂಕ ನಾಟಕಗಳನ್ನು ಬರೆದ ಶ್ರೀರಂಗರ ಸಾಧನೆಯ ಕೇವಲ ೧೦% ನಷ್ಟು ಸಾಧನೆಯನ್ನು ಮಾಡಲಾಗದ ಈ ನಿರ್ದೇಶಕರು ಶ್ರೀರಂಗರನ್ನು ಬಯ್ಯುವಾಗ ಮೈ ಉರಿದುಹೋಗಲಾರದೆ?

ಶ್ರೀರಂಗರು ಬರೆದಂಥ ಒಂದು ಅದ್ಭುತ ನಾಟಕ- ’ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೊ?’. ತುಂಬ ಕಡಿಮೆ ನಾಟಕ ತಂಡಗಳು ಈ ನಾಟಕವನ್ನು ಪ್ರದರ್ಶಿಸಿವೆ, ಏಕೆಂದರೆ ಅತ್ಯಂತ ಕಠಿಣವಾದ ನಾಟಕವಿದು. ಪ್ರೇಕ್ಷಕರಿಗೂ ಸುಲಭವಾಗಿ ನಿಲುಕಲಾರದ, ಸುಲಭಗ್ರಾಹ್ಯವಲ್ಲದ ನಾಟಕವಿದು. ನಾಟಕದ ಮುನ್ನುಡಿಯಲ್ಲಿ ಶ್ರೀರಂಗರೇ ಸೂಚಿಸಿದಂತೆ, ಒಂದು ನಾಟಕವನ್ನು ಬರೆಯಲೇಬೇಕು ಎಂಬ ಮಾನಸಿಕ ಒತ್ತಡದಿಂದ, ಶ್ರೀರಂಗರು ಈ ನಾಟಕವನ್ನು ಬರೆಯಲು ಪ್ರಾರಂಭಿಸಿದರು. ನಾಟಕದ ಸಂಭಾಷಣಾ ಅಂಶಗಳು ಒಂದು ತಾರ್ಕಿಕ flow ನಲ್ಲಿ ಇಲ್ಲದೇ, ಅತ್ತಿತ್ತ ಹರಿದುಹೋಗಿವೆ. "ಮನುಷ್ಯ ಬುದ್ಧಿವಂತನಾಗಿರುವುದರಿಂದಲೇ ತೋರಿಕೆಯ ಜಗತ್ತಿನೊಳಗಿರುವನೋ, ಅಥವಾ ಬುದ್ಧಿವಂತನಾದ ಮನುಷ್ಯನೊಳಗೆಯೇ ತೋರಿಕೆ ಹುಟ್ಟಿಕೊಂಡಿರುವುದೋ?" ಎಂಬುದು ಈ ನಾಟಕದ ಜಿಜ್ಞಾಸೆ.
ಇಪ್ಪತ್ನಾಲ್ಕೂ ಗಂಟೆ ಸಾರಾಯಿ ಕುಡಿದು ಬೀಳುತ್ತಿದ್ದ ತಂದೆ, ಹೊಟ್ಟೆ ಹೊರೆಯಲು ಹಾದರ ಮಾಡುವ ತಾಯಿಗೆ ಹುಟ್ಟಿದ ನಾಯಕ, ತನ್ನ ಸುತ್ತಲಿನ ಸಮಾಜದಲ್ಲಿ ಆರ್ಥಿಕ ಅಸಮಾನತೆಗಳನ್ನು ಕಂಡು ರೋಸಿ ಹೋಗುತ್ತಾನೆ. ಮನುಷ್ಯನ ಈ ಪರಿಸ್ಥಿತಿಗೆ ಬಡತನವೇ ಕಾರಣವಿರಬಹುದೆಂದುಕೊಂಡು, ಕಳ್ಳತನ, ಸುಲಿಗೆ ಹಾಗೂ ದರೋಡೆಯ ಮಾರ್ಗವನ್ನು ಹಿಡಿಯುತ್ತಾನೆ. ನಗರಗಳಲ್ಲಿ ಸೈಕಲ್ಲುಗಳನ್ನು ಕದ್ದು, ಹಳ್ಳಿಗಳಲ್ಲಿ ಅವನ್ನು ಮಾರುತ್ತಾನೆ. ಬಂದ ಹಣವನ್ನು ಬಡವರಿಗೆ ಹಂಚಿ, ಅಷ್ಟಿಷ್ಟು ಉಳಿಸಿ ಸ್ಕೂಲ್ ಫೀಸ್ ತುಂಬುತ್ತಾನೆ. ದೊಡ್ಡ ಮನುಷ್ಯನಾಗಿ ಬೆಳೆದು ಬಡವರ ಸಹಾಯ ಮಾಡಬೇಕು ಎನ್ನುವುದು ಆತನ ಹಂಬಲ. ಮುಂದೊಂದು ದಿನ ದರೋಡೆ ತಂಡವೊಂದನ್ನು ಕಟ್ಟಿಕೊಳ್ಳುತ್ತಾನೆ.
ಆದರೆ ಆ ದರೋಡೆ ತಂಡದ ಇತರ ಸದಸ್ಯರು ತನ್ನಂತೆ ಯೋಚನೆ ಮಾಡುತ್ತಿಲ್ಲ, ಅವರು ದರೋಡೆ ಮಾಡುವುದು ತಮ್ಮ ಹೆಂಡತಿ-ಮಕ್ಕಳ ಹೊಟ್ಟೆ ತುಂಬಿಸುವ ಸಲುವಾಗಿ ಎಂಬುದು ಗೊತ್ತಾದಾಗ, ಕನಲಿ ಹೋಗುತ್ತಾನೆ. ಒಂದು ನೌಕರಿಗೆ ಸೇರಿಕೊಳ್ಳುತ್ತಾನೆ. ಅಲ್ಲಿಯೂ ಕೂಡ, ಆ ಬುದ್ಧಿವಂತ ಜನರು, ದರೋಡೆ ಸದಸ್ಯರ ಹಾಗೆಯೇ ಯೋಚನೆ ಮಾಡುತ್ತ, ಕೇವಲ ತಮ್ಮ ಹೆಂಡತಿ-ಮಕ್ಕಳಿಗಾಗಿ ದುಡಿಯುವುದು, ಇನ್ನೊಬ್ಬರನ್ನು ಮೆಚ್ಚಿಸಿ ಹೆಚ್ಚಿನ ಗಳಿಕೆಗಾಗಿ ಮಾತ್ರ ತಮ್ಮ ಬುದ್ಧಿಯ ಉಪಯೋಗವನ್ನು ಮಾಡುವುದು, ಇತ್ಯಾದಿಯನ್ನು ನೋಡಿದಾಗ, ಆತನ ಭ್ರಮನಿರಸನವಾಗುತ್ತದೆ. ಮನುಷ್ಯನ ಸ್ವಭಾವವೇ ಇಂಥದ್ದು, ಇದಕ್ಕೆ ಬಡತನ ಅಥವಾ ಅಜ್ಞಾನ ಕಾರಣ ಅಲ್ಲ ಅನಿಸಿ ನೌಕರಿಯನ್ನೂ ಬಿಟ್ಟುಬಿಡುತ್ತಾನೆ.

"ಮನುಷ್ಯನಿಂದ ಏನೂ ಸಾಧ್ಯವಿಲ್ಲ, ಹಾಗಿದ್ದರೆ ಇನ್ನು ಮಾಡುವುದೇನು?" ಎನ್ನುವುದು ಆತನೆದುರಿಗಿರುವ ಪ್ರಶ್ನೆ.

ಆತ ದರೋಡೆ ಮಾಡುವ ದಿನಗಳಲ್ಲಿ ಒಬ್ಬ ಸಿರಿವಂತ ಮಧ್ಯವಯಸ್ಕನನ್ನು ಕೊಂದಿರುತ್ತಾನೆ. ಅವನನ್ನು ಕೊಂದು, ಪೋಲೀಸರಿಂದ ತಪ್ಪಿಸಿಕೊಂಡು ಓಡುವಾಗ, ಒಬ್ಬ ತರುಣಿಯ ಮನೆಯನ್ನು ಹೊಕ್ಕುತ್ತಾನೆ. ಆಕೆಯ ಗಂಡ ಕೆಲಸದ ನಿಮಿತ್ತ ಯಾವಾಗಲೂ ಪರ ಊರಿಗೆ ತಿರುಗುವವ. ತನ್ನ ಮನೆಗೆ ಬಂದಿರುವ ನಾಯಕನತ್ತ ಈ ತರುಣಿ ಆಕರ್ಷಿತಳಾಗಿರುತ್ತಾಳೆ. ತನ್ನನ್ನು ಪೋಲೀಸರಿಂದ ಕಾಪಾಡಿದ ತರುಣಿಗೆ, ನಾಯಕ ಬಂಗಾರದ ಬಳೆಯೊಂದನ್ನು ಕೊಡುತ್ತಾನೆ. ಮರುದಿನ ಮರಳಿ ಬಂದ ಆ ತರುಣಿಯ ಗಂಡ ಆ ಬಳೆಯನ್ನು ನೋಡಿ ಅವಳ ಮೇಲೆ ಸಂದೇಹಪಡುತ್ತಾನೆ. ಆಕೆ ಆತ್ಮ ಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಅವಳ ನೆರೆಮನೆಯವ, ಅವಳು ಆತ್ಮ ಹತ್ಯೆ ಮಾಡಿಕೊಳ್ಳಲಿಲ್ಲ, ಅವಳ ಗಂಡ, ಅವಳನ್ನು ಕೊಂದ ಎಂದು ಹೇಳುತ್ತಾನೆ. ಸಿಟ್ಟಿಗೆದ್ದ ನಾಯಕ, ಆ ತರುಣಿಯ ಗಂಡನನ್ನೂ ಕೊಲ್ಲುತ್ತಾನೆ.
ಈಗ ಆ ಮಧ್ಯವಯಸ್ಕ, ತರುಣಿ ಹಾಗೂ ತರುಣರ ಪ್ರೇತಗಳು, ನಾಯಕನ ಕನಸಿನಲ್ಲಿ ಬಂದು ಆತ ಮಾಡಿದ ತಪ್ಪುಗಳನ್ನು ಆತನಿಗೆ ತಿಳಿಸುತ್ತಿದ್ದಾರೆ. ಬುದ್ಧಿ ಎಂಬುದೇ ಮನುಷ್ಯನ ಶತ್ರು ಎಂಬುದಾಗಿ ಹೇಳುತ್ತಾರೆ.
ಇಷ್ಟೆಲ್ಲ ಆದರೂ ’ಸಮಾನತೆ’ ಎಂಬುದನ್ನು ಸಾಧಿಸಲು ಬೇಕಾದ ಸೂತ್ರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಆತ ಬಿಡುವುದಿಲ್ಲ. ಬಡವರಿಗೆ ಸಹಾಯ ಮಾಡಿ, ಜನಪ್ರಿಯನಾಗುತ್ತಾನೆ. ರಾಜಕಾರಣಿಯಾಗುತ್ತಾನೆ. ಆದರೂ ಬಡತನದ ನಿರ್ಮೂಲನೆ ಸಾಧ್ಯವಾಗದಿರುವುದರಿಂದ ಸಾವಿರಾರು ಬಡವರನ್ನು ಕೊಂದು, ’ಬಡತನದ ನಿರ್ಮೂಲನೆ’ ಆಯ್ತು ಎನ್ನುವ ಭ್ರಮೆಗೆ ಒಳಗಾಗುತ್ತಾನೆ. ಆದರೆ ಜೀವದಿಂದಿರೋ ಹಕ್ಕು ಮನುಷ್ಯನಿಗೆ ಸದಾ ಕಾಲದ್ದು ಎಂಬ ಜ್ಞಾನೋದಯವಾದಾಗ, ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗೆ ನಾಟಕ ಅಂತ್ಯಗೊಳ್ಳುತ್ತದೆ.
ಮನುಷ್ಯನಲ್ಲಿರುವ ಬುದ್ಧಿ, ತೀರಾ ತೋರಿಕೆಯ ಸ್ವರೂಪದ್ದು ಹಾಗೂ ಅದಕ್ಕೆ ನಿಜತ್ವದ ಗುಣಗಳಿಲ್ಲ ಎಂಬುವುದು ಶ್ರೀರಂಗರ ಈ ನಾಟಕದ ತಿರುಳಾಗಿದೆ.

ಇಂದಿನ ಜಗತ್ತಿನಲ್ಲಿ ನಡೆಯುತ್ತಿರುವ ಅನಾಹುತಗಳಿಗೆಲ್ಲ ಕಾರಣ ಮನುಷ್ಯನ ಬುದ್ಧಿಯೇ ಅಲ್ಲವೆ? ಒಂದು ಕೊಟ್ಟಿಗೆಯಲ್ಲಿ ಹತ್ತು ಹಸುಗಳನ್ನು ಕಟ್ಟಿಟ್ಟರೆ, ಅವು ತಮ್ಮ ಮುಂದಿರುವ ಮೇವನ್ನು ಮೇಯುತ್ತ, ಸಮಾಧಾನದಿಂದಿರುತ್ತವೆ. ಆದರೆ ಇಬ್ಬರೇ ಮನುಷ್ಯರಲ್ಲಿ ಇದು ಸಾಧ್ಯವಿಲ್ಲ ಎಂದು ಶ್ರೀರಂಗರು ಹೇಳುತ್ತಾರೆ. ಅದೆಷ್ಟು ಅದ್ಭುತವಾದ ಕಲ್ಪನೆಯಿದು. ಇಂತಹ ಅಸಾಧಾರಣ ಕಲ್ಪನೆಗಳನ್ನು, ಅತ್ಯಂತ ಸುಲಭವಾಗಿ ನಾಟಕದಲ್ಲಿ ಕಟ್ಟುವ ಶ್ರೀರಂಗರನ್ನು ತೆಗಳುವ ನಿರ್ದೇಶಕೋತ್ತಮರ ಹೇಳಿಕೆಗಳನ್ನು ಖಂಡಿಸದೇ ಇರಲು ಸಾಧ್ಯವೇ?

ಮುಂಬಯಿ ಕರ್ನಾಟಕ ಸಂಘದ ಕಲಾಭಾರತಿ ತಂಡವು ಕೆಲವು ವರ್ಷಗಳಿಂದ ಈ ನಾಟಕವನ್ನು ಪ್ರದರ್ಶಿಸುತ್ತಲೇ ಇದೆ. ನಾಯಕನ ಅತ್ಯಂತ ಸಂಕೀರ್ಣ ಪಾತ್ರವನ್ನು ನಿರ್ವಹಿಸುವ ಅವಕಾಶ ನನ್ನದಾಗಿದೆ. ಮುಂಬಯಿಯ ಮೈಸೂರು ಎಸೋಸಿಯೇಶನ್ನಿನ ಸಭಾಗೃಹದಲ್ಲಿ, ಈ ನಾಟಕದ ಪ್ರಥಮ ಪ್ರದರ್ಶನವಾದಾಗ, ಶ್ರೀರಂಗರ ಪುತ್ರಿಯರಾದ ಉಶಾ ದೇಸಾಯಿ ಹಾಗೂ ಶಶಿ ದೇಶಪಾಂಡೆ (ಖ್ಯಾತ ಆಂಗ್ಲ ಲೇಖಕಿ) ಉಪಸ್ಥಿತರಿದ್ದರು. ನಾಟಕದ ನಂತರ ಅವರು ವೇದಿಕೆಗೆ ಆಗಮಿಸಿ ’ಇಂಥದ್ದೊಂದು ಉತ್ತಮ ನಾಟಕವನ್ನು ನಮ್ಮ ತಂದೆಯವರು ಬರೆದಿದ್ದರು ಎಂಬುದು ನಮಗೇ ಗೊತ್ತಿರಲಿಲ್ಲ’ ಎಂದು ಹೇಳಿದ್ದು, ನಮ್ಮ ತಂಡಕ್ಕೆ ಸಾರ್ಥಕ್ಯವನ್ನು ನೀಡಿತ್ತು.

1 comment:

jayalaxmi said...

ನಿಜ,ಶ್ರೀರಂಗರು ಕನ್ನಡ ರಂಗಭೂಮಿಗೆ ಒಂದು ಹೊಸ ಆಯಾಮ ಒದಗಿಸಿಕೊಟ್ಟವರು.ತಮ್ಮ ಇಂಟು ಬ್ರ್ಯಾಕೇಟ್ ಮೂಲಕ ನಿರ್ದೇಶಕನ ಕಲ್ಪನೆಯನ್ನು ಕನ್ನಡದಲ್ಲಿ ಹುಟ್ಟುಹಾಕಿದವರೇ ಶ್ರೀರಂಗರು.ಅವರ ಇಂಟು ಬ್ರ್ಯಾಕೇಟ್ ಕುರಿತು ತುಂಬಾ ಜನ ಉಡಾಫೆಯ ಮಾತುಗಳನ್ನಾಡುವಾಗ ನಿಜಕ್ಕೂ ಆ ಜನಗಳ ಸಣ್ಣತನದ ಬಗ್ಗೆ ಕನಿಕರ ಹುಟ್ಟುತ್ತದೆ. ಲೇಖನ ಚೆನ್ನಾಗಿದೆ,ಆದ್ರೆ ಎನ್ ಎಸ್ ಡಿ ಬಗ್ಗೆ ನೀವೂ ಅಷ್ಟು ಲಘುವಾಗಿ ಬರೀದಿದ್ರೆ ಒಳ್ಳೆದಿರ್ತಿತ್ತು.ಆಗ ಇದು ಇನ್ನೂ ಉತ್ತಮ ಲೇಖನವೆನಿಸುತ್ತಿತ್ತು. ನಿಮ್ಮ "ನೀ ಮಾಯೆಯೊಳಗೊ?ನಿನ್ನೊಳು ಮಾಯೆಯೊ?" ನಾಟಕದಲ್ಲಿನ ಅಭಿನಯ ನೋಡಿ ಶ್ರೀರಂಗರ ಮತ್ತು ನಿಮ್ಮ ಅಭಿಮಾನಿ ಆದವಳು ನಾನು.ಈ ನಾಟಕ ನೋಡಿ ಆರು ವರ್ಷಗಳಾದರೂ ನಿನ್ನೆ ಮೊನ್ನೆ ನೋಡಿದಷ್ಟು ಪ್ರಭಾವಶಾಲಿ ನಿಮ್ಮ ಅಭಿನಯ ಮತ್ತು ಭರತ್‍ಕುಮಾರ್ ಪೊಲಿಪು ಅವರ ನಿರ್ದೇಶನ. ಶುಭವಾಗಲಿ ನಿಮಗೆ.